ಬೆಂಗಳೂರು, ಏ.24- ಚುನಾವಣೆವರೆಗೆ ಕಾದು ನೋಡಿ, ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಬಿಜೆಪಿಯಲ್ಲಿ ಬಹಳ ಜನ ಗೆಲ್ಲುವ ಅಭ್ಯರ್ಥಿ ಗಳಿದ್ದಾರೆ. ಹೀಗಾಗಿ ಹೆಚ್ಚು ಅವಶ್ಯಕತೆ ಬರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದರು.
ಮುಂಬರುವ ಚುನಾವಣೆಗೆ ಬಿಜೆಪಿ ನಾಯಕರ ಪ್ರವಾಸ ಹಿನ್ನೆಲೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನಿನ್ನೆಯಿಂದ ಕಟೀಲ್ ನೇತೃತ್ವದ ತಂಡ ಪ್ರವಾಸ ಶುರುಮಾಡಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಹಳೇ ಮೈಸೂರು ಭಾಗದಲ್ಲಿ ತುಂಬಾ ಜನ ನಮ್ಮ ಪಕ್ಷ ಹಾಗೂ ಸಿಎಂ ಸಂಪರ್ಕದಲ್ಲಿ ಇದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ನಾವು ತೆಗೆದುಕೊಂಡ ನಿರ್ಣಯದ ಮೇಲೆ ವರಿಷ್ಠರು ಸಹಕಾರ ಕೊಡುತ್ತಾರೆ ಎಂದರು.
ನಾನು ಮತ್ತು ಮುಖ್ಯಮಂತ್ರಿಗಳು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪಕ್ಷ ಸೇರ್ಪಡೆಗೆ ಅಮಿತ್ ಶಾ ಬರ್ತಾರೆ ಅಂತ ಏನೂ ಇಲ್ಲ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಇದಕ್ಕೆ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆದುಕೊಳ್ಳುತ್ತೇವೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರೂ ನಮ್ಮ ಸಂಪರ್ಕ ದಲ್ಲಿದ್ದಾರೆ. ಯಾರನ್ನು ತಗೋಬೇಕು, ಅಲ್ಲಿರುವ ಸಮಸ್ಯೆಗಳ ಅವಲೋಕನ ಮಾಡಿಕೊಂಡು ನಿರ್ಧಾರ ಎಲ್ಲವನ್ನೂ ಯೋಚನೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ ಎಂದರು. ಎಲೆಕ್ಷನ್ ಕ್ಯಾಬಿನೆಟ್ ರಚಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಪ್ರಸ್ತಾಪ ಇಲ್ಲ ನಮ್ಮಲ್ಲಿ. ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು. ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸರ್ವೆ ವಿಚಾರದ ಕುರಿತು ಮಾತನಾಡಿ, ನಾವು ಎಲ್ಲ ರೀತಿಯ ಸರ್ವೆಗಳನ್ನೂ ಮಾಡುತ್ತೇವೆ. ಸರ್ವೆ ಕಾರ್ಯಗಳು ಪ್ರಾರಂಭ ಆಗುತ್ತಿವೆ. ಸರ್ಕಾರ, ಜನಾಭಿಪ್ರಾಯ ಎಲ್ಲವನ್ನೂ ನೋಡು ತ್ತೇವೆ. ಸ್ವಾಮೀಜಿಗಳಿಗೆ 50 ಕ್ಷೇತ್ರ ಬಿಟ್ಕೊಡಿ ಎಂದ ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬ್ರಹ್ಮಾನಂದ ಸ್ವಾಮೀಜಿಗಳು ನಮ್ಮ ಗುರು ಗಳು. ಅವರ ಮೇಲೆ ಅಪಾರ ಗೌರವ ಇದೆ. ರಾಜಕಾರಣದ ಬಗ್ಗೆ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ವಿಚಾರಿಸುತ್ತೇವೆ ಎಂದರು.