ಚಾಮರಾಜನಗರ, ಮೇ 3(ಎಸ್‍ಎಸ್)- ಜಿಲ್ಲೆಯಲ್ಲಿ ಒಂದೇ ದಿನ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟ ಹಿನ್ನೆಲೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಸೋಮವಾರ ಸಂಜೆ ನಗರಕ್ಕೆ ಆಗಮಿಸಿ ಸಚಿವರಾದ ಡಾ. ಕೆ. ಸುಧಾಕರ್, ಎಸ್. ಸುರೇಶ್‍ಕುಮಾರ್ ಮತ್ತು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಜೊತೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕೊರೊನಾ ಒಂದು ಸಾಂಕ್ರಾಮಿಕ ರೋಗ. ಇದನ್ನು ತೊಡೆದು ಹಾಕಲು ಸರ್ವ ಪ್ರಯತ್ನ ಮಾಡುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿ ಸಾವನ್ನಪ್ಪಿರುವುದು ಆಕ್ಸಿಜನ್ ಕೊರತೆಯಿಂದಲ್ಲ. ನಾನು ನೇರವಾಗಿ ಇಲ್ಲಿ ಇರದೇ ಇದ್ದರೂ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ.
ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ನಗರದಲ್ಲೇ ಆಕ್ಸಿಜನ್ ಘಟಕವಿದೆ. ಅಲ್ಲಿಗೆ ಆಕ್ಸಿಜನ್ ಸರಬರಾಜಾಗುತ್ತಿದೆ. ಅದರ ನಿರ್ವಹಣೆಗೆ ಮುದ್ಗಿಲ್ ಎಂಬ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರು ಉಸ್ತುವಾರಿ ವಹಿಸಿಕೊಂಡಿ ದ್ದಾರೆ. ಯಾರೂ ಕೂಡ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ನಾನು ಕಾಂಗ್ರೆಸ್ ಶಾಸಕರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದಿದ್ದರೆ ಏನು ಮಾಡಲಾಗುತ್ತಿತ್ತು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಪ್ರಶ್ನಿಸಿದರು.