ಮೈಸೂರು,ಏ.೧೪(ಆರ್‌ಕೆ)-ಮೈಸೂರಿನ ಹೃದಯ ಭಾಗದಲ್ಲಿರುವ ದೇವ ರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಬಿಲ್ಡಿಂಗ್ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸಿ, ಮೂಲ ವಿನ್ಯಾಸ ಉಳಿಸಿಕೊಂಡು ಹೊಸದಾಗಿ ಹಾಲಿ ಮಾದರಿ ಕಟ್ಟಡ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಮಿತಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಈ ಎರಡೂ ಹಳೇ ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ವಿನ್ಯಾಸ ಮತ್ತು ಶೈಲಿ ಉಳಿಸಿಕೊಂಡು ಯಥಾವತ್ತಾಗಿ ಹೊಸ ಕಟ್ಟಡಗಳ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಯಿತು.
ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಬಿಲ್ಡಿಂಗ್ ಪಾರಂಪರಿಕ ಕಟ್ಟಡಗಳಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ಈಗಾಗಲೇ ಅವುಗಳ ಕೆಲ ಭಾಗ ಕುಸಿದಿದ್ದು, ಸಾವು-ನೋವುಗಳಾಗಿವೆ. ಅಲ್ಲಿ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂದು ತಜ್ಞರು ಈ ಹಿಂದೆಯೇ ಅಭಿಪ್ರಾಯಪಟ್ಟಿರುವುದನ್ನು ಕೆಲ ಸದಸ್ಯರು ಉಲ್ಲೇಖಿಸಿ, ಬಾಡಿಗೆದಾರರ ಪ್ರಾಣ ರಕ್ಷಣೆ ಹಿತದೃಷ್ಟಿಯಿಂದ ಈ ಎರಡೂ ಕಟ್ಟಡಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಸರ್ಕಾರದಿಂದ ರಚಿಸಿದ್ದ ಟಾಸ್ಕ್ಫೋರ್ಸ್ ಸಮಿತಿಯು ಸದರಿ ಕಟ್ಟಡಗಳನ್ನು ಬಳಸಲು ಸಾಧ್ಯವಿಲ್ಲ. ಕೆಡವಿ ಹೊಸದಾಗಿ ನಿರ್ಮಿಸುವುದು ಸೂಕ್ತ ಎಂದು ಅಭಿಪ್ರಾಯಿ ಸಿತ್ತು. ಆದರೆ ಪಾರಂಪರಿಕ ತಜ್ಞರು ಈ ಎರಡೂ ಕಟ್ಟಡಗಳೂ ಸದೃಢವಾ ಗಿದ್ದು, ದುರಸ್ತಿ ಮಾಡಿ ನವೀಕರಿಸುವ ಮೂಲಕ ಸಂರಕ್ಷಿಸಬಹುದು ಎಂದು ವರದಿ ನೀಡಿದ್ದನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ವಿಭಿನ್ನ ಅಭಿಪ್ರಾಯಗಳಿದ್ದ ಕಾರಣ ಬಾಡಿಗೆದಾರರೂ ಸಹ ಹಳೇ ಕಟ್ಟಡವನ್ನೇ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರಲ್ಲದೆ, ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಉಚ್ಛ ನ್ಯಾಯಾಲಯವು, ಪ್ರತ್ಯೇಕ ಪಾರಂ ಪರಿಕ ತಜ್ಞರ ಸಮಿತಿಯಿಂದ ವರದಿ ಪಡೆಯಬೇಕೆಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಮಿತಿಯು ಸಮಾಲೋಚನೆ ನಡೆಸಿ ಅಂತಿಮವಾಗಿ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ವಿನ್ಯಾಸದೊಂದಿಗೆ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಯಿತು.
ಪಾರಂಪರಿಕ ಸಮಿತಿ ಕೈಗೊಂಡ ನಿರ್ಧಾರ ಹಾಗೂ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿ, ಅನುಮತಿ ಬಂದ ನಂತರ ಸರ್ಕಾರದ ಅನುಮೋದನೆ ಪಡೆದು ಮುಂದಿನ ಕ್ರಮ ವಹಿಸುವ ಬಗ್ಗೆಯೂ ಸಭೆಯು ಅಭಿಪ್ರಾಯಪಟ್ಟಿತು.
ಈ ಕಟ್ಟಡಗಳನ್ನು ಕೆಡವದೇ ಯಥಾಸ್ಥಿತಿ ಉಳಿಸಿಕೊಂಡು, ದುರಸ್ತಿಗೊಳಿಸಿ ಸಂರಕ್ಷಿಸಿ ಕೊಳ್ಳಬಹುದು ಎಂದು ಕೆಲ ಸದಸ್ಯರು ಅಭಿಪ್ರಾಯಪಟ್ಟಿದ್ದು, ೨೦೨೧ರ ಡಿಸೆಂಬರ್ ಮಾಹೆಯಲ್ಲಿ ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ಮೇಯರ್ ಸಮ್ಮೇಳನ ಹಾಗೂ ಕಾಶಿವಿಶ್ವನಾಥ ಧಾಮ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಣದಲ್ಲಿ ಯಾವುದೇ ಹರಿಟೇಜ್ ಕಟ್ಟಡಗಳನ್ನು ನೆಲಸಮಗೊಳಿಸಬೇಡಿ, ನವೀಕರಣ ಮಾಡಿ ಸಂರಕ್ಷಿಸಬೇಕೆAದು ಮೇಯರ್‌ಗಳಿಗೆ ಸಲಹೆ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.
ಆದರೆ ಬಹುತೇಕ ಸದಸ್ಯರು, ಸದೃಢತೆ ಕಳೆದುಕೊಂಡು ಶಿಥಿಲಾವಸ್ಥೆಯಲ್ಲಿರುವುದ ರಿಂದ ಜನರ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆ ಇರುವ ಕಾರಣ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಬಿಲ್ಡಿಂಗ್‌ಗಳನ್ನು ನೆಲಸಮಗೊಳಿಸುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು. ಆದರೆ, ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಇತ್ತೀಚೆಗಷ್ಟೇ ಪಾರಂಪರಿಕ ನಗರ ಮೈಸೂರಿನಲ್ಲಿರುವ ಅತೀ ಹಳೆಯದಾದ ಈ ಕಟ್ಟಡಗಳನ್ನು ನೆಲಸಮ ಗೊಳಿಸಬೇಕಾಗಿಲ್ಲ. ಬದಲಾಗಿ ರಿಪೇರಿ ಮಾಡಿ ಉಳಿಸಿಕೊಳ್ಳಬಹುದು. ಸರ್ಕಾರ ತಮಗೆ ಜವಾಬ್ದಾರಿ ವಹಿಸಿದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದಿಂದಲೇ ಕಾಮಗಾರಿ ಕೈಗೊಂಡು ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡಗಳನ್ನು ದುರಸ್ಥಿಗೊಳಿಸಿ ಸಂರಕ್ಷಿಸುತ್ತೇವೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ದೇವರಾಜ ಮಾರುಕಟ್ಟೆ ಮಳಿಗೆ ಬಾಡಿಗೆದಾರರಿಗೆ ಪರ್ಯಾಯ ವ್ಯವಸ್ಥೆ ಶಾಸಕರ ನೇತೃತ್ವದಲ್ಲಿ ಮುಂದಿನ ವಾರ ಸಭೆ: ಲಕ್ಷಿö್ಮÃಕಾಂತ ರೆಡ್ಡಿ
ಮೈಸೂರು: ಹೊಸ ಕಟ್ಟಡ ನಿರ್ಮಿಸುವವರೆಗೆ ದೇವರಾಜ ಮಾರುಕಟ್ಟೆ ಮಳಿಗೆ ಬಾಡಿಗೆದಾರರು ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಮಾಡ ಲಾಗುವುದು ಎಂದು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತ ರೆಡ್ಡಿ ತಿಳಿಸಿದ್ದಾರೆ.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್‌ಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಒಂದು ವೇಳೆ ಅದು ಸಾಕಾರಗೊಂಡಲ್ಲಿ ಪ್ರಸ್ತುತ ಇರುವ ದೇವರಾಜ ಮಾರುಕಟ್ಟೆ ಮಳಿಗೆ ಬಾಡಿಗೆದಾರರಿಗೆ ಪರ್ಯಾಯ ಸ್ಥಳ ಗುರ್ತಿಸಬೇಕಾಗುತ್ತದೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಬಾಡಿಗೆದಾರರನ್ನು ಬೇರೆಡೆಗೆ ಸ್ಥಳಾಂತರಿಸಿ, ಕಟ್ಟಡ ಪೂರ್ಣಗೊಂಡ ನಂತರ ಅವರಿಗೇ ಹೊಸ ಕಟ್ಟಡದಲ್ಲಿ ಮಳಿಗೆಗಳನ್ನು ನೀಡಲಾಗುವುದು. ಈ ಬಗ್ಗೆ ಶಾಸಕರ ನೇತೃತ್ವದಲ್ಲಿ ಮುಂದಿನ ವಾರ ಮಳಿಗೆದಾರರ ಸಭೆ ಕರೆದು ಮನವರಿಕೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು. ನ್ಯಾಯಾಲಯ ಹಾಗೂ ಸರ್ಕಾರದಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಹೊಸ ಕಟ್ಟಸ ನಿರ್ಮಿಸಲು ಪ್ರಕ್ರಿಯೆ ಆರಂಭವಾಗಲಿದೆ. ಅದಕ್ಕೆ ಪೂರಕವಾಗಿ ಅಗತ್ಯವಿರುವ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಳ್ಳಲಿದೆ ಎಂದು ಲಕ್ಷಿö್ಮÃಕಾಂತ ರೆಡ್ಡಿ ತಿಳಿಸಿದರು.
ಸರ್ಕಾರದ ಅನುಮೋದನೆ ಬಳಿಕ ಕ್ರಮ
ಹೆರಿಟೇಜ್ ಕಮಿಟಿ ನಿರ್ಣಯದಂತೆ ನ್ಯಾಯಾಲಯದ ಅನುಮತಿ ಮತ್ತು ಸರ್ಕಾರದ ಅನುಮತಿ ಬಂದ ನಂತರ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತಿಳಿಸಿದ್ದಾರೆ. ಈ ಹಿಂದೆ ಎರಡು ಸಮಿತಿಗಳು ವಿಭಿನ್ನ ವರದಿ ನೀಡಿ ಶೀಫಾರಸ್ಸು ಮಾಡಿದ್ದರಿಂದ ಉಂಟಾಗಿದ್ದ ಗೊಂದಲದಿAದಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ನ್ಯಾಯಾ ಲಯವೇ ರಚಿಸಿದ್ದ ಪಾರಂಪರಿಕ ತಜ್ಞರ ಸಮಿತಿ ಶಿಫಾರಸ್ಸು ಮಾಡಿರುವ ಕಾರಣ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಬಿಲ್ಡಿಂಗ್ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲಾಗುವುದು. ಹೊಸ ಕಟ್ಟಡ ನಿರ್ಮಿಸುವವರೆಗೆ ದೇವರಾಜ ಮಾರುಕಟ್ಟೆ ಅಂಗಡಿ ಮಳಿಗೆದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದ್ದು, ಈ ಬಗ್ಗೆ ಸಭೆ ನಡೆಸಿ ಚರ್ಚಿಸಿ ಕ್ರಮ ವಹಿಸುತ್ತೇವೆ ಎಂದು ನಾಗೇಂದ್ರ ತಿಳಿಸಿದರು.