ಯುವತಿ ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಹಂತಕನ ಮೃತದೇಹ ಪತ್ತೆ
ಕೊಡಗು

ಯುವತಿ ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಹಂತಕನ ಮೃತದೇಹ ಪತ್ತೆ

January 19, 2023

ಮಡಿಕೇರಿ, ಜ.18- ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಭಾನು ವಾರ (ಜ.15) ಸಂಜೆ ನಡೆದಿದ್ದ ಬುಟ್ಟಿ ಯಂಡ ಆರತಿ(24) ಕೊಲೆ ಪ್ರಕರಣದ ಆರೋಪಿ ಕೆ.ತಿಮ್ಮಯ್ಯ(33) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತ ದೇಹ ರುದ್ರುಗುಪ್ಪೆ ಗ್ರಾಮದ ಕೆರೆ ಯೊಂದರಲ್ಲಿ ಪತ್ತೆಯಾಗಿದೆ.
ಆರೋಪಿ ತಿಮ್ಮಯ್ಯನ ಮೃತದೇಹ ಬುಧವಾರ ಮುಂಜಾನೆ 2 ಗಂಟೆಯ ವೇಳೆಗೆ 40 ಅಡಿ ಆಳದಲ್ಲಿ ಪತ್ತೆಯಾಗಿದ್ದು, ಮುಳುಗು ತಜ್ಞರು ದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಸ್ಥಳದಲ್ಲಿ ಮಹಜರು ನಡೆಸಿ ವಿರಾಜ ಪೇಟೆ ಸರಕಾರಿ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಪ್ರಕರಣ ಹಿನ್ನೆಲೆ: ವಿರಾಜಪೇಟೆ ನಾಂಗಾಲ ನಿವಾಸಿ ಬುಟ್ಟಿಯಂಡ ಆರತಿ ಮತ್ತು ತಿಮ್ಮಯ್ಯ ಪರಿಚಿತರಾಗಿದ್ದು, ಕೊಲೆ ನಡೆಯುವ 3 ದಿನಗಳ ಮುನ್ನ ಇವರಿಬ್ಬರ ನಡುವೆ ಮೊಬೈಲ್‍ನಲ್ಲಿ ತೀವ್ರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ದ್ವೇಷದಿಂದ ಭಾನುವಾರ ಸಂಜೆ ಆರತಿಗೆ ಕರೆ ಮಾಡಿದ್ದ ತಿಮ್ಮಯ್ಯ ಆಕೆಯ ಮನೆಯ ಸಮೀಪ ಕತ್ತಿಯಿಂದ ಕಡಿದು ಬರ್ಬರ ವಾಗಿ ಕೊಲೆ ಮಾಡಿದ್ದ. ಆದರೆ ಕೊಲೆ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿ ರುವ ಹಿನ್ನೆಲೆಯಲ್ಲಿ ಹತ್ಯೆಯ ಹಿಂದಿನ ಉದ್ದೇಶ ರಹಸ್ಯವಾಗಿ ಉಳಿದಿದ್ದು, ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

ಆತ್ಮಹತ್ಯೆ ಶಂಕೆಯಿತ್ತು: ಕೊಲೆ ಆರೋಪಿ ತಿಮ್ಮಯ್ಯ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಸೋಮ ವಾರ ಬೆಳಗ್ಗೆ ಆರೋಪಿಯ ಬಂಧನಕ್ಕಾಗಿ ರುದ್ರುಗುಪ್ಪೆ ಗ್ರಾಮದಲ್ಲಿರುವ ಆತನ ಮನೆಗೆ ತೆರಳಿದ್ದರು. ಈ ಸಂದರ್ಭ ಮನೆಯ ಮುಂಭಾಗದ ಕೆರೆಯೊಂದರ ದಡದಲ್ಲಿ ಆರೋಪಿಯ ಜಾಕೆಟ್, ಮೊಬೈಲ್, ಹೆಲ್ಮೆಟ್, ಮದ್ಯ ಮತ್ತು ಕೀಟನಾಶಕದ ಬಾಟಲಿ ಪತ್ತೆಯಾಗಿತ್ತು. ಆರತಿಯನ್ನು ಕೊಲೆಗೈದ ಬಳಿಕ ಆರೋಪಿ ಕೂಡ ಕೆರೆಗೆ ಹಾರಿ ಆತ್ಮಹತೈ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು.

ಮೂರು ತನಿಖಾ ತಂಡ:ಆರೋಪಿ ತಿಮ್ಮಯ್ಯನ ಹಿನ್ನೆಲೆ ಕಲೆ ಹಾಕಿದ ಸಂದರ್ಭ ಆತ 2011ರಲ್ಲಿ ಬೆಂಗಳೂರು ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣದಲ್ಲಿ ಭಾಗಿ ಯಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ 3 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಆರೋಪಿಗಾಗಿ ಗ್ರಾಮದಲ್ಲಿ ಕೂಂಬಿಂಗ್ ನಡೆಸುತ್ತಿದ್ದರೆ, ಮತ್ತೊಂದು ತಂಡ ಕೆರೆಯಲ್ಲಿ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಆರೋಪಿ ತಿಮ್ಮಯ್ಯ ಕೆರೆ ಬಳಿ ಆತ್ಮ ಹತ್ಯೆಯ ಕಥೆ ಕಟ್ಟಿ ಬೇರೆ ಊರಿಗೆ ಪರಾರಿಯಾಗಿರಬಹುದು ಎಂಬ ಅನು ಮಾನದಿಂದ 3ನೇ ತಂಡ ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿತ್ತು.

ಮೃತದೇಹಕ್ಕೆ ಶೋಧ: ಸೋಮವಾರ ಸಂಜೆವರೆಗೂ ಆರೋಪಿಯ ಮೃತದೇಹ ಕ್ಕಾಗಿ ಮುಳುಗು ತಜ್ಞರು ಮತ್ತು ಪೊಲೀಸರು ಭಾರೀ ಆಳದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಅತೀವ ಆಳ ಮತ್ತು ಭಾರೀ ಪ್ರಮಾಣದ ಹೂಳು ತುಂಬಿದ್ದರಿಂದ ಕಾರ್ಯಾ ಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ ಮಂಗಳ ವಾರ ಬೆಳಗ್ಗೆ ಮಿನಿ ಹಿಟಾಚಿ ಯಂತ್ರ ಬಳಸಿ ಕೆರೆಯ ದಂಡೆ ಕೊರೆದು ಮತ್ತು ಪಂಪ್ ಗಳನ್ನು ಬಳಸಿ ಕೆರೆಯ ನೀರು ಖಾಲಿ ಮಾಡ ಲಾಗುತ್ತಿತ್ತು. ಬುಧವಾರ ಬೆಳಗಿನ ಜಾವ ನೀರಿನ ಪ್ರಮಾಣ ಇಳಿಕೆ ಕಾಣುವ ಸಂದರ್ಭ ಮೃತದೇಹ ನೀರಿನಲ್ಲಿ ತೇಲಿ ಮೇಲೆ ಬಂದಿದೆ. ಬಳಿಕ ಪೊಲೀಸರು ಮೃತದೇಹ ವನ್ನು ಹೊರತೆಗೆದು ವಿರಾಜ ಪೇಟೆ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು.

ತನಿಖೆ ಪ್ರಗತಿಯಲ್ಲಿದೆ: ಬುಟ್ಟಿಯಂಡ ಆರತಿ ಕೊಲೆ ಪ್ರಕರಣದ ಆರೋಪಿ ತಿಮ್ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ಆತನ ಮೃತದೇಹ ದೊರೆಯುವ ಮೂಲಕ ದೃಢಪಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಡಿಕೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ. ಅಯ್ಯಪ್ಪ, ಕೊಲೆ ಕೃತ್ಯ ನಡೆದ ಸಂದರ್ಭವೇ ಆರೋಪಿ ಯಾರು ಎಂಬ ಮಾಹಿತಿ ದೊರಕಿತ್ತಲ್ಲದೇ, ಆತನ ಬಂಧನ ಕ್ಕಾಗಿ ವಿಶೇಷ ತಂಡಗಳನ್ನು ರಚಿಸ ಲಾಗಿತ್ತು. ತನಿಖೆಯ ಸಂದರ್ಭ ರುದ್ರು ಗುಪ್ಪೆಯ ಆತನ ಮನೆ ಬಳಿ ಇರುವ ಕೆರೆ ದಂಡೆಯಲ್ಲಿ ಆರೋಪಿ ಬಳಸುತ್ತಿದ್ದ ವಸ್ತುಗಳು ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಪುಷ್ಟೀಕರಿಸುತ್ತಿತ್ತು. ಹೀಗಿದ್ದರೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.

ಯಾವ ಉದ್ದೇಶಕ್ಕಾಗಿ ಕೊಲೆ ನಡೆದಿದೆ ಎಂಬ ಬಗ್ಗೆಯೂ ತನಿಖೆ ನಡೆಸ ಲಾಗುತ್ತಿದೆ. ಎರಡೂ ಕುಟುಂಬಗಳಲ್ಲಿ ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆ ಕುಟುಂಬಗಳು ದುಃಖದಲ್ಲಿವೆ. ಕೊಲೆಗೆ ಕಾರಣವಾದ ಅಂಶಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು. ಆರೋಪಿ ತಿಮ್ಮಯ್ಯ ಬೆಂಗಳೂರು ಚಿನ್ನಾ ಭರಣ ಮಳಿಗೆ ದರೋಡೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ. ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ ಮಾಹಿತಿ ನೀಡಿದರು.

Translate »