ಏಪ್ರಿಲ್ 11ರಿಂದ ಮೇ 19ರವರೆಗೆ ದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ
ಮೈಸೂರು

ಏಪ್ರಿಲ್ 11ರಿಂದ ಮೇ 19ರವರೆಗೆ ದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ

March 11, 2019

ನವದೆಹಲಿ: 17ನೇ ಲೋಕ ಸಭಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗವು ಇಂದು ಸಂಜೆ ಪ್ರಕಟಿಸಿದ್ದು, ದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲನೇ ಹಂತದ ಚುನಾವಣೆಯು ಏ.11ರಂದು ನಡೆಯಲಿದ್ದು, 7ನೇ ಹಂತದ ಚುನಾವಣೆ ಮೇ 12ರಂದು ನಡೆಯಲಿದೆ. ಮೇ 23ಕ್ಕೆ ದೇಶದ ಎಲ್ಲಾ 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್ ಅರೋರಾ ಅವರು ವಿವರಗಳನ್ನು ನೀಡಿದರು. ಈ ಕ್ಷಣದಿಂ ದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದ ಅವರು, ದೇಶದಲ್ಲಿ ಒಟ್ಟು 88.98 ಕೋಟಿ ಮತದಾರರಿದ್ದು, ಅವರಲ್ಲಿ 1.59 ಕೋಟಿ ಮತದಾರರು 18ರಿಂದ 19 ವರ್ಷದ ವಯೋಮಿತಿ ಯವರಾಗಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ 9 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. 1ನೇ ಹಂತದ ಚುನಾವಣೆಯು ಏ.11ರಂದು ನಡೆಯ ಲಿದ್ದು, ಏ.18ಕ್ಕೆ ಎರಡನೇ ಹಂತ, ಏ.23ಕ್ಕೆ 3ನೇ ಹಂತ, ಏ.29ಕ್ಕೆ 4ನೇ ಹಂತ, ಮೇ 6ಕ್ಕೆ 5ನೇ ಹಂತ, ಮೇ 12ಕ್ಕೆ 6ನೇ ಹಂತ, ಮೇ 19ಕ್ಕೆ 7ನೇ ಹಂತದ ಚುನಾ ವಣೆ ನಡೆಯಲಿದ್ದು,ಮೇ 23ಕ್ಕೆ ಫಲಿತಾಂಶ ಹೊರ ಬೀಳಲಿದೆ ಎಂದರು. ಎಲ್ಲಾ ಪರೀಕ್ಷೆಗಳು ಹಾಗೂ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡೇ ಚುನಾವಣಾ ದಿನಾಂಕವನ್ನು ನಿಗದಿಪಡಿಸ ಲಾಗಿದೆ ಎಂದ ಅವರು, ಚುನಾವಣೆಗೆ ಅಗತ್ಯವಿರುವ ಎಲ್ಲಾ ವಿಧದ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಚುನಾವಣಾ ಅಕ್ರಮಗಳನ್ನು ತಡೆಯಲು ಆದಾಯ ತೆರಿಗೆ ಸೇರಿದಂತೆ ಎಲ್ಲಾ ಇಲಾಖೆಗಳ ಜೊತೆಯಲ್ಲೂ ಚರ್ಚೆ ನಡೆಸ ಲಾಗಿದೆ. ಇವಿಎಂನಲ್ಲಿ ಪಕ್ಷದ ಚಿಹ್ನೆಯ ಜೊತೆಗೆ ಇದೇ ಮೊದಲ ಬಾರಿಗೆ ಅಭ್ಯರ್ಥಿಯ ಫೋಟೋವನ್ನು ಅಳವಡಿಸಲಾಗುವುದು. ಎಲ್ಲಾ ಮತದಾನ ಕೇಂದ್ರ ಗಳಲ್ಲು ವಿವಿ ಪ್ಯಾಕ್ ಅಳವಡಿಸಲಾಗುವುದು ಎಂದು ಅವರು ಹೇಳಿದರು.

23 ರಾಜ್ಯಗಳಲ್ಲಿ ಶೇ.100ರಷ್ಟು ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಮತದಾರರು 1950 ನಂಬರ್‍ಗೆ ಕರೆ ಮಾಡಿ ಮತದಾರರ ಗುರುತಿನ ಚೀಟಿಯ ವಿವರಗಳನ್ನು ಪಡೆಯಬಹುದು ಎಂದು ಹೇಳಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‍ಪಿಎಫ್ ನಿಯೋಜಿಸಲಾಗುವುದು ಎಂದ ಅವರು, ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ ಎಂದರು. ಈ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರ್ಕಾರವು ಪ್ರಮುಖ ನಿರ್ಧಾರಗಳು ಹಾಗೂ ಹೊಸ ಯೋಜನೆಗಳನ್ನು ಪ್ರಕಟಿಸಬಾರದು ಎಂದರು.

ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಕಡ್ಡಾಯವಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಚುನಾವಣಾ ಆಯೋಗಕ್ಕೆ ನೀಡುವ ಪ್ರಮಾಣ ಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಇಲ್ಲದಿದ್ದರೆ ನಾಮಪತ್ರ ತಿರಸ್ಕರಿಸಲ್ಪಡುತ್ತದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿಗಳನ್ನೇ ಬಳಸಬೇಕು ಎಂದ ಅವರು, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಜನಸಾಮಾನ್ಯರು ಚುನಾವಣಾ ಆಯೋ ಗಕ್ಕೆ ನೇರವಾಗಿ ದೂರು ಸಲ್ಲಿಸಲು ವಿಶೇಷ ಆ್ಯಪ್ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಈ ಆ್ಯಪ್ ಮೂಲಕ ಪ್ರಯೋಗ ಮಾಡಲಾಗಿದ್ದು, ಯಶಸ್ವಿಯಾಗಿದೆ. ಆ್ಯಪ್ ಮೂಲಕ ದೂರು ಸಲ್ಲಿಸಿದರೆ 100 ಗಂಟೆಗಳ ಒಳಗಾಗಿ ಕ್ರಮ ಕೈಗೊಂಡು ಮಾಹಿತಿ ತಿಳಿಸಲಾಗುವುದು. ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗು ವುದು ಎಂದರು. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡಲೂ ಕೂಡ ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಸಾಮಾಜಿಕ ಜಾಲ ತಾಣದ ಗ್ರೂಪ್‍ಗಳಲ್ಲಿ ಅನುಮತಿ ಪಡೆಯದೇ ಚುನಾವಣಾ ಪ್ರಚಾರ ನಡೆಸಿದರೆ ಅದರ ಅಡ್ಮಿನ್‍ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಮಾಧ್ಯಮ ಗಳಲ್ಲಿ ನೀಡಿದ ಜಾಹೀರಾತುಗಳಿಗೂ ಅಭ್ಯರ್ಥಿಗಳು ಸಮರ್ಪಕವಾದ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದ ಅವರು, ಮಾಧ್ಯಮಗಳ ಮೇಲೆ ಕಣ್ಣಿಡಲು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

Translate »