ಮೈಸೂರು, ಜೂ.20(ಎಂಟಿವೈ)-ಕೊರೊನಾ ಪಾಸಿ ಟಿವಿಟಿ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಬೆಂಗ ಳೂರು ಸೇರಿದಂತೆ ವಿವಿಧೆಡೆಯಿಂದ ಮೈಸೂರು ಮಾರ್ಗ ವಾಗಿ ಬರುವ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಪ್ರವೇಶ ಹಾಗೂ ಪ್ರಯಾಣಿಕರ ಹತ್ತಿಸುವ ಮತ್ತು ಇಳಿಸುವುದಕ್ಕೆ ನಿರ್ಬಂ ಧಿಸಲಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಅನ್‍ಲಾಕ್ ಜಾರಿ ಮಾಡಿ, ಬಸ್ ಸಂಚಾರ ಸೇರಿದಂತೆ ಬಹುತೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ನಡೆಯಲಿದೆ. ಇದರಿಂದ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಕೊಡಗು ಸೇರಿದಂತೆ ವಿವಿಧೆಡೆಗೆ ಪ್ರಯಾಣಿಸುವ ಸಾರಿಗೆ ಸಂಸ್ಥೆಯ ಬಸ್ಸುಗಳು ಗ್ರಾಮಾಂ ತರ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದಕ್ಕೆ ಅವಕಾಶ ನೀಡಿಲ್ಲ. ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಮೈಸೂರು ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಮೈಸೂರಿನಲ್ಲಿ ಪ್ರಯಾಣಿಕರನ್ನು ಹತ್ತಿಸುವುದಕ್ಕೆ ಹಾಗೂ ಇಳಿಸದಂತೆ ಸೂಚನೆ ನೀಡಲಾಗಿದೆ. ಇದರಿಂದ ಕೆಲವು ಬಸ್ಸುಗಳು ಮೈಸೂರಿಗೆ ಬಂದರೂ, ನಿಲ್ಲದೆ ವಾಪಸ್ ಆಗಲಿದೆ. ಈ ಮಾರ್ಗವಾಗಿ ಬರುವ ಎಲ್ಲಾ ಬಸ್ಸುಗಳ ಚಾಲಕ ಮತ್ತು ನಿರ್ವಾಹಕರಿಗೆ ಮೈಸೂರಿಗೆ ಪ್ರಯಾಣಿಕರನ್ನು ಕರೆತರ ದಂತೆ ಹಾಗೂ ಮೈಸೂ ರಿಂದ ಬೇರೆ ಬೇರೆ ಕಡೆಗೆ ಪ್ರಯಾಣಿ ಕರನ್ನು ಕರೆದೊಯ್ಯದಂತೆ ಸೂಚನೆ ನೀಡಲಾಗುತ್ತದೆ.
ರೈಲಿನಲ್ಲಿ ಅವಕಾಶ: ಮೈಸೂರು ನಗರದಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಹಲವು ರೈಲು ಸಂಚಾರ ಇದ್ದು, ಎಂದಿನಂತೆ ಪ್ರಯಾಣಿಕರು ಮೈಸೂರಿಗೆ ಆಗಮಿಸುವ ಮತ್ತು ಮೈಸೂರಿನಿಂದ ವಿವಿಧೆಡೆಗೆ ಪ್ರಯಾಣಿಸುವುದಕ್ಕೆ ಅವಕಾಶವಿದೆ. ಕಳೆದ ಕೆಲವು ದಿನಗಳಿಂದ ರೈಲುಗಳ ಸಂಖ್ಯೆಯೂ ಕಡಿಮೆ ಇತ್ತು. ಅಲ್ಲದೇ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿತ್ತು. ಆದರೆ ಹಲವು ಜಿಲ್ಲೆಗಳಲ್ಲಿ ಅನ್‍ಲಾಕ್ ನಿಯಮ ಜಾರಿಯಲ್ಲಿರುವುದರಿಂದ ರೈಲುಗಳ ಸಂಚಾರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಕೇವಲ ಆನ್‍ಲೈನ್ ಮೂಲಕವಷ್ಟೇ ರೈಲು ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈಗ ಕೌಂಟರ್‍ನಲ್ಲಿಯೇ ಟಿಕೆಟ್ ನೀಡುತ್ತಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.