ಸಿದ್ದರಾಮಯ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೋಡಿಕೊಂಡು ಬರಲಿ: ಪ್ರಸಾದ್
ಮೈಸೂರು

ಸಿದ್ದರಾಮಯ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೋಡಿಕೊಂಡು ಬರಲಿ: ಪ್ರಸಾದ್

October 24, 2021

ಮೈಸೂರು,ಅ.23(ಪಿಎಂ)- `ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು. ಅಲ್ಲಿ ಅವರು ತಾಲಿಬಾನ್ ಆಡಳಿತ ಹೇಗಿದೆ? ಎಂದು ನೋಡಿಕೊಂಡು ಬರಲಿ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುಡುಗಿದ್ದಾರೆ.
`ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರನ್ನು ಒಂದು ತಿಂಗಳು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು. ಅವರು ಅಲ್ಲಿ ತಾಲಿಬಾನ್ ಆಡಳಿತ ನೋಡಲಿ. ಆಮೇಲೆ ಮಾತನಾಡಲಿ ಎಂದರು. ಮೈಸೂರಿನ ಮಾನಸಗಂಗೋ ತ್ರಿಯ ಸೆನೆಟ್ ಭವನದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಸಂಬಂಧ ಆಡಳಿತ ಮತ್ತು ವಿಪಕ್ಷಗಳ ನಡುವೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ದಂತೆ ಪ್ರತಿಪಕ್ಷಕ್ಕೂ ಜವಾಬ್ದಾರಿ ಇರುತ್ತದೆ. ಪ್ರತಿಪಕ್ಷದವರನ್ನು ನಾನು ನೋಡುತ್ತಿದ್ದೇನೆ. ಅವರು ಉದ್ವೇಗದಿಂದ ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕರೂ ರಾಷ್ಟ್ರಮಟ್ಟದ ರಾಜಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡುತ್ತಿಲ್ಲ. ಹೀಗಾಗಿ ಇದರ ಪ್ರತಿಕ್ರಿಯೆಯೂ ಅದೇ ಮಟ್ಟಕ್ಕೆ ಹೋಗುವುದು ಸಹಜ. ಎಲ್ಲಿಯವರೆಗೆ ಸಹನೆ ಇರಲು ಸಾಧ್ಯ? ಎಂದು ಸ್ವಪಕ್ಷದವರ ಹೇಳಿಕೆ ಗಳನ್ನು ಸಮರ್ಥಿಸಿಕೊಂಡರು.

ವಿರೋಧ ಪಕ್ಷದ ನಾಯಕರ ಭಾಷಣವನ್ನು ಯಾರಾದರೂ ಸಹಿಸಿಕೊಳ್ಳಲು ಸಾಧ್ಯವೇ? ಅದಕ್ಕೆ ಪ್ರತಿಕ್ರಿಯೆ ನೀಡಬೇಕಾದ್ದು ಅನಿ ವಾರ್ಯ. ಪ್ರತಿಪಕ್ಷ ನಾಯಕ ತನ್ನ ಜವಾಬ್ದಾರಿ ಅರಿತು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಪ್ರಯತ್ನ ಸರಿಯಾಗಿ ಮಾಡಬೇಕು. ಆದರೆ ಅದನ್ನು ಬಿಟ್ಟು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವರು ರಾಜ್ಯದ ಪ್ರತಿಪಕ್ಷದ ನಾಯಕ ಎಂಬುದನ್ನು ಮರೆತು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೇ? ತಾಲಿಬಾನ್‍ಗೆ ಹೋಲಿಸುವುದು ಸರಿಯೇ? ಎಂದು ಪ್ರಶ್ನಿಸಿದರು.

Translate »