ಮೈಸೂರು,ಸೆ.4(ಪಿಎಂ)-ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾ ರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿಎಂಎಸ್) ಉಳಿಸಬೇಕೆಂದು ಆಗ್ರಹಿಸಿ ಮಹಾರಾಣಿ ಮಾದರಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶನಿ ವಾರ ಪತ್ರ ಚಳವಳಿ ನಡೆಸಲಾಯಿತು.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಕೆಆರ್ ಮೊಹಲ್ಲಾ ಉಪ ಅಂಚೆ ಕಚೇರಿ ಎದು ರಿನ ಅಂಚೆ ಪೆಟ್ಟಿಗೆಗೆ ಶಾಲೆಪರ ಹೋರಾಟ ಗಾರರು ಪತ್ರಗಳನ್ನು ಹಾಕಿದರು. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‍ನ ಬೇಲೂರು ಮಠಕ್ಕೆ ಪತ್ರಗಳನ್ನು ರವಾನಿಸಲಾಯಿತು.
ಎನ್‍ಟಿಎಂ ಶಾಲೆ ಉಳಿಸುವ ನಿಟ್ಟಿನಲ್ಲಿ ಮೈಸೂರು ರಾಮಕೃಷ್ಣ ಆಶ್ರಮದವರು ತಮ್ಮ ಧೋರಣೆ ಬದಲಿಸಿಕೊಳ್ಳುವಂತೆ ತಿಳಿ ಹೇಳ ಬೇಕೆಂದು ಕೋರಿ ಬೇಲೂರಿನ ಕೇಂದ್ರ ಮಠಕ್ಕೆ ಪತ್ರಗಳನ್ನು ಕಳುಹಿಸಿಕೊಡಲಾಯಿತು.
ಚಳವಳಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಈ ಪತ್ರ ಚಳವಳಿ ಸಾಂಕೇತಿಕವಾಗಿದ್ದು, ಲಕ್ಷ ಪತ್ರಗಳನ್ನು ಬೇಲೂರು ಮಠಕ್ಕೆ ಕಳು ಹಿಸಲಾಗುವುದು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಬಗ್ಗೆ ದೊಡ್ಡ ಗೌರವ ವಿದೆ. ರಾಮಕೃಷ್ಣ ಆಶ್ರಮದ ಮೇಲೂ ವಿಶೇಷ ಗೌರವವಿದೆ. ಆದರೆ ಮೈಸೂರು ಆಶ್ರಮದ ಸ್ವಾಮೀಜಿಯವರು ವಿವೇಕಾನಂದರ ತತ್ವ ಆದರ್ಶದಂತೆ ಕನ್ನಡ ಶಾಲೆ ಉಳಿವಿಗೆ ಪೂರಕ ವಾಗಿ ನಡೆದುಕೊಳ್ಳಬೇಕು ಎಂದು ಕೋರಿದರು.
ಶಾಲೆ ಉಳಿವಿಗಾಗಿ ಎರಡು ತಿಂಗಳಿಂದ ಚಳವಳಿ ನಡೆಸಲಾಗುತ್ತಿದೆ. ಇಂದು ರಾಮ ಕೃಷ್ಣ ಆಶ್ರಮದ ಬೇಲೂರು ಮಠಕ್ಕೆ ಪತ್ರ ಗಳನ್ನು ಕಳುಹಿಸಲಾಗುತ್ತಿದೆ. ಕನ್ನಡ ಶಾಲೆ ನೆಲಸಮ ಧೋರಣೆ ಬಿಡುವಂತೆ ಮೈಸೂರು ರಾಮಕೃಷ್ಣ ಆಶ್ರಮದವರಿಗೆ ತಿಳಿ ಹೇಳ ಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ರಾಮಕೃಷ್ಣ ಆಶ್ರಮಕ್ಕೆ ಮೈಸೂರಿನಲ್ಲಿ ನೂರಾರು ಎಕರೆ ಭೂಮಿ ಇದ್ದು, ಅದನ್ನೇ ಸದ್ಬಳಕೆ ಮಾಡಿಕೊಂಡರೆ ಸಾಕು. ಅದನ್ನು ಬಿಟ್ಟು ಕನ್ನಡ ಶಾಲೆ ನೆಲಸಮಗೊಳಿಸುವ ಚಿಂತನೆ ಸೂಕ್ತವಲ್ಲ. ಮುಖ್ಯಮಂತ್ರಿಗಳೂ ಶಾಲೆ ಉಳಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ತಾತ್ಕಾಲಿಕ ಸ್ಥಗಿತ: ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸ.ರ.ಸುದರ್ಶನ ಮಾತನಾಡಿ, ಶಾಲೆ ಉಳಿಸುವ ಹೋರಾಟ ಮುಂದುವರೆಯಲಿದೆ. ಆದರೆ ಈವರೆಗೆ ಶಾಲೆ ಎದುರು ಪ್ರತಿದಿನ ನಿರಂತರವಾಗಿ ನಡೆಸಿದ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಕೈಬಿಡಲಾಗಿದೆ. ಸೆ.6ರಿಂದ 6ರಿಂದ 8ನೇ ತರಗತಿ ಆರಂಭಿಸಲು ಸರ್ಕಾರ ಮುಂದಾ ಗಿರುವ ಹಿನ್ನೆಲೆಯಲ್ಲಿ ಅಂದು ಎನ್‍ಟಿಎಂ ಶಾಲೆಗೆ ಬರುವ ಮಕ್ಕಳನ್ನು ಒಕ್ಕೂಟದ ವತಿಯಿಂದ ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಸಿ.ಆರ್. ರಂಗಶೆಟ್ಟಿ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್‍ಕುಮಾರ್‍ಗೌಡ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ಸ.ರ.ಸುದರ್ಶನ, ಕೃಷ್ಣ ಮೂರ್ತಿ, ಮಲ್ಲಿಕಾರ್ಜುನರಾಜೇ ಅರಸ್, ಆರ್.ಎ.ರಾಧಾಕೃಷ್ಣ, ಎಲ್‍ಐಸಿ ಸಿದ್ದಪ್ಪ, ಮಿನಿ ಬಂಗಾರಪ್ಪ ಮತ್ತಿತರರು ಚಳ ವಳಿಯಲ್ಲಿ ಪಾಲ್ಗೊಂಡಿದ್ದರು.