ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ: ಮೊದಲ ಪಟ್ಟಿ ಬಿಡುಗಡೆಗೆ ಬ್ರೇಕ್
News

ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ: ಮೊದಲ ಪಟ್ಟಿ ಬಿಡುಗಡೆಗೆ ಬ್ರೇಕ್

January 19, 2023

ಬೆಂಗಳೂರು, ಜ.18(ಕೆಎಂಶಿ)- ನಾಯಕರ ಮುಸುಕಿನ ಗುದ್ದಾಟದಿಂದ ಕಂಗೆಟ್ಟಿರುವ ಕಾಂಗ್ರೆಸ್‍ಗೆ ಬಂಡಾಯದ ಬಿಸಿ ಮುಟ್ಟಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಪೈಪೆÇೀಟಿ ಹೆಚ್ಚಿರುವ ಕಾರಣ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಅಡ್ಡಿಯಾಗಿದೆ. ಪಟ್ಟಿ ಬಿಡುಗಡೆಗೆ ಮುನ್ನವೇ ಕೆಲವು ಆಕಾಂಕ್ಷಿಗಳು ತಮಗೆ ಟಿಕೆಟ್ ದೊರೆಯುವುದಿಲ್ಲ ಎಂದು ಜೆಡಿಎಸ್, ಬಿಜೆಪಿ ಇಲ್ಲವೆ ಗಣಿಧಣಿ ಜನಾರ್ದನ ರೆಡ್ಡಿ ಪಕ್ಷದ ಬಾಗಿಲು ಬಡಿಯಲು ಮುಂದಾಗಿದ್ದರು. ಇದರ ಸುಳಿವು ಅರಿತ ದೆಹಲಿ ವರಿಷ್ಠರು ಜನವರಿ 3ನೇ ವಾರದಲ್ಲಿ 100 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದನ್ನು ಮುಂದೂಡಿದ್ದಾರೆ.

ಈ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ಇವುಗಳಿಗೆ ಒಂದೇ ಹೆಸರನ್ನು ವರಿಷ್ಠರಿಗೆ ಶಿಫಾರಸ್ಸು ಮಾಡಿ, ಅಲ್ಲಿಂದಲೇ ಪ್ರಕಟಿಸಲು ರಾಜ್ಯ ನಾಯಕರು ತೀರ್ಮಾನಿಸಿದ್ದರು. ಪಟ್ಟಿ ಬಿಡುಗಡೆಗೆ ಸಂಬಂಧಿಸಿ ದಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಉಭಯ ನಾಯಕರು ಬಸ್ ಯಾತ್ರೆ ಕೈಗೊಳ್ಳುವ ಮುನ್ನವೇ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಆಯಾ ಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡುವ ತೀರ್ಮಾನ ಕೈಗೊಂಡಿದ್ದರು.

ಆದರೆ ಕೆಲವು ಕ್ಷೇತ್ರಗಳಲ್ಲಿ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಬೆಂಬಲಿಗರ ಬಣ ಎಂದು ಗುರುತಿಸಿಕೊಂಡು ತಾವೂ ಕಣಕ್ಕಿಳಿಯಬೇಕೆಂದು ಪೈಪೆÇೀಟಿ ನಡೆಸುತ್ತಿದ್ದಾರೆ. ಇದು ಕೇಂದ್ರ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇಬ್ಬರು ನಾಯಕರು ಪ್ರತಿಷ್ಠೆಯಿಂದ ದೃತಿಗೆಟ್ಟಿರುವ ದೆಹಲಿ ನಾಯಕರ ಇದೀಗ ಅಭ್ಯರ್ಥಿಯಾಗಲು ಪೈಪೆÇೀಟಿ ನಡೆಸಿರು ವುದು ಅವರಿಗೆ ತಲೆನೋವು ಆಗಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳ ಕಾಲ ಪಟ್ಟಿ ಹೊರಗೆಡುವುದು ಬೇಡ. ಆ ವೇಳೆಗೆ ಜೆಡಿಎಸ್ ಮತ್ತು ಬಿಜೆಪಿ ಎರಡನೇ ಮತ್ತು ಮೊದಲನೇ ಪಟ್ಟಿ ಬಿಡುಗಡೆ ಮಾಡುವುದರಿಂದ ನಮ್ಮಲ್ಲಿ ಬಂಡಾಯದ ಬಿಸಿ ಕಡಿಮೆಯಾಗ ಬಹುದು. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಪ್ರಕಟಿ ಸುವುದರಿಂದ ನಮ್ಮಲ್ಲಿ ಬಂಡಾಯ ಎದ್ದರೂ ಅಂತಹವರಿಗೆ ಆ ಪಕ್ಷಗಳಲ್ಲಿ ಅವಕಾಶ ಸಿಗುವುದಿಲ್ಲ. ಟಿಕೆಟ್ ದೊರೆಯದವರು ಪಕ್ಷದಲ್ಲೇ ಉಳಿಯುತ್ತಾರೆ ಎಂಬ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಇದೇ ಕಾರಣಕ್ಕಾಗಿ ಪಟ್ಟಿ ವಿಳಂಬವಾಗಿದೆ.

Translate »