ಮೈಸೂರು ಹಸಿರು,ಸ್ವಚ್ಛ ರಾಜಧಾನಿ ಆಗಲಿ
ಮೈಸೂರು

ಮೈಸೂರು ಹಸಿರು,ಸ್ವಚ್ಛ ರಾಜಧಾನಿ ಆಗಲಿ

July 14, 2022

ಮೈಸೂರು,ಜು.13(ಪಿಎಂ)-ವೃಕ್ಷಗಳ ರಕ್ಷಣೆ-ಪೋಷಣೆ ಮೂಲಕ ಮೈಸೂರು ಹಸಿರು ಮಾತ್ರ ವಲ್ಲದೆ, ಸ್ವಚ್ಛ ರಾಜಧಾನಿಯಾಗಿ ಹೊರಹೊಮ್ಮಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಯವರೂ ಆದ ನೂತನ ರಾಜ್ಯಸಭಾ ಸದಸ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಿಸಿದರು.

ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ರಾಜೀವ್ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ಮೈಸೂ ರಲ್ಲಿ 25 ಸಾವಿರ ಸಸಿ ನೆಡುವ `ವನಸಿರಿ’ ಶೀರ್ಷಿಕೆಯ `ವನಮಹೋತ್ಸವ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಭೂಮಿಯನ್ನು ಸುಸ್ಥಿತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟುಕೊಡ ಬೇಕು. ಹಾಗಾಗಿ ಆ ಮುಂದಿನ ಪೀಳಿಗೆಯವರೇ ಬಿಟ್ಟುಕೊಟ್ಟಿರುವ ಭೂಮಿಯಲ್ಲಿ ನಾವಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಬರಬೇಕು. ಪ್ರತಿಯೊಂದು ವೃಕ್ಷ ದಲ್ಲಿ ದೇವರನ್ನು ಕಾಣಬೇಕು ಎಂದರು.

ನಾನೊಮ್ಮೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಮೊದಲ ದಿನ ಅರಣ್ಯ ಪ್ರದೇಶವೊಂದಕ್ಕೆ ಕರೆದೊಯ್ಯಲು ಅಲ್ಲಿಯವರು ಮುಂದಾದಾಗ, ಮಲೆನಾಡಿನ ನಾವು ಕಾಡು ನೋಡಲು ಇಲ್ಲಿಗೆ ಬರಬೇಕಿತ್ತಾ? ಎಂದು ನನ್ನ ಕಿರಿಯ ಸಹೋದರ ನಿಗೆ ಪ್ರಶ್ನೆಯಿತ್ತೆ. ಅದಕ್ಕೆ ಅಲ್ಲಿಯವರು, ಬಿಸಿಲು ಭೂಮಿಗೆ ಬೀಳದಷ್ಟು ಹಸಿರು ಮರಗಳಿಂದ ಕೂಡಿದ ದಟ್ಟಕಾಡಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಅದನ್ನು `ಮಳೆಕಾಡು’ ಎಂದು ಕರೆಯಲಾಗುತ್ತದೆ ಎಂದಾಗ, ನನ್ನಲ್ಲಿ ನಮ್ಮ ದೇಶದಲ್ಲಿ ಅಂತಹ ಎಷ್ಟು ಕಾಡುಗಳಿವೆ? ಎಂಬ ಪ್ರಶ್ನೆ ಉದ್ಭವಿಸಿತು. ನಮ್ಮದು ಪ್ರಾಚೀನ ಇತಿಹಾಸವಿರುವ ಭೂಮಿ. ಆದರೆ ನಮ್ಮಲ್ಲಿ ಬಿಸಿಲು ಭೂಮಿ ಮೇಲೆಯೇ ಬೀಳದಂತಹ ಅರಣ್ಯ ಪ್ರದೇಶ ಬಹುಶಃ ಕಡಿಮೆ ಎಂದು ಹೇಳಿದರು.

ಅಮೆರಿಕದಲ್ಲಿ ಮರದ ಕಾಂಡಗಳ ನಡುವೆ ಕಾರು ಹೋಗುವುದನ್ನು ಕಂಡಿದ್ದೇನೆ. ಆದರೆ ನಮ್ಮ ದೇಶ ದಲ್ಲಿ ಏಕಿಲ್ಲ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಈಗ ನಾವು ವೃಕ್ಷಗಳ ರಕ್ಷಣೆ-ಪೋಷಣೆ ಮಾಡುವ ಕರ್ತವ್ಯ ನಿಭಾಯಿಸಬೇಕಿದೆ. ಹಲವು ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುವಂತಾಗಿದ್ದು, ಅವುಗಳಿಂದ ಬೆಳೆ ನಾಶವಾಗುತ್ತದೆ ಎಂಬ ಕೊರಗು ನಮ್ಮದಾಗಿದೆ. ನಾಡಿಗೆ ಬಂದ ಕಾರಣಕ್ಕೆ ವನ್ಯಜೀವಿಗಳನ್ನು ಏನಾ ದರೂ ಮಾಡಿ ಹತ್ಯೆ ಮಾಡುವ ದುಷ್ಕøತ್ಯ ಮಾಡು ವವರೂ ಇದ್ದಾರೆ. ಆದರೆ ಕಾಡಿನಲ್ಲೇ ಪ್ರಾಣಿಗಳಿಗೆ ಆಹಾರ ದೊರಕಿದರೆ ಅವು ಊರಿಗೆ ಬರುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು ಎಂದು ತಿಳಿಸಿದರು.

ನಾಡಿನತ್ತ ಕಾಡುಪ್ರಾಣಿ ದಾಳಿ ತಡೆದ ಪ್ರಸಂಗ: ನಮ್ಮ ರತ್ನ ಮಾನಸವೆಂಬ ಹಾಸ್ಟೆಲ್ ಆವರಣದ ತರಕಾರಿ ತೋಟಕ್ಕೆ ನಿತ್ಯ ಕಾಡುಹಂದಿ, ಮೊಲ ಸೇರಿದಂತೆ ಇನ್ನಿತರ ಪ್ರಾಣಿ-ಪಕ್ಷಿಗಳು ಲಗ್ಗೆ ಇಟ್ಟು ತರಕಾರಿ ನಾಶ ಮಾಡುತ್ತಿದ್ದವು. ಇದನ್ನು ತಡೆಗಟ್ಟಲು ಹಾಸ್ಟೆಲ್ ವಾರ್ಡನ್ ಉಪಾಯ ಮಾಡಿದರು. ಅವುಗಳು ಬರುವ ಮೂಲ ದಾರಿ ಕಂಡುಕೊಂಡು ಅಲ್ಲಿಯೇ ಒಂದಿಷ್ಟು ತರಕಾರಿ ಬೆಳೆ ಬರುವಂತೆ ಮಾಡಿದರು. ಆ ಬಳಿಕ ಅವುಗಳು ನಮ್ಮ ತೋಟದ ಮೇಲೆ ದಾಳಿ ಮಾಡುವುದು ತಪ್ಪಿತು. ಈ ರೀತಿಯಲ್ಲಿ ನಮ್ಮ ರಕ್ಷಣೆಯೊಂದಿಗೆ ಅವುಗಳೂ ಉಳಿಯುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ಗಿಡಗಳನ್ನು ಕಾಡಿನಲ್ಲಿ ನೆಡುವ ಪ್ರಯತ್ನ ಮಾಡಿದ್ದೇವೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕಥೆ ಹೇಳಿ ವೃಕ್ಷದ ಮಹತ್ವ ಸಾರಿದ ಧರ್ಮಾಧಿಕಾರಿಗಳು: ಒಬ್ಬ ರಾಜ ತನ್ನ ಮಂತ್ರಿ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ಒಬ್ಬ ವೃದ್ಧನು ಮಾವಿನ ಹಣ್ಣಿನ ಗಿಡ ನೆಡುತ್ತಿದ್ದನ್ನು ಕಂಡ ರಾಜನು, `ಅಲ್ಲಪ್ಪ ನಿನಗೆ ಈಗಾಗಲೇ ವಯಸ್ಸು ಆಗಿದೆ. ಇನ್ನು ಈ ಗಿಡ ಬೆಳೆದು ಹಣ್ಣು ಬಿಟ್ಟು ನೀನು ತಿನ್ನುವುದು ಯಾವಾಗ?’ ಎಂದು ಪ್ರಶ್ನೆ ಮಾಡಿದ. ಅದಕ್ಕೆ ಆ ವೃದ್ಧನು, `ನಾನು ಇಂದು ತಿನ್ನುತ್ತಿರುವ ಹಣ್ಣು ನನ್ನ ಅಜ್ಜ ನೆಟ್ಟ ಗಿಡದ್ದಾಗಿದೆ. ಹಾಗೆಯೇ ನಾನು ಇಂದು ನೆಡುತ್ತಿರುವ ಗಿಡ ನನ್ನ ಮೊಮ್ಮಕ್ಕಳಿಗಾಗಿ’ ಎಂದು ಹೇಳಿದ. ಅಂತೆಯೇ ನಾವು ನಮ್ಮ ಮೊಮ್ಮಕ್ಕಳಿಗಾಗಿ, ಅಂದರೆ ಮುಂದಿನ ಪೀಳಿಗೆಗಾಗಿ ಸುಸ್ಥಿತಿಯಲ್ಲಿ ಭೂಮಿ ಇಡಬೇಕು ಎಂದು ಸಲಹೆ ನೀಡಿದರು.

ನಮ್ಮ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಉತ್ತರ ಕರ್ನಾಟಕದಲ್ಲಿ ಸುಮಾರು 500 ಕೆರೆಗಳ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಲಾಗಿದೆ. ಹೀಗೆ ಪ್ರಕೃತಿ ರಕ್ಷಣೆಗೆ ಪೂರಕವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ. ನಮ್ಮ ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ರೀತಿಯಲ್ಲಿ ಬಿಟ್ಟುಕೊಡಬೇಕು ಎಂಬುದು ಇದರ ಹಿಂದಿರುವ ನಮ್ಮ ಆಶಯವಾಗಿದೆ. ಹೆಚ್.ವಿ.ರಾಜೀವ್ ಸಸಿ ನೆಡುವ ಅಭಿಯಾನದ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಲಭಿಸಬೇಕೆಂಬ ಬಗ್ಗೆ ಸಂಪೂರ್ಣ ಕಳಕಳಿ ಹೊಂದಿದ್ದಾರೆ ಎಂದು ತಿಳಿಸಿದರು.

ಇದೇ ವೇದಿಕೆಯಲ್ಲಿ ಮೈಸೂರಿನ ನಮ್ಮ ರೂಡ್‍ಸೆಟ್ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ ಮಾಡಲಾಗಿದೆ. ಈ ಸಂಸ್ಥೆ ಮೂಲಕ ಸುಮಾರು 19 ಸಾವಿರ ಮಂದಿ ತರಬೇತಿ ಪಡೆದು ಸ್ವ-ಉದ್ಯೋಗಿಗಳಾಗಿದ್ದಾರೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಅಲ್ಲದೇ ಕಾರ್ಯ ಕ್ರಮದ ಸಾನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು, ತಮ್ಮ ಮಠದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ, ಅಭಿನಂದಿಸಿದರು.

ಇದೇ ವೇಳೆ ಪರಿಸರ ತಜ್ಞರಾದ ಶಿವಾನಂದ ಕಳವೆ, ವಿನಯ್ ರಾಮಕೃಷ್ಣ, ವನ್ಯಜೀವಿ ಲೇಖಕ ವಿನೋದ್ ಕುಮಾರ್ ಬಿ.ನಾಯ್ಕ್ ಅವರಿಗೆ `ಸಿರಿ ಸಂವರ್ಧನ’ ಪ್ರಶಸ್ತಿಗಳನ್ನು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಪ್ರದಾನ ಮಾಡಿದರು. `ಸಮಾಜ ಮುಖಿ’ ಪುಸ್ತಕವನ್ನು ಹಿರಿಯ ಪತ್ರಕರ್ತ ಹೆಚ್.ಆರ್.ರಂಗನಾಥ್ ಬಿಡುಗಡೆ ಮಾಡಿ ದರು. ಅಲ್ಲದೆ, `ವನಸಿರಿ’ ಸಾಕ್ಷ್ಯಚಿತ್ರವನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮುನ್ನ ಮುಕ್ತ ವಿವಿ ಆವರಣದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಸಿಯೊಂದನ್ನು ನೆಟ್ಟು ನೀರೆರೆದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಎಂಎಲ್‍ಸಿ ಸಿ.ಎನ್.ಮಂಜೇಗೌಡ, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಓ ಬಿ.ಆರ್.ಪೂರ್ಣಿಮ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »