ಮೈಸೂರಲ್ಲೂ ದೀಪ ಶಪಥ
ಮೈಸೂರು

ಮೈಸೂರಲ್ಲೂ ದೀಪ ಶಪಥ

April 6, 2020

ಮೈಸೂರು, ಏ.5- ಶ್ರೀಕೃಷ್ಣ, ನರಕಾಸುರನನ್ನು ಸಂಹರಿಸಿದ ಚತುರ್ದಶಿಯಂದು ದೀಪ ಬೆಳಗುವ ಮೂಲಕ ಕೇಡಿನ ವಿರುದ್ಧ ಶುಭದ ವಿಜಯವನ್ನು ಆಚರಿಸಲಾಗುತ್ತದೆ. ಮರುದಿನ ಕಾರ್ತಿಕ ಅಮಾವಾಸ್ಯೆಯಂದು ಬಲಿ ಚಕ್ರವರ್ತಿಯ ತ್ಯಾಗವನ್ನು ಸ್ಮರಿಸಲಾಗು ತ್ತದೆ. ಮಾಸವಿಡೀ ಮನೆಯ ಮುಂದೆ ದೀಪ ಬೆಳಗಿ ದೀಪಾವಳಿಯ ಸಂಭ್ರಮಿಸುವ ಪ್ರತೀತಿಯಿದೆ. ಆದರೆ ಭಾನುವಾರ ರಾತ್ರಿಯೂ ದೇಶದೆಲ್ಲೆಡೆ ದೀಪಾವಳಿ ಆಚರಿಸಿದ್ದಂತಿತ್ತು. ಕೊರೊನಾ ಕೇಡಿನಿಂದ ಆವರಿಸಿರುವ ಕತ್ತಲ ಸೀಳುವ ಆಶಯ ಜ್ಯೋತಿಯಾಗಿ ಕಾಣಿಸಿ ದ್ದಂತಿತ್ತು. ಮನೆಯ ಮುಂಭಾಗ, ಟೆರೇಸ್ನಲ್ಲಿ ಬೆಳಕು ಪ್ರಜ್ವಲಿಸಿತ್ತು. ಕೊರೊನಾ ವಿರುದ್ಧ ಗೆಲ್ಲುತ್ತೇವೆಂಬ ಆತ್ಮಸ್ಥೈರ್ಯ ಎಲ್ಲರ ಮೊಗದಲ್ಲಿ ಗೋಚರಿಸಿದಂತಿತ್ತು. ಜನರ ಜೀವ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವವರ ತ್ಯಾಗದ ಸ್ಮರಣೆಯೂ ಅವರಲ್ಲಿತ್ತು.

ಜಗತ್ತನ್ನೇ ಕಾಡುತ್ತಿರುವ ಕೊರೊನಾ, ಭಾರತವನ್ನೂ ವ್ಯಾಪಿಸಿದೆ. ಇದರ ಪ್ರಸರಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್‍ಡೌನ್ ದಿನಗಳನ್ನು ಅರ್ಧ ಕಳೆದಿದ್ದಾಗಿದೆ. 11 ದಿನಗಳಿಂದ ಎಲ್ಲರೂ ಮನೆಯಲ್ಲೇ ಇದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಹಣತೆ, ಕ್ಯಾಂಡಲ್, ಮೊಬೈಲ್ ಟಾರ್ಚ್ ಹೊತ್ತಿಸುವಂತೆ ಮಾಡಿದ್ದ ಮನವಿಗೆ ದೇಶವೇ ಸ್ಪಂದಿಸಿದೆ. ಅದರಂತೆ ಮೈಸೂರಿನಲ್ಲೂ ಮನೆ ಮುಂಭಾಗ, ಟೆರೇಸ್ನಲ್ಲಿ ಬೆಳಕು ಗೋಚರಿಸಿತು. ಹಣತೆ, ಕ್ಯಾಂಡಲ್ ಹಚ್ಚುವುದರ ಜತೆಗೆ ಮೊಬೈಲ್ ಟಾರ್ಚ್ ಗಳನ್ನು ಆನ್ ಮಾಡಿ, ಪ್ರಧಾನಿ ಆಶಯಕ್ಕೆ ಜೈ ಎಂದರು. ಕೆಲ ಮಹಿಳೆಯರಂತೂ ದೀಪಾವಳಿ ರೀತಿಯಲ್ಲೇ ಹಲವು ಹಣತೆಗಳ ಬೆಳಗಿದರು. ಎಲ್ಲೆಡೆ ‘ಭಾರತ್ ಮಾತಾ ಕೀ ಜೈ’ ‘ಗೋ ಕೊರೊನಾ’ ‘ಎಂಬ ಜಯಘೋಷ, ಭಜನೆ ಕೇಳಿಬಂದಿತು. ಮಠಾಧೀ ಶರು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳು, ಎಲ್ಲಾ ಧರ್ಮೀಯರೂ ದೇಶಕ್ಕೆ ಅಂಟಿರುವ ಮಹಾಮಾರಿ ಕೊರೊನಾ ಸೋಂಕು ದೂರವಾಗುವಂತೆ ಪ್ರಾರ್ಥನೆ ಸಲ್ಲಿಸಿದರು. ದೀಪ ಬೆಳಗುವುದರಿಂದ ಸೋಂಕು ಸಾಯುತ್ತದೆಯೇ? ಎಂಬ ಪ್ರಶ್ನೆಯ ನಡುವೆಯೇ ಮೈಸೂರಿನ ಜನತೆ ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು ಕೊರೊನಾ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ನಮ್ಮ ರಕ್ಷಣೆಗಿರುವ ನಿರ್ಬಂಧವನ್ನು ಒಮ್ಮತದಿಂದ ಪಾಲಿಸಿ, ಕೊರೊನಾ ವಿರುದ್ಧ ಜಯಿಸುತ್ತೇವೆಂದು ಸಂಕಲ್ಪ ತೊಟ್ಟರು.

ಸ್ವಾಮೀಜಿಗಳು ಭಾಗಿ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಸಾಧಕರು, ಸ್ವಯಂ ಸೇವಕರು ದೀಪ ಬೆಳಗುವುದರ ಜೊತೆಗೆ `ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ…’ ಶ್ಲೋಕ ಪಠಿಸಿದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜ್ಯೋತಿ ಬೆಳಕಲ್ಲಿ ದೇವರ ಧ್ಯಾನಿಸಿದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ, ರಾಮಕೃಷ್ಣ ವಿದ್ಯಾಶಾಲೆ ಸಂಚಾಲಕ ಸ್ವಾಮಿ ಯುಕ್ತೇಶಾನಂದಜೀ, ಸ್ವಾಮಿ ಪುಣ್ಯವ್ರತಾನಂದಜೀ, ಸ್ವಾಮಿ ಶಾಂತಿವ್ರತಾನಂದಜೀ ಸೇರಿದಂತೆ ಆಶ್ರಮದ ಸಿಬ್ಬಂದಿಗಳು ದೀಪ ಬೆಳಗಿಸಿದರು.

ಪಕ್ಷಾತೀತ ಪ್ರತಿಸ್ಪಂದನೆ: ಪ್ರಧಾನಿ ಮೋದಿ ಕರೆಯನ್ನು ಮೈಸೂರಿನ ರಾಜಕೀಯ ನಾಯಕರೂ ಪಕ್ಷಾತೀತವಾಗಿ ಬೆಂಬಲಿಸಿದರು. ಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಕಾರ್ಪೊರೇಟರ್ ಬಿ.ವಿ.ಮಂಜುನಾಥ್, ಕಿರಣ್‍ಗೌಡ ಸೇರಿದಂತೆ ಅನೇಕ ಮುಖಂಡರು ತಮ್ಮ ತಮ್ಮ ಕುಟುಂಬ ಸದಸ್ಯರೊಂದಿಗೆ ಹಣತೆ ಹೊತ್ತಿಸಿ, ದೇವರಿಗೆ ನಮಿಸಿದರು.

ಧರ್ಮ ಸಮನ್ವಯತೆ: ಚಾಮುಂಡಿಪುರಂನಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಒಟ್ಟಿಗೆ ಕ್ಯಾಂಡಲ್ ಬೆಳಗಿಸಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲಿಸುವುದರ ಜೊತೆಗೆ ಧರ್ಮ ಸಾಮರಸ್ಯ ಸಾರಿದರು. ಅಪೂರ್ವ ಸುರೇಶ್ ನಿವಾಸದ ಎದುರು ವಿಶೇಷವಾಗಿ ಹಣತೆಯಲ್ಲಿ ಹಣತೆಗಳಲ್ಲೇ ಪ್ರಧಾನಿ ಮೋದಿ ಅವರನ್ನು ಬಿಂಬಿಸಲಾಗಿತ್ತು. ತಿಲಕ್‍ನಗರದಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರು ಕ್ಯಾಂಡಲ್ ಲೈಟ್, ಮೊಬೈಲ್ ಟಾರ್ಚ್ ಹೊತ್ತಿಸಿದರು.

ಒಟ್ಟಾರೆ ಮೈಸೂರಿನಲ್ಲಿ ಭಾನುವಾರ ರಾತ್ರಿ ಕೆಲಹೊತ್ತು ದೀಪಾವಳಿ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಾ ಜಾತಿ, ಧರ್ಮದವರೂ ದೀಪ ಬೆಳಗಿಸುವ ಮೂಲಕ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವು ದರ ಜೊತೆಗೆ ಮನೋಸ್ಥೈರ್ಯದಿಂದ ಪರಿಸ್ಥಿತಿ ಎದುರಿಸುತ್ತೇವೆಂಬ ಸಂಕಲ್ಪ ಸಾರಿದರು.

 

Translate »