ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!
ಮೈಸೂರು

ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!

April 6, 2020

ಮೈಸೂರು, ಏ.5(ಎಂಟಿವೈ)- ಮೈಸೂರಿನಲ್ಲಿ ಸದ್ಯ ಹೋಂ ಕ್ವಾರಂಟೈನ್‍ನಲ್ಲಿರುವ ಜುಬಿಲಂಟ್ ಕಾರ್ಖಾನೆಯ ನೌಕ ರರೂ ಸೇರಿದಂತೆ ಹಲವರು ಮನೆಯಿಂದ ಹೊರಬಂದು ಓಡಾಡುತ್ತಿದ್ದು, ಸುತ್ತಲ ನಿವಾಸಿಗಳನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಮೈಸೂರಿನ ಅಗ್ರಹಾರ, ವಿಜಯನಗರ, ಗೋಕುಲಂ ಸೇರಿದಂತೆ ವಿವಿಧೆಡೆ ಇರುವ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕೊರೊನಾ ಸೋಂಕು ತಗುಲಿರಬಹುದಾದ ಶಂಕೆ ಇರುವವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದರು. ದೂರು ಬಂದ ಸ್ಥಳಗಳಿಗೆ ಭಾನುವಾರ ಮುಂಜಾನೆಯೇ ತಕ್ಷಣ ಧಾವಿಸಿದ ಜಿಲ್ಲಾಡಳಿತದ ತಂಡ, ಸ್ವಗೃಹಗಳಲ್ಲಿ ಕ್ವಾರಂಟೈನ್ ಆಗಿದ್ದವರನ್ನು ಅಲ್ಲಿಂದ ವಾಹನಗಳಲ್ಲಿ ಕರೆದೊಯ್ದಿದೆ. ಬಳಿಕ ಜಿಲ್ಲಾಡಳಿತವೇ ವ್ಯವಸ್ಥೆ ಮಾಡಿ ಸಿದ್ದ (ಕ್ವಾರಂಟೈನ್) ಲಾಡ್ಜ್‍ಗಳಲ್ಲಿ ಇರಿಸಿತು. ಕ್ವಾರಂ ಟೈನ್‍ನ ಉಳಿದ ಅವಧಿ ಪೂರ್ಣಗೊಳ್ಳುವವರೆಗೂ ಅವರನ್ನು ಲಾಡ್ಜ್‍ನಲ್ಲಿಯೇ ಇರಿಸಲು ಕ್ರಮ ಕೈಗೊಂಡಿದೆ.

ಕೊರೊನಾ ಸೋಂಕು ಮೈಸೂರಿನಲ್ಲಿ ಕ್ಷಿಪ್ರವಾಗಿ ಹರಡು ತ್ತಿರುವುದರಿಂದ ಚಿಂತೆಗೀಡಾಗಿರುವ ಜಿಲ್ಲಾಡಳಿತ `ಲಾಕ್ ಡೌನ್’ ಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟಿನಿಂದ ಜಾರಿಗೊಳಿ ಸಲು ನಿರ್ಧರಿಸಿದೆ. ಮೊದಲ ಹೆಜ್ಜೆಯಾಗಿ ಭಾನುವಾರ ಸಂಜೆಯೇ ನಗರದಲ್ಲಿನ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದೆ. ಇದರಿಂದ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡು ವವರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂಬುದು ಜಿಲ್ಲಾಡಳಿತದ ಚಿಂತನೆಯಾಗಿದೆ.

ಆಯುಕ್ತರ ಆದೇಶ: ನಗರದಲ್ಲಿ ಸದ್ಯ ಜನರಿಗೆ ದಿನಸಿ ಮೊದಲಾದ ಅಗತ್ಯ ವಸ್ತುಗಳನ್ನು ಒದಗಿಸುತ್ತಿರುವ ಅಂಗಡಿ ಮುಂಗಟ್ಟುಗಳನ್ನು ಇಂದಿನಿಂದ ಸಂಜೆ 6 ಗಂಟೆಗೇ ಬಂದ್ ಮಾಡಬೇಕು. ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಇದೇ ಕ್ರಮ ಅನುಸರಿಸಬೇಕು ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಆದೇಶಿಸಿದ್ದಾರೆ.

Translate »