ಮೈಸೂರಲ್ಲಿ ಜುಲೈ 5ರವರೆಗೆ ಲಾಕ್‍ಡೌನ್ ಮುಂದುವರಿಕೆ
ಮೈಸೂರು

ಮೈಸೂರಲ್ಲಿ ಜುಲೈ 5ರವರೆಗೆ ಲಾಕ್‍ಡೌನ್ ಮುಂದುವರಿಕೆ

June 21, 2021

ಮೈಸೂರು, ಜೂ. 20(ಎಂಟಿವೈ)-ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮತ್ತೊಮ್ಮೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದು, ಜುಲೈ 5ರ ಮುಂಜಾನೆ 5 ಗಂಟೆವರೆಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್‍ಲಾಕ್ 2.0 ನಿಯಮ ಜಾರಿಗೊಳಿಸಿ ವಿವಿಧ ಚಟುವಟಿಕೆಗೆ ಅವಕಾಶ ನೀಡ ಲಾಗಿದೆ. ಆದರೆ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಪ್ರಮಾಣ ಶೇಕಡಾವಾರು ಅಂಕಿ-ಅಂಶ 10ಕ್ಕಿಂತ ಹೆಚ್ಚಿದ್ದು, ಸಾವಿನ ಸಂಖ್ಯೆಯೂ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಾದ್ಯಂತ ನಾಳೆಯಿಂದ (ಜೂ.21) 14 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮ ವಿಸ್ತರಿಸಲಾಗಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಕೊರೊನಾ 2ನೇ ಅಲೆಯ ತೀವ್ರತೆಯಿಂದಾಗಿ ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿದ್ದವು. ಕೆಲವು ಕಟ್ಟು ನಿಟ್ಟಿನ ಕ್ರಮದಿಂದಾಗಿ 16 ಜಿಲ್ಲೆಗಳಲ್ಲಿ ಶೇ.5ರಷ್ಟಕ್ಕೆ ಕೊರೊನಾ ಸೋಂಕಿತರ ಪ್ರಕರಣ ಕುಸಿದಿದೆ. ಉಳಿದ 13 ಜಿಲ್ಲೆಗಳಲ್ಲಿ ಶೇ.5 ರಿಂದ 10ರಷ್ಟು ಕೊರೊನಾ ಸೋಂಕಿತ ಶೇಕಡಾವಾರು ಪ್ರಕರಣ ದಾಖಲಾಗುತ್ತಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನ ಗಳಿಂದ ನಿರಂತರವಾಗಿ ಶೇ.10ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿ ರುವ ಹಿನ್ನೆಲೆಯಲ್ಲಿ ಅನ್‍ಲಾಕ್ 2.0 ಜಾರಿಗೊಳಿಸಿ, ಲಾಕ್‍ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಆದರೂ ಈ ಹಿಂದೆ ಜಾರಿ ಯಲ್ಲಿದ್ದಂತೆ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಪ್ರತೀ ದಿನ ಬೆಳಗ್ಗೆ 6ರಿಂದ 10ರವರೆಗೆ ದಿನಸಿ, ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಜನರು ತಮ್ಮ ಮನೆಯ ಸಮೀಪದಲ್ಲಿಯೇ ಇರುವ ಅಂಗಡಿಗಳಲ್ಲಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡ ಲಾಗಿದೆ. ಬಡಾವಣೆಯಿಂದ ಬಡಾವಣೆಗೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಖರೀದಿ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂ ಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಅನಗತ್ಯ ಸಂಚಾರದಲ್ಲಿ ತೊಡಗುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60ರ ಅನ್ವಯ ಹಾಗೂ ಐಪಿಸಿ 188 ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸುವು ದಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »