ತಿ.ನರಸೀಪುರದಲ್ಲಿ ರಸ್ತೆ ತಡೆ, ಅಧಿಕಾರಿಗಳ ವಿರುದ್ಧ ಆಕ್ರೋಶ
ಮೈಸೂರು

ತಿ.ನರಸೀಪುರದಲ್ಲಿ ರಸ್ತೆ ತಡೆ, ಅಧಿಕಾರಿಗಳ ವಿರುದ್ಧ ಆಕ್ರೋಶ

January 23, 2023

ತಿ.ನರಸೀಪುರ, ಜ.22- ತಾಲೂಕಿನಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿರುವ ನರಭಕ್ಷಕ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲ ರಾಗಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಭಾನುವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕಪಿಲಾ ನದಿ ಸೇತುವೆ ಮೇಲೆ ಜಮಾ ಯಿಸಿದ ನೂರಾರು ಪ್ರತಿಭಟನಾಕಾರರು ರಸ್ತೆಗೆ ಅಡ್ಡ ಲಾಗಿ ಟ್ರಾಕ್ಟರ್ ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಪರಿಣಾಮ ನೂರಾರು ವಾಹನಗಳು ಕಿಮೀಗಟ್ಟಲೆ ನಿಂತಲ್ಲೇ ನಿಂತಿದ್ದರಿಂದ ಸಾರ್ವಜನಿಕ ಓಡಾಟಕ್ಕೆ ತೀವ್ರ ತೊಂದರೆಯಾಯಿತು. ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸಿದ್ದ ಸಾವಿರಾರು ಪ್ರಯಾಣಿಕರು ಕಾಲ್ನಡಿಗೆಯಲ್ಲಿ ಪಟ್ಟಣ ಸೇರುವ ಪರಿಸ್ಥಿತಿ ನಿರ್ಮಾಣವಾಯಿತು.

ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಪಿ.ಸುಬ್ರ ಹ್ಮಣ್ಯ, ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್ ನೇತೃತ್ವ ದಲ್ಲಿ ಪ್ರತಿಭಟನಾನಿರತರು ನರಹಂತಕ ಚಿರತೆ ಸೆರೆ ಹಿಡಿಯಲು ವಿಫಲರಾದ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿಭಟನಾ ಸ್ಥಳಕ್ಕೆ ಉಸ್ತುವಾರಿ ಸಚಿವರು ಬಾರದ ಹೊರತು ಪ್ರತಿಭಟನೆ ಹಿಂಪಡೆಯಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದ ಪರಿಣಾಮ ಭಾರೀ ತೊಂದರೆ ಎದುರಾಯಿತು. ಬೆಳಗ್ಗೆ 8.30ರಿಂದ ಆರಂಭಗೊಂಡ ರಸ್ತೆ ತಡೆ ಮಧ್ಯಾಹ್ನ 1 ಗಂಟೆಯಾದರೂ ಮುಗಿಯದ ಕಾರಣ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಅಶ್ವಿನ್‍ಕುಮಾರ್, ಜಿಲ್ಲಾಧಿಕಾರಿ ರಾಜೇಂದ್ರ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಳೆದ 3 ತಿಂಗಳಿಂದ ಚಿರತೆ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ. ಮೊದಲ ಪ್ರಕರಣದ ವೇಳೆಯೇ ಕ್ರಮವಹಿಸಲು ಒತ್ತಾಯಿಸಿದ್ದೆವು. ಆದರೆ ಅರಣ್ಯ ಇಲಾಖೆ ಗಮನ ಹರಿಸದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಅಶ್ವಿನ್‍ಕುಮಾರ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೂ ಸರ್ಕಾರ ಸೂಕ್ತ ಗಮನಹರಿಸಿಲ್ಲ. ಅಗತ್ಯ ಕ್ರಮ ಕೈಗೊಂಡಿಲ್ಲ. ಇದರ ಫಲ ಇಂದು ಪ್ರತಿಭಟನೆ ಹಂತ ತಲುಪಿದೆ. ಸರ್ಕಾರ ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವಾಗ ಒಂದೇ ಕಂತಿನಲ್ಲಿ ನೀಡದೆ 3 ಕಂತಿನ ರೂಪದಲ್ಲಿ ನೀಡುತ್ತಿದೆ. ಇದನ್ನು ನಿಲ್ಲಿಸಿ ಒಂದೇ ಕಂತಿನಲ್ಲಿ ಪರಿಹಾರದ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಪಿ.ಸುಬ್ರಹ್ಮಣ್ಯ ಮಾತನಾಡಿ, ನರಸೀಪುರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳು ಮನುಷ್ಯರು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಲೇ ಇದೆ. ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಹಾಗಾದರೆ ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ತನಕ ಚಿರತೆ ದಾಳಿ ತಪ್ಪಿಸಲು ಯಾವ ಕ್ರಮ ಕೈಗೊಂಡಿದ್ದಾರೆ. ನಿಮ್ಮ ಸುಳ್ಳು ಭರವಸೆಗಳು, ಪರಿಹಾರಗಳು ನಮಗೆ ಬೇಡ. ಚಿರತೆಗಳನ್ನು ಕೊಂದು ಹಾಕಿಯಾದರು ತಾಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಿ ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಹೊರಳಹಳ್ಳಿ, ಮುಸುವಿನಕೊಪ್ಪಲು, ಕನ್ನಾಯಕನಹಳ್ಳಿ, ದೊಡ್ಡಬಾಗಿಲು, ಕೈಯಂಬಳ್ಳಿ, ಗ್ರಾಮದ ನಿವಾಸಿಗಳು ಹಾಗೂ ತಾಲೂಕು ಕುರುಬರ ಸಂಘ ನಿರ್ದೇಶಕರು, ವಿವಿಧ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.

Translate »