LKG,UKG ಆರಂಭ: ಮೊದಲ ದಿನವೇ ಶೇ.50.10ರಷ್ಟು ಹಾಜರಿ
ಮೈಸೂರು

LKG,UKG ಆರಂಭ: ಮೊದಲ ದಿನವೇ ಶೇ.50.10ರಷ್ಟು ಹಾಜರಿ

November 9, 2021

ಮೈಸೂರು, ನ.8(ಎಂಟಿವೈ)-ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತ ಗೊಳಿಸಲಾಗಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್‍ಕೆಜಿ, ಯುಕೆಜಿ) ತರಗತಿಗಳು ಸೋಮವಾರ ದಿಂದ ಪುನರಾರಂಭವಾಯಿತು. ಮೊದಲ ದಿನವೇ ನೋಂದಾಯಿತ 15,041 ಮಕ್ಕಳಲ್ಲಿ ಶೇ.50.10ರಂತೆ 7617 ಮಕ್ಕಳು ತರಗತಿಗೆ ಹಾಜರಾಗುವ ಮೂಲಕ ಕಲಿಕಾ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಶಾಲಾ-ಕಾಲೇಜನ್ನು ಹಂತ ಹಂತವಾಗಿ ಪುನರಾರಂಭಿಸಿದ ಬೆನ್ನಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ತಜ್ಞರ ಅಭಿಪ್ರಾಯದಂತೆ ಇಂದಿನಿಂದ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿದ್ದು, 20 ತಿಂಗಳ ಸುದೀರ್ಘ ಅವಧಿ ನಂತರ ಮಕ್ಕಳು ಯಾವುದೇ ಆತಂಕವಿಲ್ಲದೆ ಶಾಲೆಗಳತ್ತ ಆಗಮಿಸಿದರು.
ಮನೆ ಮಾಡಿದ ಸಂಭ್ರಮ: ಕಲಿಯಲು ಶಾಲೆಗೆ ಬಂದ ಪುಟಾಣಿಗಳನ್ನು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂಭ್ರಮದಿಂದ ಬರಮಾಡಿಕೊಂಡರು. ಮೊದಲ ದಿನ ಮಕ್ಕಳನ್ನು ಮುದಗೊಳಿಸುವ ಹಾಗೂ ತಗರತಿಗೆ ಆಕರ್ಷಣೆ ಮಾಡುವುದಕ್ಕಾಗಿ ಶಾಲಾ ಆವರಣವನ್ನು ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿ, ಗುಲಾಬಿ ವಿತರಿಸಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕೆಲವು ಶಾಲೆ ಗಳಲ್ಲಿ ಮಕ್ಕಳಿಗೆ ಆಟಿಕೆಯನ್ನು ಉಡುಗೊರೆಯಾಗಿ ನೀಡಲಾಯಿತು. ಮತ್ತಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಆರತಿ ಬೆಳಗಿ ದೃಷ್ಠಿ ತೆಗೆದು ಬರಮಾಡಿಕೊಂಡರು. ಪುಟಾಣಿಗಳ ಆಗಮನದಿಂದ ಶಾಲಾ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಶೇ.50.01ರಷ್ಟು ಹಾಜರಿ: ಮೈಸೂರು ಜಿಲ್ಲೆಯಲ್ಲಿರುವ 1876 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 43 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲಾ ತರಗತಿ ನಡೆಯುತ್ತಿವೆ. ಅವುಗಳಲ್ಲಿ ಎಲ್‍ಕೆ.ಜಿ ಹಾಗೂ ಯುಕೆಜಿಗೆ 1010 ಮಕ್ಕಳು ತರಗತಿಗೆ ಹಾಜರಾಗಲು ಹೆಸರು ನೊಂದಾಯಿಸಲಾಗಿತ್ತು. ಅದರಲ್ಲಿ ಶೇ.52ರಷ್ಟು 532 ಮಕ್ಕಳು ತರಗತಿಗೆ ಹಾಜರಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿರುವ 132 ಅನುದಾನಿತ ಶಾಲೆಯಲ್ಲಿ 25 ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಯುತ್ತಿದ್ದು 445 ಮಕ್ಕಳು ಹೆಸರು ನೋಂದಾ ಯಿಸಿದ್ದರು. ಅವರಲ್ಲಿ ಶೇ.56ರಷ್ಟರಂತೆ 251 ಮಕ್ಕಳು ತರಗತಿಗೆ ಹಾಜರಾಗಿದ್ದರು. 582 ಅನುದಾನ ರಹಿತ ಶಾಲೆಯಲ್ಲಿ 321 ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಯುತ್ತಿವೆ. ಅದರಲ್ಲಿ 13,586 ವಿದ್ಯಾರ್ಥಿಗಳು ದಾಖಲಾಗಿದ್ದರು. ಅವರಲ್ಲಿ ಶೇ.50.3ರ ಸರಾಸರಿ ಯಂತೆ 6834 ಮಕ್ಕಳು ತರಗತಿಗೆ ಹಾಜರಾಗಿದ್ದರು. ಜಿಲ್ಲೆಯಲ್ಲಿರುವ 2625 ಪ್ರಾಧಮಿಕ ಶಾಲೆಗಳಲ್ಲಿ ಕೇವಲ 100 ಶಾಲೆಗಳಲ್ಲಿ ಮಾತ್ರ ಪೂರ್ವ ಪ್ರಾಥಮಿಕ ತರಗತಿ ನಡೆಯುತ್ತಿವೆ. ಅವುಗಳಲ್ಲಿ ಕಲಿಯಲು 15,041 ಮಕ್ಕಳನ್ನು ನೊಂದಾ ಯಿಸಲಾಗಿತ್ತು. ತರಗತಿ ಆರಂಭವಾದ ಮೊದಲ ದಿನವಾದ ಇಂದು 7,617 ಮಕ್ಕಳು ತರಗತಿಗೆ ಹಾಜರಾದರೆ, 7424 ಗೈರು ಹಾಜರಾಗಿದ್ದಾರೆ. ಎಸ್‍ಎಟಿಎಸ್ ತಂತ್ರಾಂಶದ ಮೂಲಕ ಎಲ್‍ಕೆಜಿಗೆ 2536 ಹಾಗೂ ಯುಕೆಜಿಗೆ 3340 ವಿದ್ಯಾರ್ಥಿಗಳನ್ನು ಪ್ರಾಥಮಿಕ ಪೂರ್ವ ಶಿಕ್ಷಣಕ್ಕೆ ಕಳುಹಿಸಿಕೊಡಲು ಮಕ್ಕಳ ಪೋಷಕರು ಹೆಸರು ನೋಂದಾಯಿಸಿದ್ದರು. ಉಳಿದ ಮಕ್ಕಳನ್ನು ಶಾಲೆಯಲ್ಲೇ ಹೆಸರು ನೋಂದಾಯಿಸಿ ತರಗತಿಗೆ ಕಳುಹಿಸಲು ಪೋಷಕರು ಮುಂದಾಗಿ ದ್ದರು. ನೊಂದಾಯಿತ ಮಕ್ಕಳಲ್ಲಿ ಶೇ.50.10ರಷ್ಟು ಮೊದಲ ದಿನವೇ ತರಗತಿಗೆ ಆಗಮಿಸಿದ್ದ ಗಮನಾರ್ಹ ಬೆಳವಣಿ. ಮುಂದಿನ ದಿನಗಳಲ್ಲಿ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡು ಬರಲಿದೆ.

Translate »