ದೇಶದ ಜಲ ಸಂರಕ್ಷಣೆಗೆ  ಸಂಕಲ್ಪ ಮಾಡೋಣ
News

ದೇಶದ ಜಲ ಸಂರಕ್ಷಣೆಗೆ ಸಂಕಲ್ಪ ಮಾಡೋಣ

April 25, 2022

ನವದೆಹಲಿ, ಏ.24-ಸ್ವಾತಂತ್ರ್ಯದ ಅಮೃತ ಮಹೋ ತ್ಸವ ಸಮಯದಲ್ಲಿ ದೇಶದ ಜಲ ಸಂರಕ್ಷಣೆಗೆ ಸಂಕಲ್ಪ ಮಾಡೋಣ ಎಂದು ರಾಷ್ಟ್ರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮಾಸಿಕ ರೇಡಿಯೋ ಕಾರ್ಯಕ್ರಮ `ಮನ್ ಕೀ ಬಾತ್’ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸಂಕಲ್ಪಗಳಲ್ಲಿ ಜಲ ಸಂರಕ್ಷಣೆಯೂ ಒಂದಾಗಿದೆ. ನೀರು ಪ್ರತಿಯೊಂದು ಜೀವಿಗಳ ಮೂಲಭೂತ ಅಗತ್ಯ ಎಂದು ನಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದು ನೈಸರ್ಗಿಕ ಸಂಪನ್ಮೂಲ. ವಾಲ್ಮೀಕಿ ರಾಮಾಯಣದಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಹರಪ್ಪ ನಾಗರಿ ಕತೆಯ ಸಮಯದಲ್ಲಿ ನೀರನ್ನು ಉಳಿಸಲು ಸುಧಾರಿತ ಎಂಜಿನಿಯರಿಂಗ್ ವ್ಯವಸ್ಥೆಯೂ ಇತ್ತು ಎಂದರು.

ಜನರು ಕ್ಯಾಷ್‍ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡ ಬೇಕು ಎಂದ ಅವರು, ಈಗ ಸಣ್ಣ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ಜನರು ಯುಪಿಐ ಬಳಸುತ್ತಿದ್ದಾರೆ. ಇದು ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲಕರವಾಗಿದೆ. ಆನ್‍ಲೈನ್ ಪಾವತಿಯು ಡಿಜಿಟಲ್ ಆರ್ಥಿಕತೆಯನ್ನು ಅಭಿ ವೃದ್ಧಿಪಡಿಸುತ್ತಿದೆ. ದೇಶದಲ್ಲಿ ಪ್ರತಿದಿನ 20 ಸಾವಿರ ಕೋಟಿ ಮೊತ್ತದ ಆನ್‍ಲೈನ್ ವಹಿವಾಟು ನಡೆಯುತ್ತಿದೆ ಎಂದರು.

ಗಣಿತಕ್ಕೆ ಭಾರತ ನೀಡಿದ ಕೊಡುಗೆಯನ್ನು ಸ್ಮರಿಸಿದ ಮೋದಿ, ಗಣಿತಶಾಸ್ತ್ರವು ಭಾರತೀಯರಿಗೆ ಆಪ್ಯಾಯ ಮಾನವಾದ ವಿಷಯ. ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟಕರವಾದ ವಿಷಯವಾಗಿರಲಿಲ್ಲ. ಇದಕ್ಕೆ ನಮ್ಮ ವೇದ ಗಣಿತವೂ ಕಾರಣ. ನಾಗರಿಕರು ತಮ್ಮ ಮಕ್ಕಳಿಗೆ ವೇದ ಗಣಿತ ಕಲಿಸಬೇಕು. ವೇದ ಗಣಿತದಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುವುದು ಮಾತ್ರವಲ್ಲದೇ, ಅವರ ವಿಶ್ಲೇಷಣಾ ಸಾಮಥ್ರ್ಯವು ವೃದ್ಧಿ ಯಾಗುತ್ತದೆ. ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಅಲ್ಪ ಪ್ರಮಾಣದ ಭಯವನ್ನು ವೇದ ಗಣಿತ ಹೋಗಲಾಡಿ ಸುತ್ತದೆ. ಈಗ ವಿಜ್ಞಾನಿಗಳು `ಎವೆರಿಥಿಂಗ್ ಥಿಯರಿ’ ಬಗ್ಗೆ ಚರ್ಚಿಸುತ್ತಿದ್ದಾರೆ. ಅದರಲ್ಲಿ ಬ್ರಹ್ಮಾಂಡದಲ್ಲಿರುವ ಎಲ್ಲವನ್ನೂ ಒಗ್ಗೂಡಿಸಬಹುದಾಗಿದೆ. ಆದರೆ ಭಾರತವು ಗಣಿತಶಾಸ್ತ್ರಕ್ಕೆ `ಸೊನ್ನೆ’ಯನ್ನು ಕೊಡುಗೆಯಾಗಿ ನೀಡಿದೆ. ಈ ಮೂಲಕ ನಾವು ಅನಂತತೆಯ ಕಲ್ಪನೆಯನ್ನು ಅನ್ವೇಶಿಸಿದ್ದೇವೆ. ವೇದಗಳಲ್ಲಿನ ಗಣಿತಶಾಸ್ತ್ರದ ಎಣಿಕೆಯು ಬಿಲಿಯನ್ ಮತ್ತು ಟ್ರಿಲಿಯನ್‍ಗಳನ್ನು ನೀಡುವಂತಹದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಪ್ರಧಾನಮಂತ್ರಿ ಸಂಗ್ರ ಹಾಲಯವನ್ನು ಉಲ್ಲೇಖಿಸಿದ ಮೋದಿ, ದೇಶಕ್ಕೆ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಸಿಕ್ಕಿದೆ. ಅದನ್ನು ದೇಶದ ಜನರಿಗಾಗಿ ಸ್ಥಾಪಿಸಲಾಗಿದೆ. ನಾವು ನಮ್ಮ ಪ್ರಧಾನಿಗಳ ಕೊಡುಗೆಯನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋ ತ್ಸವದಂತಹ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ ಎಂಬುದು ಹೆಮ್ಮೆಯ ವಿಷಯ ಎಂದರಲ್ಲದೆ, ಮುಂಬರುವ ರಜಾ ದಿನಗಳಲ್ಲಿ ಯುವ ಜನರು ತಮ್ಮ ಸ್ನೇಹಿತರೊಂದಿಗೆ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು ಎಂದರು.

Translate »