ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತ್ಯಜಿಸಿ, ಬಟ್ಟೆ ಕೈಚೀಲ ಬಳಸಿ
ಮೈಸೂರು

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತ್ಯಜಿಸಿ, ಬಟ್ಟೆ ಕೈಚೀಲ ಬಳಸಿ

March 26, 2021

ಮೈಸೂರು, ಮಾ.25(ಎಂಟಿವೈ)- ಮೈಸೂರು ನಗರದಲ್ಲಿ ಏ.5ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಜಿಲ್ಲಾಡಳಿತ ನಿರ್ಧ ರಿಸಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ಮೈಸೂರಿನ ಹೃದಯ ಭಾಗದ ವಾಣಿಜ್ಯ ಮಳಿಗೆಗಳ ಮಾಲೀಕರು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಬಟ್ಟೆ ಬ್ಯಾಗ್ ಬಳಸುವಂತೆ ಗುರುವಾರ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದೇವರಾಜ ಅರಸು ರಸ್ತೆ, ಸಂತೆಪೇಟೆ, ಸಯ್ಯಾಜಿರಾವ್ ರಸ್ತೆ, ವಿನೋಬಾ ರಸ್ತೆ ಮತ್ತಿತರೆಡೆಯ ಮಳಿಗೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಯಾಗುತ್ತಿರುವುದನ್ನು ಮನಗಂಡ ಪಾಲಿಕೆ ಸಿಬ್ಬಂದಿ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ಏ.5ರ ನಂತರ ತ್ಯಾಜ್ಯ ಹಾಕಲು ಪ್ರತಿ ಮಳಿಗೆ ಮುಂದೆ ಕಡ್ಡಾಯವಾಗಿ 30 ಲೀ. ಸಾಮ ಥ್ರ್ಯದ ಡಸ್ಟ್‍ಬಿನ್ ಇಡಬೇಕು, ಗ್ರಾಹಕರಿಗೆ ಬಟ್ಟೆ ಬ್ಯಾಗ್ ಮಾತ್ರ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಉಪ ಮೇಯರ್ ಅನ್ವರ್ ಬೇಗ್, ಪಾಲಿಕೆ ಸದಸ್ಯ ಎಂ.ಡಿ.ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಪರಿಸರ ಅಭಿಯಂತರರಾದ ಮೈತ್ರಿ ಅವರ ನೇತೃತ್ವದ ತಂಡ, ವಾರ್ಡ್ 23ರ ದೇವ ರಾಜ ಅರಸು ರಸ್ತೆಯಲ್ಲಿ ಹೆಚ್ಚು ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತಿದ್ದ ಕೆಲವು ಅಂಗಡಿ ಗಳಿಗೆ ನೀಲಿ ಬಣ್ಣದ(30 ಲೀ.) ಡಸ್ಟ್‍ಬಿನ್ ನೀಡಿತು. ಚಿಕ್ಕ ಗಡಿಯಾರ ಸುತ್ತಮುತ್ತ ತಳ್ಳುವ ಗಾಡಿಗಳ ಹಣ್ಣಿನ ವ್ಯಾಪಾರಿಗಳಿಗೆ ಬಟ್ಟೆ ಬ್ಯಾಗಿನ ಸ್ಯಾಂಪಲ್ ನೀಡಿತು.

ಜಿಲ್ಲಾಡಳಿತ ಏ.5ರಿಂದ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಿದೆ. ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಬ್ಯಾಗ್ ನೀಡÀಬೇಕು. ಏ.5 ರಿಂದ ಪ್ಲಾಸ್ಟಿಕ್ ಕವರ್ ಬಳಸಿದರೆ, ಅಂಗಡಿ ಗಳ ಮುಂದೆ ದೊಡ್ಡ ಡಸ್ಟ್‍ಬಿನ್ ಇಡದಿ ದ್ದರೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ವ್ಯಾಕ್ಸಿನೇಷನ್: 45 ವರ್ಷ ಮೇಲ್ಪಟ್ಟ ವರು ಏ.1ರಿಂದ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಕೊರೊನಾ 2ನೇ ಅಲೆಯಿಂದ ರಕ್ಷಿಸಿಕೊಳ್ಳಲು ಕಡ್ಡಾಯ ವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದು ಕೊಳ್ಳಬೇಕು. ಅನಗತ್ಯ ಗುಂಪುಗೂಡಬಾರದು. ಆರೋಗ್ಯದಲ್ಲಿ ಏರುಪೇರಾದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪಾಲಿಕೆ ತಂಡ ಜಾಗೃತಿ ಮೂಡಿಸಿತು.

ಸ್ವಚ್ಛತಾ ಅಭಿಯಾನ: ಪಾಲಿಕೆ ಸಿಬ್ಬಂದಿ ಜತೆ ಹ್ಯೂಮನ್ ಟಚ್ ಫೌಂಡೇಷನ್ ಸ್ವಯಂಸೇವಕರು ದೇವರಾಜ ಅರಸು ರಸ್ತೆ, ವಿನೋಬಾ ರಸ್ತೆಯಲ್ಲಿ ಅಂಗಡಿಗಳ ಮುಂದೆ, ರಸ್ತೆಬದಿ ಬಿದ್ದಿದ್ದ ಮರು ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು.

Translate »