ಕೊರೊನಾದಿಂದ ಪಾರಾಗಲು ಸದ್ಯಕ್ಕಿರುವ ದಾರಿ ಶೀಘ್ರ ಲಸಿಕೆ ಪಡೆಯುವುದು
ಮೈಸೂರು

ಕೊರೊನಾದಿಂದ ಪಾರಾಗಲು ಸದ್ಯಕ್ಕಿರುವ ದಾರಿ ಶೀಘ್ರ ಲಸಿಕೆ ಪಡೆಯುವುದು

June 22, 2021

ಮೈಸೂರು,ಜೂ.21(ಎಂಟಿವೈ)- ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಅಭಿಯಾನಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

ಮೈಸೂರು ನಗರಪಾಲಿಕೆ ವಾರ್ಡ್ ನಂ.53ರ ವ್ಯಾಪ್ತಿಯ ಸಿದ್ದಾರ್ಥನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕಾ ವಿಶೇಷ ಅಭಿಯಾನ ದಲ್ಲಿ 18 ವರ್ಷ ಮೇಲ್ಪಟ್ಟ ಎನ್.ಹರ್ಷಿತಾ ಹಾಗೂ ಪೂಜಾ ಸಿಂಗ್ ಅವರಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾ ಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ನಮ್ಮ ಕಣ್ಣಮುಂದೆಯೇ ಇದೆ. ಇಂತಹ ಸಂದರ್ಭದಲ್ಲಿ ಸೋಂಕು ಹರಡುವಿಕೆ ತಡೆ ಗಟ್ಟಲು ಎಲ್ಲರೂ ಕೈಜೋಡಿಸಬೇಕಾಗಿದೆ. ಕೋವಿಡ್ ವಿರುದ್ಧ ಹೋರಾಡಲು ಲಸಿಕೆ ಹಾಕಿಸಿಕೊಳ್ಳುವುದೇ ಅಂತಿಮ ಪರಿಹಾರ ಹಾಗೂ ಸುರಕ್ಷತಾ ಮಾರ್ಗ ಎನಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಸಾಧ್ಯವಾದಷ್ಟು ಬೇಗ ಲಸಿಕೆ ತೆÉಗೆದುಕೊಂಡು ಸೋಂಕಿನಿಂದ ರಕ್ಷಣೆ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗಕ್ಕೂ ಹಾಗೂ ಮೈಸೂರಿಗೂ ಅವಿನಾಭವ ಸಂಬಂಧವಿದೆ. ಇತ್ತೀಚಿನ ದಿನಗಳಲ್ಲಿ ಯೋಗವನ್ನು ಆಧುನಿಕ ಜೀವನ ಶೈಲಿಯಾಗಿ ನೋಡಲಾಗುತ್ತಿದೆ. ಸಮಾಜಕ್ಕೆ ಯೋಗ ವನ್ನು ಕೊಡುಗೆ ನೀಡಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಾನಸಿಕ ಸ್ಥಿರತೆ ಹಾಗೂ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಮುಖ್ಯ ಪಾತ್ರ ವಹಿಸುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಲು ಕೈಗೊಂಡಿರುವ ಲಸಿಕಾ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಕೋವಿಡ್ ಎದುರಿಸಲು ನಮ್ಮ ಮುಂದೆ 2 ದಾರಿ ಇದೆ. ಅದರಲ್ಲಿ ಒಂದನೇ ಹಾದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದಾದರೇ, ಮತ್ತೊಂದು ಲಸಿಕೆ ಪಡೆಯುವುದೇ ಆಗಿದೆ. ಕೆ.ಆರ್.ಕ್ಷೇತ್ರದಲ್ಲಿ ಲಸಿಕಾ ಅಭಿ ಯಾನ ಕೈಗೊಂಡಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಕೆ.ಆರ್.ಕ್ಷೇತ್ರದಲ್ಲಿ ಶಾಸಕ ಎಸ್.ಎ. ರಾಮ ದಾಸ್ ನೇತೃತ್ವದಲ್ಲಿ ಮತಗಟ್ಟೆ ಮಟ್ಟದಲ್ಲಿ ಕೋವಿಡ್ ಪರೀಕ್ಷೆ ಮೂಲಕ ಕೊರೊನಾಗೆ ಕಡಿವಾಣ ಹಾಕಲು ಕೈಗೊಂಡಿರುವ ಕ್ರಮ ಅತ್ಯಂತ ಉಪಯುಕ್ತಕಾರಿ ಹಾಗೂ ಸಮಂಜಸವೂ ಆಗಿದೆ. ಅದೇ ಮಾದರಿಯಲ್ಲಿ ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕಾ ಲಭ್ಯತೆಯ ಮೇರೆಗೆ ಎಲ್ಲಾ ವಾರ್ಡ್‍ಗಳಲ್ಲೂ ಹಾಗೂ ಮೈಸೂರು ನಗರದ ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದರು.

ಇದಕ್ಕೂ ಮುನ್ನ ಶಾಸಕ ಎಸ್.ಎ.ರಾಮದಾಸ್ ಪ್ರಾಸ್ತಾ ವಿಕವಾಗಿ ಮಾತನಾಡಿ, ಕೊರೊನಾ ಸೋಂಕು ತಡೆ ಗಟ್ಟಲು ಕೆ.ಆರ್.ಕ್ಷೇತ್ರ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ 62 ಸಾವಿರ ಮಂದಿ ಟೆಸ್ಟ್ ಮಾಡಿಸಿಕೊಂಡಿದ್ದಾರೆ. 47 ಸಾವಿರ ಜನ ಲಸಿಕೆ ಪಡೆದಿದ್ದಾರೆ. ಜೂ. 16 ಮತ್ತು 17 ರಂದು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲಾಗಿತ್ತು. 53ನೇ ವಾರ್ಡ್‍ನಲ್ಲಿ ಅತೀ ಹೆಚ್ಚು ಮಂದಿ ನೋಂದಣಿ ಮಾಡಿ ಕೊಂಡಿದ್ದರು. ಇದರಿಂದ ಇಂದು ಇದೇ ವಾರ್ಡಿನಿಂದ ಲಸಿಕಾ ಅಭಿಯಾನ ಆರಂಭಿಸಿದ್ದೇವೆ. ಕೆ.ಆರ್.ಕ್ಷೇತ್ರದಲ್ಲಿ ಜೂ.30ರೊಳÀಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವ ಗುರಿ ಇದೆ ಎಂದರು.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಕೊರೊನಾ 2 ನೇ ಅಲೆಯಲ್ಲಿ ಜನರು ಹೆಚ್ಚಿನ ಆತಂಕ ದಲ್ಲಿ ದಿನ ದೂಡುವಂತಾಗಿದೆ. ಕೆ.ಆರ್ ಕ್ಷೇತ್ರದಲ್ಲಿ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಎರಡನೇ ಅಲೆಯಲ್ಲಿ ಹಲವು ಮಂದಿ ಮನೆಗೆ ಆಧಾರ ಸ್ತಂಭವಾಗಿದ್ದವರನ್ನು ಕಳೆದುಕೊಂಡಿರುವುದು ವಿಷಾ ದನೀಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗಂಜಿಫಾ ಕಲಾವಿದ ರಘುಪತಿ ಭಟ್, ಪಾಲಿಕೆ ಸದಸ್ಯರಾದ ರೂಪ, ಬಿ.ವಿ.ಮಂಜುನಾಥ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಜೆ. ನಾಗೇಂದ್ರಕುಮಾರ್, ಓಂ.ಶ್ರೀನಿವಾಸ್, ಮೈ.ಪು ರಾಜೇಶ್, ನೂರ್ ಫಾತಿಮಾ ಇನ್ನಿತರರು ಉಪಸ್ಥಿತರಿದ್ದರು.

Translate »