ಲಾಕ್‍ಡೌನ್ ಪರಿಣಾಮ ಟೈಲರಿಂಗ್ ಮೆಷಿನ್ ಸ್ತಬ್ಧ: ಸಂಕಷ್ಟದಲ್ಲಿ ಟೈಲರ್‍ಗಳು
ಮೈಸೂರು

ಲಾಕ್‍ಡೌನ್ ಪರಿಣಾಮ ಟೈಲರಿಂಗ್ ಮೆಷಿನ್ ಸ್ತಬ್ಧ: ಸಂಕಷ್ಟದಲ್ಲಿ ಟೈಲರ್‍ಗಳು

April 14, 2020

ಮೈಸೂರು, ಏ.13(ಆರ್‍ಕೆಬಿ)- ಕೋವಿಡ್-19 ಲಾಕ್‍ಡೌನ್ ನಿಂದಾಗಿ ಅಂದಂದಿನ ದುಡಿಮೆಯ ಲ್ಲಿಯೇ ಜೀವನ ಸಾಗಿಸುವ ಅನೇ ಕರ ಜೀವನ ದುಸ್ತರವಾಗಿದೆ. ದಿನ ನಿತ್ಯ ಬಟ್ಟೆ ಹೊಲೆದು ಜೀವನ ನಿರ್ವಹಿಸುವ ಟೈಲರ್‍ಗಳ ಸ್ಥಿತಿಯೂ ಮೂರಾಬಟ್ಟೆಯಾಗಿದೆ. ಟೈಲರಿಂಗ್ ಮೆಷಿನ್‍ಗಳು ಸ್ತಬ್ಧವಾಗಿ ರುವ ಹಿನ್ನೆಲೆಯಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಟ್ಟೆ ಹೊಲಿದರೆ ಮಾತ್ರ ಜೀವನ, ಪ್ರತಿನಿತ್ಯ ಬಟ್ಟೆ ಹೊಲೆದು ಸಿಗುವ ಅಷ್ಟಿಷ್ಟು ಹಣದಲ್ಲಿಯೇ ಕುಟುಂಬ ನಿರ್ವಹಣೆ ಮಾಡುವ ಟೈಲರ್ ವೃತ್ತಿಯನ್ನೇ ನಂಬಿ ಬದುಕಿರುವ ಸಾವಿರಾರು ಕುಟುಂಬ ಗಳು ಮೈಸೂರಿನಲ್ಲಿವೆ. ಕಳೆದ ಮಾ.22ರಂದು ಜನತಾ ಕಫ್ರ್ಯೂ ದಿನದಿಂದ ಈಗ ಲಾಕ್‍ಡೌನ್ ಅವಧಿಯಲ್ಲಿ ಇಂದಿಗೂ ಕೆಲಸವಿಲ್ಲದೆ, ಹಣವೂ ಇಲ್ಲದೆ ಕುಟುಂಬ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. ಬಟ್ಟೆ ಹೊಲೆಯುವುದನ್ನು ಬಿಟ್ಟರೆ ಬೇರೆ ಯಾವುದೇ ಉದ್ಯೋಗದ ಅರಿವಿಲ್ಲದ ಟೈಲರ್‍ಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳಾದ ದಿನಸಿ, ಮನೆ ಮತ್ತು ಅಂಗಡಿಗಳ ಬಾಡಿಗೆ  ವೆಚ್ಚ ಸರಿದೂಗಿಸ ಲಾಗದೆ ಚಡಪಡಿಸುವಂತಾಗಿದೆ.

ಅಸಂಘಟಿತ ವಲಯವಾದ ಟೈಲರ್‍ಗಳ ನೆರವಿಗೆ ಇದುವ ರೆಗೂ ಸರ್ಕಾರ ಮುಂದಾಗಿಲ್ಲ. ಲಾಕ್‍ಡೌನ್‍ನಿಂದಾಗಿ   ಅಂಗಡಿ ತೆಗೆಯುವಂತಿಲ್ಲ. ಕೈಯ್ಯಲ್ಲಿ ಕಾಸಿಲ್ಲದ ಸ್ಥಿತಿಯಲ್ಲಿ ಕಾಲ ದೂಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಸಂಘ ಸಂಸ್ಥೆಗಳು ಆಹಾರ ಕಿಟ್‍ಗಳನ್ನು ನೀಡುತ್ತಿದ್ದರೂ ಅದು ಎಲ್ಲ ಟೈಲರ್‍ಗಳನ್ನು ತಲುಪುತ್ತಿಲ್ಲ್ಲ. ಸರ್ಕಾರದ ರೇಷನ್ ಕೂಡ ನ್ಯಾಯಬೆಲೆ ಅಂಗಡಿ ಗಳಲ್ಲಿ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಬದುಕುತ್ತಿರುವ ಟೈಲರ್‍ಗಳ ನೆರವಿಗೆ ಸರ್ಕಾರ ಧಾವಿಸ ಬೇಕು ಎಂದು ಮೈಸೂರು ಟೈಲರ್‍ಗಳ ಸಂಘ ಮನವಿ ಮಾಡಿದೆ..

 

ನನ್ನ ಆರೋಗ್ಯ ಸರಿಯಿಲ್ಲ. ವೃತ್ತಿಯನ್ನೇ ನಂಬಿ ಬದುಕು  ಸಾಗಿಸುತ್ತಿದ್ದೇನೆ. ಈಗ ಇದ್ದಕ್ಕಿದ್ದ ಹಾಗೆ ಕೊರೊನಾ ವೈರಸ್ ಹಾವಳಿ ನಮ್ಮ ಸಣ್ಣಪುಟ್ಟ ದುಡಿಮೆಯನ್ನೇ ಕಸಿದು ಕೊಂಡಿದೆ. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಇದ್ದೇನೆ. ದುಡಿದರೆ ಉಂಟು, ಇಲ್ಲದಿದ್ದರೆ ಇಲ್ಲ ಎಂಬಂತಹ ಸ್ಥಿತಿಯಲ್ಲಿ ಜೀವನ ನಿರ್ವಹಿಸುವ ನಮಗೆ ಯಾರು ದಿಕ್ಕು?  -ನಾಗೇಂದ್ರ, ಮಂಡಿ ಮೊಹಲ್ಲಾ, ಮೈಸೂರು.

 

 

 

Translate »