ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ
ಮೈಸೂರು

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ

December 11, 2018

ಲಂಡನ್:  ದೇಶ ಭ್ರಷ್ಟ, ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ವಿಜಯ್ ಮಲ್ಯ ಗಡಿಪಾರು ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಲಂಡನ್‍ನ ವೆಸ್ಟ್‍ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣ ಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪ ಗಳಿಗೆ ಸಾಕ್ಷ್ಯಗಳಿದ್ದು ಗಡಿಪಾರು ಮಾಡಲು ಆದೇಶ ನೀಡಿದೆ. ವಿಜಯ್ ಮಲ್ಯ ಗಡಿಪಾರು ಮಾಡಲು ಬ್ರಿಟನ್ ಕೋರ್ಟ್ ಆದೇಶ ನೀಡಿರುವುದರ ಬಗ್ಗೆ ಸಿಬಿಐ ವಕ್ತಾರರು ಪ್ರತಿಕ್ರಿಯೆ ನೀಡಿದ್ದು “ಮಲ್ಯ ಅವರನ್ನು ಭಾರತಕ್ಕೆ ಕರೆತಂದು ಶೀಘ್ರವೇ ಪ್ರಕರಣವನ್ನು ಇತ್ಯರ್ಥಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಬ್ರಿಟನ್ ಕೋರ್ಟ್ ಗಡಿಪಾರು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಮಲ್ಯಗೆ 14 ದಿನಗಳ ಕಾಲಾವಕಾಶ ಇದ್ದು ಒಂದು ವೇಳೆ ಮೇಲ್ಮನವಿ ಸಲ್ಲಿಸದೇ ಇದ್ದಲ್ಲಿ 28 ದಿನಗಳಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮಲ್ಯ ಅವರನ್ನು ಗಡಿಪಾರು ಮಾಡಬಹುದಾಗಿದೆ. ವಿಜಯ್ ಮಲ್ಯ ಗಡಿಪಾರು ಪ್ರಕರಣ ಯುಕೆಯ ಕೋರ್ಟ್‍ನಲ್ಲಿ ಇತ್ಯರ್ಥವಾಗಿದ್ದು, ಮುಂಬೈನ ಆರ್ಥರ್ ರೋಡ್ ಜೈಲು ಹೆಚ್ಚಿನ ಭದ್ರತೆಯೊಂದಿಗೆ ಮದ್ಯದ ದೊರೆಗಾಗಿ ಕಾದಿದೆ.

ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಬ್ಯಾಂಕ್‍ಗಳಿಗೆ 9,000 ಕೋಟಿ ರೂಪಾಯಿ ಸಾಲ ವಾಪಸ್ ನೀಡಬೇಕಿದ್ದು, ಮಲ್ಯ ಗಡಿಪಾರು ಪ್ರಕರಣದ ಬಗ್ಗೆ ಬ್ರಿಟನ್‍ನ ವೆಸ್ಟ್‍ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ಪ್ರಕಟಿಸಿತು. ಮಲ್ಯ ಗಡಿಪಾರಾದರೆ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಗಡಿಪಾರು ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ, ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಕೋರ್ಟ್ ತೀರ್ಪಿಗೂ ಸಾಲ ಮರುಪಾವತಿಗೂ ಸಂಬಂಧವಿಲ್ಲ ಎಂದು ಕೋರ್ಟ್‍ಗೆ ಹಾಜರಾಗಿರುವ ಮಲ್ಯ ಹೇಳಿದ್ದಾರೆ.

ಮುಂದಿನ ನಡೆ: ಮದ್ಯದೊರೆ ವಿಜಯ್ ಮಲ್ಯರನ್ನು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಭಾರತಕ್ಕೆ ಗಡಿಪಾರು ಗೊಳಿಸಿದ್ದರ ಬೆನ್ನಲ್ಲೇ, ಮಲ್ಯರ ಮುಂದಿನ ನಡೆ ಏನೆಂಬುದು ಕುತೂಹಲ ಮೂಡಿಸಿದೆ. ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಮಲ್ಯರನ್ನು ಗಡಿಪಾರು ಮಾಡಲು ನ್ಯಾಯಾಧೀಶರು ಆದೇಶ ನೀಡಿದ್ದರು.

ಮಲ್ಯ ಮುಂದಿನ ನಡೆ: * ಬ್ರಿಟನ್ ಕೋರ್ಟ್ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದು. * ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಇದೆ. ಮಲ್ಯ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ 14 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸದೇ ಇದ್ದರೆ, 22 ದಿನಗೊಳಗೆ ಅಲ್ಲಿನ ಗೃಹ ಕಾರ್ಯದರ್ಶಿಗಳು ಮಲ್ಯ ಗಡಿಪಾರಿಗೆ ಆದೇಶ ನೀಡುತ್ತಾರೆ. ಈ ಆದೇಶ ಪ್ರಕಟಗೊಂಡ ಬಳಿಕ ಸಿಬಿಐ ಅಧಿಕಾರಿಗಳು ಲಂಡನ್ ನಿಂದ ಮಲ್ಯರನ್ನು ಭಾರತಕ್ಕೆ ಕರೆತರುತ್ತಾರೆ.

ಗಡಿಪಾರು ಆಗ್ತಾರಾ: ಅಪರಾಧಿಗಳ ಗಡಿಪಾರು ಸಂಬಂಧ 1992 ರಲ್ಲಿ ಭಾರತ ಮತ್ತು ಬ್ರಿಟನ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೂವರೆಗೂ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಭಾರತ ಸ್ವದೇಶಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಭಾರತಕ್ಕೆ ಗಡಿಪಾರು ಮಾಡುವವರ ಪಟ್ಟಿಯಲ್ಲಿ ಲಲಿತ್ ಮೋದಿ, ಟೈಗರ್ ಹನೀಫ್, ನದೀಪ್ ಸೈಫ್, ರವಿ ಶಂಕರನ್ ಹಾಗೂ ವಿಜಯ್ ಮಲ್ಯ ಹೆಸರಿದೆ.

ಪ್ರಪ್ರಥಮವಾಗಿ 2002ರಲ್ಲಿ ಗುಜರಾತ್ ಧಂಗೆಗೆ ಸಂಬಂಧಿಸಿದಂತೆ 2016ರ ಅಕ್ಟೋಬರ್‍ನಲ್ಲಿ ಸಮೀರ್ ಭಾಯ್ ವಿನುಭಾಯ್ ಪಟೇಲ್‍ನನ್ನು ಬ್ರಿಟನ್ ಭಾರತಕ್ಕೆ ಹಸ್ತಾಂತರಿಸಿತ್ತು. 2018ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ಅಧಿಕಾರಿಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸಿ, ಮಾತುಕತೆಯನ್ನು ಸಹ ನಡೆಸಿದ್ದರು. ಈ ವೇಳೆ ಭಾರತ 17 ಮಂದಿಯ ಮಾಹಿತಿಯನ್ನು ಹಂಚಿಕೊಂಡಿತ್ತು. ಇದರಲ್ಲಿ ಪ್ರಮುಖವಾಗಿ ರವಿ ಶಂಕರನ್ (ಭಾರತೀಯ ಜಲಂತರ್ಗಾಮಿ ಯುದ್ಧ ನೌಕೆಯಲ್ಲಿ ನೀರು ಸೋರಿಕೆಯ ಪ್ರಮುಖ ಆರೋಪಿ), ಟೈಗರ್ ಹನೀಫ್ (1993ರಲ್ಲಿ ಗುಜರಾತ್ ನಲ್ಲಿ ನಡೆದ 2 ಸ್ಫೋಟ ಪ್ರಕರಣಕ್ಕೆ ಬೇಕಾದ ಆರೋಪಿ), ಸಂಗೀತ ನಿರ್ದೇಶಕ ನದೀಮ್ ಸೈಫ್ (ಗುಲ್ಷನ್ ಕುಮಾರ್ ಕೊಲೆ ಪ್ರಕರಣ ಆರೋಪಿ) ಹೆಸರುಗಳು ಪ್ರಸ್ತಾಪವಾಗಿದ್ದವು. ಬ್ರಿಟನ್ ನ್ಯಾಯಾಲಯ ಸಾಮಾನ್ಯವಾಗಿ ರಾಜಕೀಯ ಕಾರಣ ಹಾಗೂ ವ್ಯಕ್ತಿಗೆ ಚಿತ್ರ ಹಿಂಸೆ ಅಥವಾ ಮರಣದಂಡನೆಗೆ ಒಳಪಟ್ಟ ವ್ಯಕ್ತಿಗಳನ್ನು ಗಡಿಪಾರು ಮಾಡಲು ನಿರಾಕರಿಸುತ್ತದೆ. ಇಂತಹ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಬ್ರಿಟನ್ ತಿರಸ್ಕರಿಸಿದೆ. ಯೂರೋಪಿಯನ್ ಮಾನವ ಹಕ್ಕುಗಳ ಆರ್ಟಿಕಲ್ 8ರ ಪ್ರಕಾರ ಯಾವುದೇ ವ್ಯಕ್ತಿಗೂ ಸಹ ಕುಟುಂಬ ಜೀವನವನ್ನು ನಡೆಸುವ ಹಕ್ಕು ಇದೆ ಎಂದು ಅದು ಪ್ರತಿಪಾದಿಸುತ್ತದೆ. ಬ್ಯಾಂಕ್ ಗಳಿಗೆ ವಂಚಿಸಿದ ಆರೋಪ ಇರುವ ಕಾರಣ ಮಲ್ಯ ಗಡಿಪಾರಿಗೆ ಕೋರ್ಟ್ ಒಪ್ಪಿಗೆ ನೀಡಬಹುದು ಎನ್ನುವ ನಿರೀಕ್ಷೆಯನ್ನು ಮೊದಲೇ ಭಾರತ ಸರ್ಕಾರ ಇಟ್ಟುಕೊಂಡಿತ್ತು.

Translate »