ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಶಾಸಕ ಎನ್.ಮಹೇಶ್ ಒತ್ತಾಯ
ಚಾಮರಾಜನಗರ

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಶಾಸಕ ಎನ್.ಮಹೇಶ್ ಒತ್ತಾಯ

May 4, 2021

ಕೊಳ್ಳೇಗಾಲ,ಮೇ3-ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ 3145ಮಂದಿಯಿಂದ ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿದ್ದು ಸರ್ಕಾರ ಕೋವಿಡ್ ಹಿನ್ನೆಲೆ ಕಾರ್ಮಿಕರಿಗೆ ನೀಡುವ 289 ಕೂಲಿ ಬದಲಿಗೆ 500 ನೀಡಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಖಾತ್ರಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ 7 ಗ್ರಾಪಂನಲ್ಲಿ 8 ಕೆರೆಗಳಿದ್ದು, 20245 ಮಂದಿ ಕೆಲಸ ಮಾಡುತ್ತಿದ್ದಾರೆ. 7 ಪಂಚಾಯ್ತಿ ವ್ಯಾಪ್ತಿಯಲ್ಲಿ 8 ಕೆರೆ ಇವೆ. ಯಳಂದೂರು ತಾಲೂಕಲ್ಲಿ 57 ಉದ್ಯೋಗ ಖಾತ್ರಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ 12 ಗ್ರಾಪಂ ಹಾಗೂ ಸಂತೇಮರಳ್ಳಿ 11 ಗ್ರಾಪಂ ನಲ್ಲಿ 16 ಕಾಮಗಾರಿ ಕೆಲಸ ಆಗುತ್ತಿದ್ದು, ಒಟ್ಟಾರೆ ಖಾತ್ರಿಯಿಂದ 3145 ಮಂದಿ ಕೆಲಸ ಮಾಡುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಖಾತ್ರಿ ಯೋಜನೆ ನಿಜಕ್ಕೂ ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ. ಉದ್ಯೋಗವಿಲ್ಲದೆ ಕುಳಿತವರಿಗೆ ಸಣ್ಣ ಪ್ರಮಾಣದಲ್ಲಿ ಕೈ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಖಾತ್ರಿ ನಿಯಮದ ಪ್ರಕಾರ ನೀಡುವ 289 ರೂ. ಕೂಲಿಯನ್ನು 500 ರೂ.ಗೆ ಏರಿಸಿ, ಪುರುಷ ಕಾರ್ಮಿಕರೂ ಸಹಾ ಕೆಲಸಕ್ಕೆ ಬರಲು ಅನುವು ಮಾಡಬೇಕು, ಕೋವಿಡ್ ನಿಯಂತ್ರಣದ ಬಳಿಕ ಕೂಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು.

Translate »