ಬ್ಯಾಂಕ್‍ನಿಂದ ದೊಡ್ಡ ಮೊತ್ತ ಡ್ರಾ ಮಾಡುವ ಗ್ರಾಹಕರಿಗೆ ಪೊಲೀಸ್ ರಕ್ಷಣೆ ಗ್ರಾಹಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಬ್ಯಾಂಕ್‍ಗಳಿಗೆ ಪೊಲೀಸ್ ಆಯುಕ್ತರ ಪತ್ರ
ಮೈಸೂರು

ಬ್ಯಾಂಕ್‍ನಿಂದ ದೊಡ್ಡ ಮೊತ್ತ ಡ್ರಾ ಮಾಡುವ ಗ್ರಾಹಕರಿಗೆ ಪೊಲೀಸ್ ರಕ್ಷಣೆ ಗ್ರಾಹಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಬ್ಯಾಂಕ್‍ಗಳಿಗೆ ಪೊಲೀಸ್ ಆಯುಕ್ತರ ಪತ್ರ

February 18, 2021

ಮೈಸೂರು, ಫೆ.17(ಎಸ್‍ಪಿಎನ್)- ಮೈಸೂರು ನಗರ ವ್ಯಾಪ್ತಿಯ ವಿವಿಧ ಬ್ಯಾಂಕ್ ಗಳಲ್ಲಿ ಪ್ರತಿದಿನ 10 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಹಣ ಡ್ರಾ ಮಾಡುವವರ ಬಗ್ಗೆ ಹತ್ತಿರದ ಠಾಣೆಗಳಿಗೆ ಮಾಹಿತಿ ನೀಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯ ಬ್ಯಾಂಕ್ ವ್ಯವಸ್ಥಾಪಕರಿಗೆ ಪೊಲೀಸರು ಸೂಚಿಸಿದ್ದಾರೆ.

3 ತಿಂಗಳ ಹಿಂದಿನ ಘಟನೆ. ಮೈಸೂರಿನ ವಾಣಿ ವಿಲಾಸ ಮೊಹಲ್ಲಾದಲ್ಲಿನ ಹೆಚ್‍ಡಿಎಫ್‍ಸಿ ಬ್ಯಾಂಕ್ ಮುಂದೆ ತಮ್ಮ ಕಾರು ನಿಲ್ಲಿಸಿದ್ದ ಮನೋಜ್ ಕುಮಾರ್ ಎಂಬುವರು ಕಾರಿನಲ್ಲಿ 10 ಲಕ್ಷ ರೂ.ಗಳನ್ನಿಟ್ಟಿದ್ದರು. ಇದನ್ನು ಗಮನಿಸಿದ್ದ ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ರೂ.ಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧಿಕ ಹಣದೊಂದಿಗೆ ಸಂಚರಿಸುವ ಗ್ರಾಹಕರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ 5 ಅಂಶಗಳನ್ನೊಳಗೊಂಡ ಪತ್ರವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಬರೆಯ ಲಾಗಿದೆ ಎಂದು ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ‘ಮೈಸೂರು ಮಿತ್ರ’ನಿಗೆ ಬುಧವಾರ ತಿಳಿಸಿದರು.

ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವವರ ಸುರಕ್ಷತೆ ದೃಷ್ಟಿಯಿಂದ ಈ ಮಾಹಿತಿ ನೀಡುವಂತೆ ಬ್ಯಾಂಕ್‍ನವರನ್ನು ಕೋರಲಾಗಿದೆ. ಅಲ್ಲದೇ ಬ್ಯಾಂಕಿನ ಒಳ-ಹೊರಗೆ ಮತ್ತು ಒಳಗೆ ರಸ್ತೆ ಪೂರ್ಣವಾಗಿ ಕಾಣಲು ಸಿಸಿಟಿವಿ ಅಳವಡಿಸಿ, ಸುಸ್ಥಿತಿಯಲ್ಲಿಡುವಂತೆ ಸೂಚಿಸಿದ್ದಾರೆ. ಬ್ಯಾಂಕಿನ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ಅಂತಹವರ ವಿರುದ್ಧ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಬ್ಯಾಂಕಿನ ಭದ್ರತಾ ಸಿಬ್ಬಂದಿ ಜಾಗ್ರತೆಯಿಂದ ಇರುವಂತೆ ಸೂಚಿಸಲು ಎಲ್ಲಾ ಬ್ಯಾಂಕಿನ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

 

 

 

Translate »