ಸುತ್ತೂರು ಜಾತ್ರಾ ಮಹೋತ್ಸವಕ್ಕೆವರ್ಣರಂಜಿತ ಚಾಲನೆ
ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವಕ್ಕೆವರ್ಣರಂಜಿತ ಚಾಲನೆ

January 19, 2023

ನಂಜನಗೂಡು, ಜ.18-ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ವರ್ಣ ರಂಜಿತ ಚಾಲನೆ ದೊರೆಯಿತು. ಹೊಸಮಠದ ಚಿದಾನಂದ ಸ್ವಾಮೀಜಿ, ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ವಸ್ತು ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಾಂಸ್ಕøತಿಕ ಮೇಳ ಮತ್ತು ಭಜನಾಂಜಲಿ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃಷಿ ಮೇಳ ವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿ ದರು. ಸಿರಿಧಾನ್ಯ ಮೇಳವನ್ನು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ದೋಣಿ ವಿಹಾರವನ್ನು ಶಾಸಕ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.

ಆರೋಗ್ಯ ತಪಾಸಣಾ ಶಿಬಿರ ಮತ್ತು ರಂಗೋಲಿ, ಸೋಬಾನೆ ಪದ ಸ್ಪರ್ಧೆಗೂ ಚಾಲನೆ ದೊರೆಯಿತು. ಮುಖ್ಯ ಅತಿಥಿಗಳಾಗಿ ಶಾಸಕ ನಿರಂಜನಕುಮಾರ್, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಡಾ.ವಿ.ಲೋಕೇಶ್ ಕ್ಯಾನ್ಸರ್ ಸಂಬಂಧ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಕತೃ ಗದ್ದುಗೆಯಲ್ಲಿ ಮಹಾಸಂಕಲ್ಪಪೂರ್ವಕ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಗ್ರಾಮದ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಷಟ್ ಸ್ಥಳ ಧ್ವಜಾರೋಹಣವನ್ನು ಕೊಡಗಿನ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸಿದರು. ಉಕ್ಕಿನಮಠದ ಸಾಂಬಸದಾಶಿವ ಸ್ವಾಮೀಜಿ ಧರ್ಮ ಸಂದೇಶ ನೀಡಿದರು. ಬೆಳಗ್ಗೆ 8 ಗಂಟೆಗೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಉತ್ಸವ ಮೂರ್ತಿಗೆ ಅಭಿಷೇಕ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಂಜೆ 4.30ಕ್ಕೆ ಉತ್ಸವಮೂರ್ತಿಯನ್ನು ಶ್ರೀಮಠದಿಂದ ಕರ್ತೃ ಗದ್ದುಗೆಗೆ ಬಿಜಯಂಗೈಸಲಾಯಿತು. ರಾತ್ರಿ 7.30ರಲ್ಲಿ ಕರ್ತೃಗದ್ದುಗೆಯಲ್ಲಿ ಅಗ್ರೋದಕ, ಪುಣ್ಯಹ, ನಾಂದಿ, ಕಲಸ ಸ್ಥಾಪನೆ, ಅಂಕುರಾರ್ಪಣೆ ನೆರವೇರಿಸಲಾಯಿತು. ಜನಪದ ಗಾಯನ, ರಂಗಗೀತೆ, ಭಕ್ತಿಗೀತೆ, ಭರತನಾಟ್ಯ, ಬಿಚ್ಚಿದ ಜೋಳಿಗೆ, ನಾಟಕ, ದಕ್ಷಯಜ್ಞ, ಪ್ರಭುಲಿಂಗಲೀಲೆ, ಶಿವಕುಮಾರ ನಾಟಕಗಳು ಜನರಿಗೆ ಮುದ ನೀಡಿದವು.

Translate »