ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಅವಿರತ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು
ಮೈಸೂರು

ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಅವಿರತ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು

April 14, 2020
  • ಕೊರೊನಾ ಸೋಂಕಿತರು, ಶಂಕಿತರ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹ
  • ಲಾಕ್‍ಡೌನ್ ಸಮಯದಲ್ಲೂ ಕರ್ತವ್ಯನಿಷ್ಠೆ ಮೆರೆಯುತ್ತಿರುವ ಶ್ರಮಜೀವಿಗಳು ಮೈಸೂರಲ್ಲಿದ್ದಾರೆ 1824 ಮಂದಿ ಆಶಾ ಕಾರ್ಯಕರ್ತೆಯರು

ಮೈಸೂರು, ಏ.13-ಭಾರತದಲ್ಲಿ ನೊವೆಲ್ ಕೊರೊನಾ ಸಮುದಾಯಕ್ಕೆ ವ್ಯಾಪಿಸ ದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜೊತೆ ಆಶಾ ಕಾರ್ಯಕರ್ತೆ ಯರು ಅವಿರತ ಶ್ರಮಿಸುತ್ತಿದ್ದಾರೆ. ನಂಜನ ಗೂಡು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಂಕಿತರು, ಶಂಕಿತರ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕುವ ಮೂಲಕ ಕೊರೊನಾ ವಾರಿಯರ್ಸ್ ಪಟ್ಟಿಯಲ್ಲಿ ಗೌರ ವಕ್ಕೆ ಪಾತ್ರರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲೂ ಭಯದ ವಾತಾವರಣ ಸೃಷ್ಟಿಸಿದ್ದ ಕೊರೊನಾಗೆ ಕಡಿ ವಾಣ ಹಾಕಲು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡಿದೆ. ವೈದ್ಯರು, ದಾದಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿದ್ದರೆ, ಕೊರೊನಾ ಮಹಾಮಾರಿ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಬೀದಿ ಯಲ್ಲಿ ಓಡಾಡುವವರನ್ನು ನಿಯಂತ್ರಿಸಲು ಪೊಲೀಸ್, ಹೋಮ್‍ಗಾರ್ಡ್‍ಗಳು ಪರಿ ಶ್ರಮಪಡುತ್ತಿದ್ದಾರೆ. ಈ ನಡುವೆ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ, ನಿವಾಸಿಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕುವುದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

1824 ಕಾರ್ಯಕರ್ತೆಯರು: ಮೈಸೂರು ಜಿಲ್ಲೆಯಲ್ಲೂ ಹಾಲಿ 39 ಮಂದಿ ಸೋಂಕಿತ ರಿದ್ದು, 1531 ಮಂದಿ ಹೋಮ್ ಕ್ವಾರಂ ಟೈನ್‍ನಲ್ಲಿದ್ದಾರೆ. ಅಲ್ಲದೆ ಬೇರೆ ಬೇರೆ ಮೂಲ ಗಳಿಂದ ಸೋಂಕು ಇತರರಿಗೂ ಹರಡಿರ ಬಹುದೆಂಬ ಅನುಮಾನದಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೂ ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಮನೆಯಿಂದ ಹೊರಗೆ ಬರದಂತೆ ತಡೆಯಲು ಪೊಲೀಸ ರೊಂದಿಗೆ ಆಶಾ ಕಾರ್ಯಕರ್ತೆಯರ ಕಣ್ಗಾ ವಲು ಹಾಕಲಾಗಿದೆ. ಮೈಸೂರು ನಗರ ದಲ್ಲಿ 92, ತಾಲೂಕಲ್ಲಿ 280, ನಂಜನ ಗೂಡು ತಾಲೂಕಲ್ಲಿ 320, ಕೆ.ಆರ್.ನಗರ ತಾಲೂಕಲ್ಲಿ 209, ಟಿ.ನರಸೀಪುರ ತಾಲೂಕಲ್ಲಿ 253, ಹೆಚ್.ಡಿ.ಕೋಟೆ ತಾಲೂಕಲ್ಲಿ 240, ಪಿರಿಯಾಪಟ್ಟಣ 192, ಹುಣಸೂರು ತಾಲೂಕಲ್ಲಿ 220 ಮಂದಿ ಒಟ್ಟು ಜಿಲ್ಲೆಯಲ್ಲಿ 1824 ಮಂದಿ ಆಶಾ ಕಾರ್ಯಕರ್ತೆ ಯರು ಕಾರ್ಯನಿರತರಾಗಿದ್ದಾರೆ.

ಕರ್ತವ್ಯವೇನು: ಎಲ್ಲಾ ಆಶಾ ಕಾರ್ಯಕರ್ತ ರಿಗೂ ಜವಾಬ್ದಾರಿ ವಹಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ತೆರಳಿ, ಕುಟುಂಬ ಸದಸ್ಯರ ಸಂಖ್ಯೆ, ಅವರ ಆರೋಗ್ಯ ಸ್ಥಿತಿಗತಿ, ಯಾರಲ್ಲಾ ದರೂ ಕೆಮ್ಮು, ನೆಗಡಿ, ಗಂಟಲು ಉರಿ ಯಂತಹ ಸಮಸ್ಯೆ ಇದೆಯಾ ಎನ್ನುವು ದನ್ನು ಪರಿಶೀಲಿಸುತ್ತಾರೆ. ಆ ಸಮಸ್ಯೆ ಕಂಡು ಬಂದರೆ ಅದನ್ನು ನಮೂದಿಸಿಕೊಂಡು ತಮ್ಮ ವ್ಯಾಪ್ತಿಯ ವೈದ್ಯಾಧಿಕಾರಿಗೆ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಬೇರೆಡೆಯಿಂದ ಹೊಸಬರು ಮನೆಗೆ ಬಂದಿದ್ದಾರಾ ಎಂಬ ಮಾಹಿತಿಯನ್ನೂ ಪಡೆಯುತ್ತಿದ್ದಾರೆ.

ಹಿಂದಿರುಗಿ ಬಂದಿದ್ದವರಿಗೆ ಆರೋಗ್ಯ ತಪಾಸಣೆ: ಕೆಲಸದ ನಿಮಿತ್ತ ಬೇರೆ ಬೇರೆ ಊರು, ನಗರ, ರಾಜ್ಯಗಳಿಗೆ ವಲಸೆ ಹೋಗಿ ದ್ದವರು ಕೊರೊನಾ ಭಯದಿಂದ ಸ್ವಗ್ರಾ ಮಕ್ಕೆ ಹಿಂದಿರುಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹವರ ಸಂಖ್ಯೆ ಹೆಚ್ಚಾ ಗಿದೆ. ಇದನ್ನು ಪತ್ತೆ ಹಚ್ಚಿ ವರದಿ ನೀಡುವ ಜವಾಬ್ದಾರಿ ಆಶಾ ಕಾರ್ಯಕರ್ತೆಯರದ್ದು. ಅಲ್ಲದೆ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, 14 ದಿನ ಹೋಮ್ ಕ್ವಾರಂ ಟೈನ್‍ನಲ್ಲಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇವರ ಮೇಲಿದೆ.

ಸವಾಲಿನ ಕೆಲಸ: ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಿರುವ ಮೈಸೂರಿನ ಕೆಲ ಬಡಾವಣೆ, ನಂಜನಗೂಡು ತಾಲೂಕು, ಬನ್ನೂರು ಹೋಬಳಿ, ಹೆಚ್.ಡಿ.ಕೋಟೆ ತಾಲೂಕಿನ ಗಡಿ ಗ್ರಾಮ, ಹಾಡಿಗಳಲ್ಲಿ ಆಶಾ ಕಾರ್ಯಕರ್ತೆಯರು ಬಿಡುವಿಲ್ಲ ದಂತೆ ದುಡಿಯುತ್ತಿದ್ದಾರೆ. ನಗರ ಪ್ರದೇಶ ದಲ್ಲಿ ಮಾಹಿತಿ ಸಂಗ್ರಹಕ್ಕೆ ಮನೆಗೆ ಬರುವ ಆಶಾ ಕಾರ್ಯಕರ್ತೆಯರೊಂದಿಗೆ ಕೆಲ ವರು ಸಹಕರಿಸುವುದಿಲ್ಲ. ಮತ್ತೆ ಕೆಲವರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಬೆಂಗ ಳೂರಿನಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮೈಸೂರಲ್ಲಿ ಇದೀಗ ಆಶಾ ಕಾರ್ಯರ್ತರ ಮೇಲೆ ದರ್ಪ, ದೌಲತ್ತು ತಗ್ಗಿದೆ. ನಂಜನಗೂಡಲ್ಲಿ ಪ್ರತಿ ಬಡಾವಣೆ ಹಾಗೂ ಗ್ರಾಮಗಳಲ್ಲೂ ಆಶಾ ಕಾರ್ಯ ಕರ್ತೆಯರು ಭಯದಲ್ಲೇ ಕೆಲಸ ಮಾಡುವಂ ತಾಗಿದೆ. ಆರೋಗ್ಯ ಇಲಾಖೆ ಮಾಸ್ಕ್ ಮಾತ್ರ ನೀಡಿದೆ. ಬನ್ನೂರು, ಹೆಚ್.ಡಿ.ಕೋಟೆ ಯಲ್ಲಿ ದೆಹಲಿಯ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಇರುವುದರಿಂದ ಹಾಗೂ ಹೆಚ್.ಡಿ.ಕೋಟೆಯಲ್ಲಿ ಕೇರಳಕ್ಕೆ ಕೂಲಿ ಸೇರಿದಂತೆ ವಿವಿಧ ಕೆಲಸಕ್ಕೆ ಹೋಗಿ ಬಂದವರ ಸಂಖ್ಯೆಯೂ ಹೆಚ್ಚಾಗಿರುವು ದರಿಂದ ಆ ಭಾಗದ ಆಶಾ ಕಾರ್ಯಕರ್ತೆ ಯರಲ್ಲಿ ಆತಂಕವಿದೆ.

ಭಿತ್ತಿಪತ್ರ ವಿತರಣೆ: ಕೊರೊನಾ ನಿಯಂ ತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ಮನೆಗೆ ಕರಪತ್ರ ಹಂಚಲಾಗುತ್ತಿದೆ. ಸಾಮಾಜಿಕ ಅಂತರ ವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು, ಆಗಾಗ ಸೋಪ್ ಹಾಕಿ ಕೈ ತೊಳೆದುಕೊಳ್ಳ ಬೇಕು, ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಎಲ್ಲೆಂದರಲ್ಲಿ ಉಗುಳಬಾರದು, ಕೆಮ್ಮು ಮತ್ತು ಸೀನುವಾಗ ಅಡ್ಡಲಾಗಿ ಕರ್ಚಿಫ್ ಅಥವಾ ತೋಳನ್ನು ಇಟ್ಟುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಕಡ್ಡಾಯವಾಗಿ ಲಾಕ್‍ಡೌನ್ ಮುಗಿಯುವವರೆಗೂ ಮನೆ ಯಲ್ಲೇ ಇರಬೇಕೆಂದು ಹೀಗೆ ಸುರಕ್ಷತಾ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಮನೆಗೆ ಹೋಗುವಾಗ ಎರಡು ಮೂರು ಆಶಾ ಕಾರ್ಯಕರ್ತೆಯರು, ತಮ್ಮ ಸುರಕ್ಷತೆ ದೃಷ್ಟಿ ಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ ಅಥವಾ ಆಯಾ ಗ್ರಾಪಂ ಸದಸ್ಯರ ನೆರವು ಪಡೆಯಲು ಮುಂದಾಗಿದ್ದಾರೆ. ಪ್ರತಿ ತಿಂಗಳು ಸರ್ಕಾರ ಆಶಾ ಕಾರ್ಯಕರ್ತೆ ಯರಿಗೆ 4 ಸಾವಿರ ಗೌರವಧನ ನೀಡುತ್ತಿದ್ದು, ಕೊರೊನಾ ವಿಶೇಷ ಕರ್ತವ್ಯಕ್ಕೆ ಒಂದು ಸಾವಿರ ರೂ. ಭತ್ಯೆ ನೀಡುವುದಾಗಿ ಸರ್ಕಾರ ಘೋಷಿ ಸಿದೆ. ಜನರ ಮೂಲ ಸಮಸ್ಯೆಗೆ ಸ್ಪಂದಿ ಸುವ ಇವರ ಸೇವೆಗೆ ಸಾರ್ವಜನಿಕರ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »