ರಾಜ್ಯದ ಸಂಸದರು ಬದ್ಧತೆ ಪ್ರದರ್ಶಿಸದೆ ತಮಿಳುನಾಡಿಗೆ ಕಾವೇರಿ ನೀರು ಸಿಂಹಪಾಲು
ಮೈಸೂರು

ರಾಜ್ಯದ ಸಂಸದರು ಬದ್ಧತೆ ಪ್ರದರ್ಶಿಸದೆ ತಮಿಳುನಾಡಿಗೆ ಕಾವೇರಿ ನೀರು ಸಿಂಹಪಾಲು

April 25, 2022

ತಿ.ನರಸೀಪುರ,ಏ.24(ಎಸ್‍ಕೆ)-ರಾಜ್ಯದ ಸಂಸದರು ರಾಜ್ಯದ ನದಿ ನೀರಿನ ಹಂಚಿಕೆಯಲ್ಲಿ ಬದ್ಧತೆ ಪ್ರದರ್ಶಿಸದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರಿನ ಸಿಂಹಪಾಲು ದೊರಕುವಂತಾಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪಿಸಿದರು.

ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾ ಗದ ಆವರಣದಲ್ಲಿ ನಡೆದ `ಜನತಾ ಜಲಧಾರೆ’ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ನದಿ ನೀರು ಮುಂದಿನ ಪೀಳಿಗೆಗೆ ದೊರಕಬೇಕೆ ನ್ನುವ ಸದುದ್ದೇಶದೊಂದಿಗೆ ಜಲಧಾರೆ ಕಾರ್ಯಕ್ರಮ ನಡೆಸ ಲಾಗುತ್ತಿದೆ. ನನಗೆ ಈ 90ರ ಇಳಿ ವಯಸ್ಸಿನಲ್ಲೂ ಹೋರಾಟ ಮಾಡಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಮಹ ದಾಸೆ ಇದೆ. ಆದರೆ ಕೇಂದ್ರದಲ್ಲಿ ಸಂಸದರು ರಾಜ್ಯದ ನದಿ ನೀರಿನ ಹಂಚಿಕೆ ವಿಷಯದಲ್ಲಿ ಬದ್ದತೆ ಪ್ರದರ್ಶಿಸದೆ ರಾಜ್ಯಕ್ಕೆ ಅನ್ಯಾಯವೆಸಗಿದರೆಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಜನತೆಗೆ ಆಗುವ ಅನ್ಯಾಯ ತಡೆಗಟ್ಟುವ ಸಲುವಾಗಿ ಜನತೆ ಜಾಗೃತರಾಗಬೇಕು. ವಾಜಪೇಯಿ, ಮೋದಿ, ಮನಮೋಹನಸಿಂಗ್ ಅವರು ತಮ್ಮ ಪಕ್ಷ ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡಿ ರಾಜ್ಯದ ಜನತೆ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದರು.
ಪ್ರಾದೇಶಿಕ ಪಕ್ಷ ಜ್ಯಾತ್ಯಾತೀತ ಜನತಾದಳಕ್ಕೆ 2023ರಲ್ಲಿ ನಡೆ ಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ದಾರನು ಆಶೀರ್ವದಿಸುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ದೇವೇಗೌಡರು, ರೈತಾಪಿ ವರ್ಗದ ಏಳಿಗೆಯೇ ನಮ್ಮ ಪಕ್ಷದ ಪ್ರಮುಖ ಧ್ಯೇಯವಾಗಿದೆ ಎಂದರು.

ನಾನು ಪ್ರಧಾನಿಯಾಗಿದ್ದ ವೇಳೆ ನಿರ್ಧರಿಸಿದ್ದ ಹಲವು ಮಹತ್ವದ ವಿಚಾರಧಾರೆಗಳನ್ನು ಜಾರಿ ಮಾಡುವ ಉದ್ದೇಶದೊಂದಿಗೆ ಕರ್ನಾ ಟಕದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕರ್ನಾಟಕದ ಮತದಾರರು ನಮ್ಮ ಜನಪರ ನಿರ್ಧಾರಗಳನ್ನು ಬೆಂಬಲಿಸುವ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಯೋಜನೆಯು ಗ್ರಾಮೀಣ ರೈತರ ನೀರಿನ ಬರ ನೀಗಲು ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾಲ ಮಿತಿ ಯೊಳಗೆ ಮುಗಿಸುವುದು. ರೈತರ ಉಪಯೋಗಕೋಸ್ಕರ ಹೊಸ ನೀರಾವರಿಗಳನ್ನು ಜಾರಿಗೆ ತರುವುದು. ಅಲ್ಲದೆ ರಾಜ್ಯದಲ್ಲಿ ಲಭ್ಯ ವಿರುವ ನೀರಾವರಿ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸು ವುದು. ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ರಾಜ್ಯದ ಪಾಲಿನ ನೀರನ್ನು ಹರಿಸುವಂತೆ ಸಮರ್ಥ ವಾದ ಮಂಡಿಸುವುದು ಆಗಿದೆ. ಹಾಗಾಗಿ ರಾಜ್ಯದ ರೈತರ ಬಾಳನ್ನು ಹಸನು ಮಾಡಲು ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯವನ್ನು ಲಾಭದಾಯಕವಾಗಿಬಳಸಿಕೊಳ್ಳುತ್ತಿವೆ. ಈ ಎರಡೂ ಪಕ್ಷಗಳಿಗೆ ರಾಜ್ಯದ ಪರ ಕಾಳಜಿ ಇಲ್ಲ. ರಾಷ್ಟ್ರೀಯ ಜಲನೀತಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ನೀರಿನ ಹಂಚಿಕೆ ವಿಷಯದಲ್ಲಿ ಎಲ್ಲಾ ಸಮಯದಲ್ಲೂ ತಮಿಳುನಾಡು ಪರವಾಗಿದೆ. ರಾಜ್ಯದ ಪಾಲಿನ ನೀರನ್ನು ದಕ್ಕಿಸಿಕೊಳ್ಳಲು ಎಲ್ಲಾ ತ್ಯಾಗಕ್ಕೂ ಸಿದ್ಧ. ಹಾಗಾಗಿ ಅಂತರ ರಾಜ್ಯ ನೀರಾವರಿ ವ್ಯಾಜ್ಯಗಳನ್ನು ತುರ್ತು ನಿರ್ಧಾರ ಮತ್ತು ನ್ಯಾಯ ಸಮ್ಮತವಾಗಿ ನಿರ್ಧರಿಸಿಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಜನತಾ ಜಲಧಾರೆ ಯೋಜನೆಯು ಗ್ರಾಮೀಣ ರೈತರ ಬದುಕಿನ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಹಾಗಾಗಿ ಜೆಡಿಎಸ್ ಪಕ್ಷ ನಿಶ್ಚಳ ಬಹುಮತ ಪಡೆಯುವುದರ ಜೊತೆಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪಣತೊಡಬೇಕಾಗಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಜನತಾ ಜಲಧಾರೆ ಯೋಜನೆ ರೈತಪರ ಯೋಜನೆಯಾಗಿದ್ದು, ಭವಿಷ್ಯದಲ್ಲಿ ರೈತರಿಗೆ ವರದಾನವಾಗಲಿದೆ. ಇದರ ನಿರ್ಮಾರ್ತೃ ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯದ ನೀರಾವರಿ ಸಂಪನ್ಮೂಲಗಳ ಸಂಪೂರ್ಣ ಅರಿವಿದೆ. ಅವರು ಪ್ರಧಾನಿಯಾಗಿದ್ದ ವೇಳೆ ಕೂಡ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯದ ಪರ ನಿರ್ಧಾರ ಕೈಗೊಂಡಿದ್ದರು. ಹಾಗಾಗಿ ಅವರು ರಾಜ್ಯದ ನೀರಾವರಿ ಸಂಪನ್ಮೂಲ ಗಳನ್ನು ಸದ್ಬಳಕೆ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದ್ದಲ್ಲಿ ಜನತಾದಳ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಸಾಧ್ಯ. ಹಾಗಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಕಂಕಣ ಬದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಕ್ರಮಕ್ಕೆ ಮೊದಲು ಪಟ್ಟಣಕ್ಕೆ ಆಗಮಿಸಿದ ದೇವೇಗೌಡರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಪೆಟ್ರೋಲ್ ಬಂಕ್ ಚಂದು ನೇತೃತ್ವದಲ್ಲಿ ಕಾವೇರಿ ನದಿಯಿಂದ ನೀರನ್ನು ತಂದು ಜಲಧಾರೆ ಯಾತ್ರೆಯ ವಾಹನದ ಕಳಸಕ್ಕೆ ತುಂಬಿಸಲಾಯಿತು.

ಅಶ್ವಿನ್‍ಗೆ ಮತ್ತೊಂದು ಅವಕಾಶ ನೀಡಿ: ಶಾಸಕ ಅಶ್ವಿನ್ ಕುಮಾರ್ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಸಂಭಾವಿತ ವ್ಯಕ್ತಿಯಾಗಿರುವ ಅವರು ಎಲ್ಲ ಸಮುದಾಯ ದವರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಕ್ಷೇತ್ರದಲ್ಲಿ ಉತ್ತಮವಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಮತ್ತೊಮ್ಮೆ ಅವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಹೆಚ್.ಕೆ.ರಾಮು, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಬೃಂದಾ, ಜಿಪಂ ಮಾಜಿ ಅಧ್ಯಕ್ಷ ಸಿದ್ದಾರ್ಥ, ಪುರಸಭಾ ಸದಸ್ಯ ಸಿ.ಪ್ರಕಾಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಗಂಗಾಧರ್‍ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಭು ದೇವನಪುರ ರಮೇಶ್, ಮಾಜಿ ಸದಸ್ಯ ರಾಚಪ್ಪ. ಮೂಗೂರು ಶಿವಮೂರ್ತಿ, ಸೋಸಲೆ ರಾಜೇಶ್, ಜಿಪಂ ಮಾಜಿ ಸದಸ್ಯ ಜಯಪಾಲ್ ಭರಣಿ, ತಾಲೂಕು ಮಹಿಳಾ ಅಧ್ಯಕ್ಷೆ ಯಶೋಧಮ್ಮ, ಕುಕ್ಕೂರು ಉಮಾಪತಿ ಮತ್ತಿತರರಿದ್ದರು.

Translate »