ಮೈಸೂರು, ಜೂ.24(ಎಸ್‍ಪಿಎನ್)-ಕಬಿನಿ ಜಲಾಶಯದಲ್ಲಿ ಹಲವು ವರ್ಷಗಳಿಂದ ಕಬಿನಿ ಗಿರಿಜನ ಮೀನುಗಾರರ ಸಹಕಾರ ಸಂಘಕ್ಕೆ ನೀಡಿರುವ ಮೀನುಗಾರಿಕೆ ಗುತ್ತಿಗೆಯನ್ನು ರಾಜ್ಯ ಸರ್ಕಾರ ಹಿಂಪಡೆದು, ಸ್ಥಳೀಯ ಮೀನುಗಾರರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಕಬಿನಿ ಹಿನ್ನೀರು ಪ್ರದೇಶದ ಮೀನುಗಾರರು ಬುಧವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಒಳನಾಡು ಮೀನು ಗಾರರ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಗೌಡ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಮಾಜಿ ನಿರ್ದೇಶಕ ಚನ್ನಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಚನ್ನಪ್ಪ, ಹಲವು ವರ್ಷಗಳಿಂದ ಕಬಿನಿ ಗಿರಿಜನ ಮೀನುಗಾರರ ಸಹಕಾರ ಸಂಘಕ್ಕೆ ರಾಜ್ಯ ಸರ್ಕಾರ ಮೀನು ಹಿಡಿಯುವ ಗುತ್ತಿಗೆ ನೀಡಿದೆ. ಇದರಿಂದ ಕಬಿನಿ ಹಿನ್ನೀರಿನ 35 ಗ್ರಾಮಗಳ 2 ಸಾವಿರ ಮೀನುಗಾರ ಕುಟುಂಬ ಗಳಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ಆರೋಪಿಸಿದರು.
ಹಾಗಾಗಿ, ಕೆಆರ್‍ಎಸ್ ಹಾಗೂ ಹೇಮಾವತಿ ಜಲಾಶಯದಲ್ಲಿ ಸ್ಥಳೀಯ ಮೀನುಗಾರರಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದಂತೆ ಕಬಿನಿ ಜಲಾಶಯದ ಹಿನ್ನೀರಿನಲ್ಲೂ ಸ್ಥಳೀಯ ಮೀನುಗಾರರಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಬಿನಿ ಹಿನ್ನೀರು ವ್ಯಾಪ್ತಿಗೆ ಬರುವ ಗಂಡಸೂರು, ಹೊಸಹಳ್ಳಿ ಹಾಡಿ, ಬ್ರಹ್ಮಗಿರಿ, ಬೀರಂಬಳ್ಳಿ, ಜಕ್ಕಳ್ಳಿ, ಎನ್.ಬೇಗೂರು, ಗುಂಡನ ಮಾಳ, ಬೋರೆದೇವರ ಮಂಟಿ, ಜಕ್ಕನಕೋಟೆ, ಕೆಂಚನಹಳ್ಳಿ, ಕಳಸೂರು, ಬಸವಾಪುರ, ಹೊಸಕೆರೆತುಂಡ, ಚರಣಿ ಮಂಟಿ, ಬಿದರಹಳ್ಳಿ, ನೇರಳೆಹೊಸೂರು, ರಾಮೇನಹಳ್ಳಿ, ಬೆಲೆಮರದ ತಿಟ್ಟು, ಕೆಂಪೇಗೌಡನಹುಂಡಿ, ಸೋಗಳ್ಳಿ, ಮಗ್ಗೆ, ಕಾರೆಪುರ, ಗುಂಡತ್ತೂರು ಮತ್ತಿತರೆ ಗ್ರಾಮದ ಮೀನುಗಾರರಿಗೆ ಕೆಲಸವಿಲ್ಲದಂತಾಗಿದೆ. ಈ ಕುಟುಂಬಗಳಿಗೆ ಕಬಿನಿ ಜಲಾಶಯದಲ್ಲಿ ಅವಕಾಶ ಕಲ್ಪಿಸುವಂತೆ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಸ್ಥಳೀಯ ಮೀನು ಗಾರರಾದ ಎಜ್ಜುರಯ್ಯ, ಪುಟ್ಟಮಾದಯ್ಯ, ಸೋಮಣ್ಣ, ಸಣ್ಣಸ್ವಾಮಿ, ವಕೀಲ ರಜನಿಕಾಂತ್, ಕೂಸೇಗೌಡ, ಕುಮಾರ ಉಪಸ್ಥಿತರಿದ್ದರು.