ಪ್ರಸ್ತುತ ಸಾಹಿತ್ಯ ಕೋಮುವಾದ, ಜಾತೀಯತೆ ಸೋಂಕಿಗೆ ಸಿಲುಕಿದೆ
ಮೈಸೂರು

ಪ್ರಸ್ತುತ ಸಾಹಿತ್ಯ ಕೋಮುವಾದ, ಜಾತೀಯತೆ ಸೋಂಕಿಗೆ ಸಿಲುಕಿದೆ

January 23, 2023

ಮೈಸೂರು, ಜ.22(ಪಿಎಂ)- ಹಿಂದಿನ ನಮ್ಮ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಕ ವಾಗಿದ್ದರೆ, ಪ್ರಸ್ತುತದಲ್ಲಿ ಕೋಮುವಾದ, ಜಾತೀ ಯತೆ ಎಂಬ ಸೋಂಕಿಗೆ ಸಿಲುಕಿ ಬಳಲುವಂತಾ ಗಿದೆ ಎಂದು ಉದ್ಯಮಿಗಳು, ರೈತರು, ಅಂಕಣ ಕಾರರೂ ಆದ ಭಾರತೀಯ ಸೇನಾ ನಿವೃತ್ತ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನ ಶತಮಾ ನೋತ್ಸವ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ (ಎಂಎಲ್‍ಎ) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಆಂಗ್ಲ ಸಾಹಿತ್ಯದ ಗೋಷ್ಠಿ-ಸಂವಾದದ `4ನೇ ಮೈಸೂರು ಲಿಟರರಿ ಫೆಸ್ಟ್-2023’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸೋಂಕುಗಳಿಗೆ ಸಿಲುಕಿ ನಮ್ಮ ಸಾಹಿತ್ಯ ಇಂದು ವಿಭಜನೆಯಾಗುತ್ತಿದ್ದು, ಈ ಸೋಂಕುಗಳಿಂದ ಮುಕ್ತವಾಗದಿದ್ದರೆ ಅದನ್ನು ಶ್ರೇಷ್ಠ ಸಾಹಿತ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ವೇದ, ಪುರಾಣಗಳಲ್ಲಿ ಜಾತಿಗಳನ್ನು ಪ್ರಸ್ತಾಪಿ ಸಿಲ್ಲ. ಆದಿಕವಿ ಪಂಪ, `ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಸಾರಿದ್ದರೆ, ಸಂತ ಭಕ್ತ ಕನಕ ದಾಸರು, `ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಸಂದೇಶ ನೀಡಿದ್ದಾರೆ. ಪ್ರಸ್ತುತ ಮತ್ತು ಹಿಂದಿನ ನಮ್ಮ ಸಾಹಿತ್ಯದಲ್ಲಿ ಭಾರೀ ವ್ಯತ್ಯಾಸ ಉಂಟಾ ಗಿದ್ದು, ಈ ಹಿಂದಿನ ಸಾಹಿತ್ಯದಲ್ಲಿ ಮಾನವೀ ಯತೆ, ಸೌರ್ಹಾದತೆಗೆ ಒತ್ತು ನೀಡಲಾಗಿದೆ ಎಂದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಕುವೆಂಪು ಎಂದೇ ಖ್ಯಾತನಾಮರಾದ ಕೆ.ವಿ.ಪುಟ್ಟಪ್ಪ ಮೊದಲಾದ ನಮ್ಮ ಹಿಂದಿನ ದಿಗ್ಗಜರು ತಮ್ಮ ಸಾಹಿತ್ಯ ದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ್ದಾರೆ. ಅಂದು ಬಹುತೇಕ ತತ್ವಜ್ಞಾನಿಗಳು ನಾಸ್ತಿಕರಾದರೂ ಮಾನವೀಯತೆಯಲ್ಲಿ ಅಪಾರವಾದ ನಂಬಿಕೆ ಹೊಂದಿದ್ದರು. ಹಾಗಾಗಿಯೇ ಅವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಮೇಳೈಸಿವೆ ಎಂದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪು.ತಿ.ನರ ಸಿಂಹಾಚಾರ್, ಡಿ.ಎಲ್.ನರಸಿಂಹಾಚಾರ್, ಬಿ.ಎಂ. ಶ್ರೀಕಂಠಯ್ಯ ಮತ್ತು ತೀ.ನಂ.ಶ್ರೀಕಂಠಯ್ಯ ಮೊದ ಲಾದ ಸಾಹಿತಿಗಳು ಹಲವು ವಿಧದಲ್ಲಿ ಸಂಪ್ರದಾಯಸ್ಥ ರಾಗಿದ್ದರೂ (ಮಡಿವಂತಿಕೆ) ಅದಕ್ಕೂ ಮೀರಿದ ಮಾನವೀಯತೆ ಅವರಲ್ಲಿ ಅಡಕವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಾಹಿತ್ಯದಲ್ಲಿ ಮನುಷ್ಯತ್ವ ಮೆರೆ ದಾಡಿದೆ. ಕುವೆಂಪು ಅವರು `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಬರೆಯಲು 14 ವರ್ಷಗಳನ್ನು ತೆಗೆದು ಕೊಂಡರು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ? ಎಂಬ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಅವರು ಅದರ ಗದ್ಯವನ್ನು ರಚಿಸಿದರು ಎಂದರು.

ಕನ್ನಡದ ಸಣ್ಣ ಕಥೆಗಳ ಪಿತಾಮಹಾ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಸಮಾಜದಲ್ಲಿ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಅವರು ತಮ್ಮ ಸಣ್ಣಕಥೆಗಳಲ್ಲಿ ಟೀಕಿಸಿದ್ದಾರೆ. ಆ ಮೂಲಕ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ಚಿತ್ರಿಸಿ, ಮಾನವೀಯ ಮೌಲ್ಯದ ಮಹತ್ವದ ಬಗ್ಗೆ ಒತ್ತಿ ಹೇಳಿದ್ದಾರೆ. ಕಟ್ಟಾ ಮಂಡಿವಂತಿಕೆ ಪಾಲಿಸುವ ವ್ಯಕ್ತಿ, ಅನ್ಯಧರ್ಮೀಯ ಮಹಿಳೆಯೊಂದಿಗೆ ಒಂದೇ ಮನೆಯಲ್ಲಿ ವಾಸಿಸಿದರೂ ತನ್ನ ಆಹಾರ ಮಾತ್ರ ತಾನೇ ತಯಾರು ಮಾಡಿಕೊಳ್ಳುವ ಡೋಂಗಿತನದ ಬಗ್ಗೆಯೂ ಟೀಕಿಸಿದ್ದಾರೆ ಎಂದರು.

ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಮಹಾನ್ ತತ್ವಜ್ಞಾನಿ. ಅವರು ಬರೆದ `ದಿ ಪ್ರಿನ್ಸಿಪಾಲ್ ಉಪನಿಷದ್’ ಕೃತಿಯು ಸುಮಾರು ಸಾವಿರ ಪುಟಗಳನ್ನು ಹೊಂದಿದೆ. ಇದರಲ್ಲಿ ಕುರಾನ್, ಬೈಬಲ್, ಗಣಿತಶಾಸ್ತ್ರಜ್ಞ ಉಮರ್ ಖಯ್ಯಾಮ್ ಮತ್ತು ತತ್ವಶಾಸ್ತ್ರಜ್ಞನೂ ಆದ ಗಣಿತಶಾಸ್ತ್ರಜ್ಞ ಬಟ್ರ್ರಾಂಡ್ ರಸ್ಸೆಲ್ ಅವರ ಉಲ್ಲೇಖಿಗಳನ್ನು ನೀಡಿದ್ದಾರೆ. ಇದರಲ್ಲಿ ಮಾನವೀತೆ ಮತ್ತು ಏಕತೆಯ ಮೇಲಿನ ರಾಧಾಕೃಷ್ಣರ ಪ್ರೀತಿಯು ಹೆಚ್ಚಿನ ಮಟ್ಟದಲ್ಲಿ ವಿವರಿಸಲ್ಪಟ್ಟಿದೆ ಎಂದು ಹೇಳಿದರು.

ಕುವೆಂಪು ಅವರ `ವಿಶ್ವಮಾನವ’ ಮತ್ತು `ಮನುಜಪಥ’ ಅಥವಾ ಡಿ.ವಿ.ಗುಂಡಪ್ಪ ಅವರು `ಮಂಕುತಿಮ್ಮನ ಕಗ್ಗ’ ಅತ್ಯಂತ ಜನಪ್ರಿಯಗೊಂಡಿವೆ. ಕಾರಣ ಅವುಗಳಲ್ಲಿರುವ ಜೀವನ ಮೌಲ್ಯಗಳಾಗಿವೆ. ನಮ್ಮ ಈ ಹಿಂದಿನ ಸಾಹಿತ್ಯದ ದಿಗ್ಗಜರು ಮಾನವೀಯತೆ ಯಲ್ಲಿ ಬಲವಾದ ನಂಬಿಕೆ ಹೊಂದಿದ್ದರು. ಅಲ್ಲದೆ, ಮಾನವೀಯ ಮೌಲ್ಯಗಳೇ ಅವರ ಸಾಹಿತ್ಯದ ಸಾರವಾಗಿತ್ತು. ಅಂತೆಯೇ ಇಂದಿನ ಸರ್ಕಾರ ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜೀವ್‍ಗಾಂಧಿ ಕೇಂದ್ರ ವಿವಿ ವಿಶ್ರಾಂತ ಕುಲಪತಿಗಳೂ ಆದ ಮೈಸೂರು ಲಿಟರರಿ ಅಸೋಸಿಯೇಷನ್‍ನ ಅಧ್ಯಕ್ಷ ಡಾ.ಕೆ.ಸಿ.ಬೆಳ್ಳಿಯಪ್ಪ ಮಾತನಾಡಿ, ಭಾನುವಾರವಾದರೂ ಇಂದಿನ ನಮ್ಮ ಕಾರ್ಯಕ್ರಮಕ್ಕೆ ಇಡೀ ಸಭಾಂಗಣ ಶೇ.80ರಷ್ಟು ಭರ್ತಿಯಾಗಿದೆ. ಇದು ರಜೆ ದಿನದಲ್ಲಿ ನಿಜಕ್ಕೂ ಉತ್ತಮ ಹಾಜರಾತಿ ಎಂದು ಹರ್ಷ ವ್ಯಕ್ತಪಡಿಸಿದರು.

ಇಂಗ್ಲಿಷ್ ಭಾಷಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಆಂಗ್ಲ ಸಾಹಿತ್ಯದ ಆಸಕ್ತರು ಒಗ್ಗೂಡಿ 2016ರಲ್ಲಿ ಲಿಟರರಿ ಅಸೋಸಿಯೇಷನ್ ಅಸ್ತಿತ್ವಕ್ಕೆ ತರಲಾಯಿತು. ಪ್ರಸ್ತುತ 260 ಸದಸ್ಯರು ಅಸೋಸಿಯೇಷನ್‍ನಲ್ಲಿದ್ದಾರೆ. 2017ರಲ್ಲಿ ಮೊದಲ ಲಿಟರರಿ ಫೆಸ್ಟ್ ನಡೆಯಿತು. ನಂತರದಲ್ಲಿ 2018 ಮತ್ತು 2019ರಲ್ಲಿಯೂ ಫೆಸ್ಟ್ ಯಶಸ್ವಿಯಾಗಿ ನಡೆಯಿತು. ಆದರೆ ಕೋವಿಡ್ ಕಾರಣಕ್ಕೆ 2020, 2021 ಮತ್ತು 2022ರಲ್ಲಿ ಆಯೋಜನೆ ಸಾಧ್ಯವಾಗಲಿಲ್ಲ. ಇದೀಗ 4ನೇ ಉತ್ಸವ ನಡೆಯುತ್ತಿದೆ ಎಂದು ಹೇಳಿದರು.

ಖ್ಯಾತ ನರಶಾಸ್ತ್ರ ತಜ್ಞೆ ಮತ್ತು ಲೇಖಕಿ ಡಾ.ದೀಪ್ತಿ ನವರತ್ನ ತಮ್ಮ ಕೃತಿ `ದಿ ಮೇವರಿಕ್ ಮಹಾರಾಜ (ಜಯಚಾಮರಾಜ ಒಡೆಯರ್ ಕುರಿತ ಪುಸ್ತಕ)’ ಕುರಿತು ಮಾತನಾಡಿದರು. ಬಳಿಕ ಖ್ಯಾತ ನಿರ್ದೇಶಕರೂ ಆದ ನಟ ಪ್ರಕಾಶ್ ಬೆಳವಾಡಿ `ನಾಟಕ ರಚನೆ’ ಕುರಿತು ವಿಚಾರ ಮಂಡಿಸಿದರು. ಮಧ್ಯಾಹ್ನದ ಗೋಷ್ಠಿಗಳಲ್ಲಿ `ಭಾರತೀಯ ಕಾವ್ಯ ಹಾಗೂ ಕಾವ್ಯ ಮಿಮಾಂಸೆಯಲ್ಲಿ ಭಕ್ತಿ ಮತ್ತು ಸಿದ್ಧ ಆಯಾಮಗಳು’ ವಿಷಯ ಕುರಿತು ಖ್ಯಾತ ಕವಿಗಳೂ ಆದ ನಾಟಕಕಾರ ಹೆಚ್.ಎಸ್.ಶಿವಪ್ರಕಾಶ್, `ಶಿಕ್ಷಣದಲ್ಲಿ ನಾಟಕ ಮತ್ತು ನಾಟಕದಲ್ಲಿ ಶಿಕ್ಷಣ’ ವಿಷಯ ಕುರಿತು ಖ್ಯಾತ ನಟರೂ ಆದ ಶಿಕ್ಷಣ ತಜ್ಞ ಡಾ.ಅಭಿಮನ್ಯು ಆಚಾರ್ಯ ಮಾತನಾಡಿದರು.

ಅಸೋಸಿಯೇಷನ್ ಉಪಾಧ್ಯಕ್ಷ ಪ್ರೊ.ಬಿ.ಎನ್.ಬಾಲಾಜಿ, ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ವೇದಿಕೆಯಲ್ಲಿದ್ದರು. `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರು’ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ (ಕೆಬಿಜಿ), ಆಮ್ ಆದ್ಮಿ ಪಕ್ಷದ ನಾಯಕ ಬ್ರಿಜೇಶ್ ಕಾಳಪ್ಪ, ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ, ಮೈಸೂರು ವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಪ್ರೊ.ಸಿ.ನಾಗಣ್ಣ, ಮೈಸೂರು ಬುಕ್ ಕ್ಲಬ್ ಸಂಸ್ಥಾಪಕಿ ಶುಭಾ ಸಂಜಯ್ ಅರಸ್, ಪ್ರಾಧ್ಯಾಪಕಿ ಪ್ರೊ.ಅನಿತಾ ವಿಮ್ಲಾ ಬ್ರಾಗ್ಸ್ ಸೇರಿದಂತೆ ಅನೇಕ ಸಾಹಿ ತ್ಯಾಸಕ್ತರು ಸಭಿಕರಾಗಿ ಹಾಜರಿದ್ದರು. ಮೈಸೂರು, ಮಂಡ್ಯ, ಕೊಡಗು, ಹಾಸನ ಮೊದಲಾದ ಜಿಲ್ಲೆಗಳ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »