ಚಿರತೆ ದಾಳಿ: ಬಾಲಕನ ರುಂಡವಿಲ್ಲದ ಶವ ಪತ್ತೆ
ಮೈಸೂರು

ಚಿರತೆ ದಾಳಿ: ಬಾಲಕನ ರುಂಡವಿಲ್ಲದ ಶವ ಪತ್ತೆ

January 23, 2023

ತಿ.ನರಸೀಪುರ, ಜ.22(ಎಂಟಿವೈ)-ಚಿರತೆ ದಾಳಿ ನಡೆಸಿ ಹೊತ್ತೊಯ್ದಿದ್ದ 11 ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂ ದನ ಮುಗಿಲು ಮುಟ್ಟಿತ್ತು.

ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದ ನಿವಾಸಿ ದಶಕಂಠ ಎಂಬುವರ ಪುತ್ರ ಜಯಂತ್ ಶನಿವಾರ ರಾತ್ರಿ 8.30ರಲ್ಲಿ ಅಂಗಡಿಗೆ ತೆರಳಿದ್ದಾಗ ನಿಗೂಢವಾಗಿ ಕಾಣೆಯಾಗಿದ್ದ. ಗ್ರಾಮದ ಮುಖ್ಯ ರಸ್ತೆಯಲ್ಲಿ ರಕ್ತದ ಕಲೆ ಚೆಲ್ಲಿದ್ದರಿಂದ 11 ವರ್ಷದ ಬಾಲಕ ಜಯಂತ್‍ನನ್ನು ಚಿರತೆ ಹೊತ್ತೊಯ್ದಿರಬಹುದು ಎಂದು ಶಂಕಿಸಲಾಗಿತ್ತು. ಇಂದು ಬೆಳಗ್ಗೆ ಶೋಧನಾ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಘಟನಾ ಸ್ಥಳದಿಂದ 1 ಕಿ.ಮೀ. ಅಂತರದಲ್ಲಿ ಪೊದೆಯೊಂದರಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. ಚಿರತೆ ದಾಳಿ ವೇಳೆ ಬಾಲಕ ಜಯಂತ್‍ನ ಕುತ್ತಿಗೆಗೆ ಬಲವಾಗಿ ಕಚ್ಚಿದ್ದರಿಂದ ಆತನ ರುಂಡ ಬೇರ್ಪಟ್ಟಿದ್ದು, ಅದನ್ನು ಚಿರತೆ ಕೊಂಡೊ ಯ್ದಿರಬಹುದು ಎಂದು ಶಂಕಿಸಲಾಗಿದೆ.

ಮುಗಿಲು ಮುಟ್ಟಿದ ಆಕ್ರೋಶ: ಪೊದೆಯೊಂದರಲ್ಲಿ ಬಾಲಕ ಜಯಂತ್ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆಕ್ರೋಶ ಮುಗಿಲು ಮುಟ್ಟಿತು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅರಣ್ಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೂ ಮೃತ ಬಾಲಕನ ತಂದೆ ದಶಕಂಠ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ
ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಚಿರತೆ ಹಾವಳಿ ಬಗ್ಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇನ್ನೆಷ್ಟು ಮಂದಿ ಬಲಿಗಾಗಿ ಕಾಯುತ್ತಿದ್ದೀರಾ? ಇದೇ ರೀತಿ ಚಿರತೆ ಹಾವಳಿಗೆ ಅಮಾಯಕರು ಬಲಿಯಾಗುತ್ತಿದ್ದರೆ, ಅಧಿಕಾರಿಗಳಿಗೆ ಗ್ರಾಮಸ್ಥರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

5 ಲಕ್ಷ ರೂ. ಪರಿಹಾರ: ಚಿರತೆಗೆ ಬಲಿಯಾದ ಜಯಂತ್ ಪೋಷಕರಿಗೆ ಮೈಸೂರು ವೃತ್ತದ ಸಿಎಫ್ ಡಾ.ಮಾಲತಿಪ್ರಿಯ ಅವರು ಐದು ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ಕನ್ನು ಮೊದಲ ಹಂತದಲ್ಲಿ ವಿತರಿಸಿದರು. ಮರಣೋ ತ್ತರ ಪರೀಕ್ಷೆ ನಡೆಸಿ ವರದಿ ಬಂದ ನಂತರ ಉಳಿದ ಮೊತ್ತವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ಆದರೂ ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕನನ್ನು ಕಳೆದುಕೊಂಡಿ ದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರುಂಡದ ಬಗ್ಗೆ ಸುಳಿವಿಲ್ಲ: ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಬಾಲಕ ಜಯಂತ್‍ನ ರುಂಡ ದಿನವಿಡೀ ಶೋಧಿಸಿದರೂ ಸಿಗಲಿಲ್ಲ. ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮುಂಡ ಸಿಕ್ಕಿದ ಸ್ಥಳದಿಂದ ವಿವಿಧೆಡೆ ಸಾಕಷ್ಟು ದೂರದವರೆಗೆ ಹುಡುಕಾಟ ನಡೆಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಅನಿವಾರ್ಯವಾಗಿ ಮಗನ ರುಂಡವಿಲ್ಲದ ಮೃತದೇಹವನ್ನು ಪಡೆಯಬೇಕಾಯಿತು.

ಮೃತದೇಹ ಸಿಕ್ಕ ಸ್ಥಳವನ್ನು ಮಹಜರು ನಡೆಸಿದ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂ ತರಿಸಿ ಮರಣೋ ತ್ತರ ಪರೀಕ್ಷೆಗೆ ಕ್ರಮ ಕೈಗೊಂಡರು. ಬಳಿಕ ವಾರಸುದಾರರಿಗೆ ಮೃತದೇಹ ಒಪ್ಪಿಸಿದರು.

Translate »