ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ  ಸಿಎಂ ಬದಲಾಗಬಹುದು
ಮೈಸೂರು

ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ ಸಿಎಂ ಬದಲಾಗಬಹುದು

July 5, 2021

ಮೈಸೂರು,ಜು.4(ಎಂಕೆ)-ಸಿಎಂ ಹುದ್ದೆ ಎಂಬುದು ಮೈಸೂರು ದಸರಾ ಅಂಬಾರಿ ಹೊರುವ ಆನೆ ಇದ್ದಂತೆ. ಅದೇನು ಪರ್ಮನೆಂಟ್ ಅಲ್ಲ. ಬದಲಾವಣೆ ಪ್ರಕೃತಿ ನಿಯಮ. ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ ಸಿಎಂ ಹುದ್ದೆ ಯಲ್ಲಿರುವವರು ಬದಲಾಗಬಹುದು ಎಂದು ಪ್ರವಾಸೋ ದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ನಾಯಕತ್ವ ಬದ ಲಾವಣೆಯ ಸೂಚನೆ ನೀಡಿದರು.

ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿ ವಾಸ್ ಪ್ರಸಾದ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಕಾರ್ಯ ಕ್ರಮದ ಹಿನ್ನೆಲೆ ಮೈಸೂರಿಗೆ ಬಂದಿದ್ದೆ. ಕೋವಿಡ್‍ನಿಂದಾಗಿ ಕಳೆದೆರಡು ತಿಂಗಳಿಂದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ ಎಂದರು.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮತ್ತು ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಹುದ್ದೆ ಎಂಬುದು ಮೈಸೂರು ದಸರಾ ಅಂಬಾರಿ ಹೊರುವ ಆನೆ ಇದ್ದಂತೆ. ಆನೆಯ ತೂಕದ ಜೊತೆಗೆ ಕಡೆಯ ವರೆಗೂ ಹೊತ್ತೊಯ್ಯುವ ಸಾಮಥ್ರ್ಯವಿದೆಯೇ ಎಂಬುದು ಮುಖ್ಯ ವಾಗುತ್ತದೆ. ಅದರಂತೆ ಸಿಎಂ ಆಗುವವರು ವೈಭವಕ್ಕೆ, ಪ್ರೆಸ್ಟೀಜ್ ಗಾಗಿ ಆಗುವುದು ಅಲ್ಲ. ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಹಗಲು-ರಾತ್ರಿ ಕೆಲಸ ಮಾಡುವ ಸಂವೇದನಾಶೀಲ ರಾಗಿ ಇರಬೇಕು. ಅವರ ಆದರ್ಶಗಳು ಆಲೋಚನೆಗಳು ಸಮರ್ಥ ವಾಗಿರಬೇಕು. ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿ ಸೋಕೆ ಆಗಲ್ಲ ಎಂದು ಬಿ.ವೈ.ವಿಜಯೇಂದ್ರ
ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

ನೀವು ಬಯಸುವ ಸಂವೇದನಾಶೀಲತೆ ಯಡಿಯೂರಪ್ಪ ಅವರಿಗೆ ಇಲ್ಲವೇ? ಯಡಿ ಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನದಲ್ಲಿ ಇದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ, ಬಹಳ ಆದರ್ಶಗಳನ್ನು ಇಟ್ಟುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದೆ. ಪಕ್ಷದ ಚೌಕಟ್ಟಿನಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಹೇಳುವುದು ಸೂಕ್ತವಲ್ಲ ನಾನಿನ್ನೂ ಚಿಕ್ಕವನು. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ನನ್ನನ್ನು ಸಚಿವನನ್ನಾಗಿ ಮಾಡಿದ್ದಾರೆ. ನಾನು ಅವರ ಮಂತ್ರಿ ಮಂಡಲದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿ ಎಂದು ಕಷ್ಟಪಟ್ಟಿದ್ದೇನೆ. ನನ್ನನ್ನು ಯಡಿಯೂರಪ್ಪ ಅವರ ವಿರೋಧಿ ಎಂದು ಬಿಂಬಿಸಬೇಡಿ ಎಂದು ಮನವಿ ಮಾಡಿದರು.

ಫೌಂಡೇಶನ್ ಸ್ಟೋನ್: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜನಪರವಾಗಿಲ್ಲ ಎಂದೇ ಬಿಜೆಪಿ ಸರ್ಕಾರ ತರಲು ಸಾಕಷ್ಟು ಶ್ರಮಿಸಿದ್ದೇನೆ. ಸದ್ಯ ನನ್ನ ಪರಿಸ್ಥಿತಿ ಹೇಗಿದೆ ಎಂದರೆ ದೇವಸ್ಥಾನದ ರಾಜಗೋಪುರ ಫೌಂಡೇಶನ್ ಸ್ಟೋನ್ ಇದ್ದಂತಾಗಿದೆ. ಇಲ್ಲಿ ಚಪ್ಪಲಿ ಬಿಟ್ಟು ತಲೆ ಮೇಲೆತ್ತಿ ಕೈ ಮುಗಿಯುತ್ತಾರೆ ಹೊರತು ನನ್ನನ್ನು ಯಾರು ನೋಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸರಿಯಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಳೆದ ಚುನಾವಣೆಯೆ ನನ್ನ ಕಡೆ ಚುನಾವಣೆ ಎಂದವರು ಮತ್ತೆ ಸಿಎಂ ಎನ್ನುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವನ್ನು 25 ಪರ್ಸೆಂಟ್ ಸರ್ಕಾರ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಪ್ಪು. ಅವರ ಸರ್ಕಾರ ಅಧಿಕಾರದಲ್ಲಿದ್ದಾಗ 10 ಪರ್ಸೆಂಟ್ ಸರ್ಕಾರ ಎಂದೇ ಜಗಜಾಹೀರು ಆಗಿತ್ತು. ನಾನು ಎಲ್ಲಿಯೂ ಲಂಚ ಪಡೆದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆಗಿದ್ದರೂ ನಮ್ಮವರನ್ನೆಲ್ಲಾ ಒಟ್ಟಿಗೆ ಸೇರಿಸಿ 25 ಪರ್ಸೆಂಟ್ ಎಂದು ಟೀಕಿಸುವುದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ಏನಾದರೂ ವೈಯಕ್ತಿಕ ವಿಚಾರವಿದ್ದರೆ ಕೇಸ್ ಹಾಕಿ ರುಜುವಾತು ಮಾಡಿಕೊಳ್ಳಲಿ. ಅದನ್ನು ಬಿಟ್ಟು ಈಗೆಲ್ಲಾ ಹೇಳಿಕೆ ನೀಡಬಾರದು. ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಅಧಿಕೃತ ಹುದ್ದೆಯಲ್ಲಿಲ್ಲ: ಸರ್ಕಾರದ ವಿರುದ್ಧ ಬಿಜೆಪಿ ಶಾಸಕರೇ ಆರೋಪ ಮಾಡುತ್ತಿರುವ ಕುರಿತು ಮಾತನಾಡಿ, ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಏನನ್ನೂ ಮಾತನಾಡುವುದಿಲ್ಲ. ಯಾಕೆಂದರೆ ಸರ್ಕಾರದಲ್ಲಿ ಅವರು ಯಾವುದೇ ಅಧಿಕೃತ ಹುದ್ದೆಯಲಿಲ್ಲ. ಅದರ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಉತ್ತರಿಸಿದ್ದೇನೆ. ಸರ್ಕಾರದ ವಿರುದ್ಧವಾಗಿ ಮಾತನಾಡುವ ಪ್ರಶ್ನೆಯೇ ಇಲ್ಲ. ಆದರೆ ಜನಸಾಮಾನ್ಯರಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಇಲ್ಲದಂತಹ ಭಾವನೆ ಮೂಡುತ್ತಿರುವುದು ನನಗಾಗುತ್ತಿರುವ ನೋವು, ಚಡಪಡಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೊಡ್ಡ ಷ್ಯಡಂತ್ರ: ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ರಮೇಶ್ ಜಾರಕಿಹೊಳಿ ದೊಡ್ಡ ಷ್ಯಡಂತ್ರಕ್ಕೆ ಬಲಿಯಾದರು. ಅವರಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ನ್ಯಾಯ ಕೊಡು ವುದರಲ್ಲಿಯೂ ತಡ ಮಾಡುತ್ತಿದ್ದಾರೆ ಎಂಬುದು ನನಗೂ ಮತ್ತು ರಮೇಶ್ ಜಾರಕಿಹೊಳಿಯವರಿಗೂ ಗೊತ್ತಿದೆ ಎಂದು ಹೇಳಿದರು. ಹಾಗೆಯೇ ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರವಾಗಿ, ಅಂಗೈ ಹುಣ್ಣಿಗೆ ಕನ್ನಡಿಯಾಕೆ. ಕರೆದು ಹೇಳ ಬಹುದಿತ್ತು. ದೂರು ಕೊಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.

Translate »