`ಪ್ರೀತಿ ಅಮರ’ ಸಂದೇಶ ಸಾರಿದ  ಹಿರಿಯ ಜೀವಗಳ `ಬದುಕಿನ ಬಂಧನ’
ಮಂಡ್ಯ

`ಪ್ರೀತಿ ಅಮರ’ ಸಂದೇಶ ಸಾರಿದ ಹಿರಿಯ ಜೀವಗಳ `ಬದುಕಿನ ಬಂಧನ’

December 3, 2021

ಮೇಲುಕೋಟೆ, ಡಿ.2- ಪ್ರೀತಿ… ಎಂಬುದೇ ಭಾವನೆಗಳು ಬೆಸೆಯುವ ಒಂದು ಭಾವ… ಇದಕ್ಕೆ ವಯಸ್ಸಿನ ಭೇದವಿಲ್ಲ. ಈ ಪ್ರೀತಿಯು ಹದಿಹರೆಯರಲ್ಲಿ ಹೆಚ್ಚಾಗಿ ಪ್ರೇಮಲೋಕದ ಪ್ರಣಯಿಗಳಾಗಿರುತ್ತಾರೆ. ಆದರೆ ಮನುಷ್ಯನ ಆಂತರ್ಯದಲ್ಲಿ ಈ ಪ್ರೀತಿಯ ಭಾವನೆ ಗಂಡು-ಹೆಣ್ಣು, ವಯಸ್ಸಿನ ಭೇದವನ್ನು ಮೀರಿ ಬದುಕಿನ ಹಾದಿಯಲ್ಲಿ ಹೂನಗೆ ಹಾಸಿ ಬದುಕನ್ನು ಉಲ್ಲಾಸಗೊಳಿಸುತ್ತದೆ.

ಪ್ರಸ್ತುತ ದಿನಗಳಲ್ಲಿ ಗಂಡು-ಹೆಣ್ಣಿನ ದೈಹಿಕ ಬಯಕೆಯನ್ನೇ ಪ್ರೀತಿ ಎಂದು ಭಾವಿಸಿರುವ ಜಗತ್ತಿಗೆ ಬದುಕಿನಾಸರೆಯ ಅನುಬಂಧದ ಪಾಠ ಹೇಳಿದೆ ಒಂದು ಹಿರಿಯ ಜೋಡಿ. ನೈಜ ಪ್ರೀತಿಗೆ ವಯಸ್ಸು ದೊಡ್ಡದಲ್ಲ. ದೈಹಿಕ ಬಯಕೆಯೂ ಅನಿವಾರ್ಯವಲ್ಲ ಎಂದು ತಿಳಿಹೇಳಿದ ಒಂದು ಜೋಡಿ, ಪ್ರೀತಿಸಿದ 35 ವರ್ಷಗಳ ಬಳಿಕ ತಮ್ಮ ಇಳಿವಯಸ್ಸಿನಲ್ಲಿ ಹಸೆಮಣೆಯೇರಿದ್ದಾರೆ. 65 ವರ್ಷ ವಯಸ್ಸಿನ ಚಿಕ್ಕಣ್ಣ, ಮೂಲತಃ ಹೊಳೆನರಸೀಪುರದವರು. ಕೂಲಿ ಕೆಲಸಕ್ಕಾಗಿ ಮೈಸೂರಿಗೆ ಬಂದು ಬದುಕನ್ನು ಕಟ್ಟಿಕೊಂಡವರು. ಎಲ್ಲರಂತೆ ಹರೆಯದಲ್ಲಿ ಪ್ರೀತಿಯ ಬಲೆಗೆ ಸಿಲುಕಿದ ಚಿಕ್ಕಣ್ಣ ಅತ್ತೆಯ ಮಗಳು ಜಯಮ್ಮಳನ್ನು ಪ್ರೇಮಿಸಿದರು. ಆದರೆ, ಜಯಮ್ಮಳ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಜಯಮ್ಮಳಿಗೆ ಬೇರೊಬ್ಬ ಹುಡುಗನನ್ನು ಹುಡುಕಿ ಮದುವೆ ಮಾಡಿದರು. ಆದರೆ, ಇಷ್ಟಪಟ್ಟ ಪ್ರೇಯಸಿ ಸಿಗದಿದ್ದಾಗ ಮನನೊಂದ ಚಿಕ್ಕಣ್ಣ ಆಕೆಯ ನೆನಪಿನಲ್ಲೇ ವಿವಾಹವಾಗದೆ ಸುಮಾರು 35 ವರ್ಷ ಕಳೆದರು. ಇತ್ತ ಒಲ್ಲದ ಮನಸ್ಸಿನಿಂದಲೇ ಗಂಡನ ಮನೆ ಸೇರಿದ್ದ ಜಯಮ್ಮಳ ಸಾಂಸಾರಿಕ ಜೀವನ ಆರಂಭದಲ್ಲಿ ಚೆನ್ನಾಗಿಯೇ ಸಾಗಿತ್ತು. ನಂತರ ಪತಿ, ತೊರೆದಿದ್ದರಿಂದ ಜಯಮ್ಮ ಒಂಟಿಯಾಗೇ ಬದುಕು ಸಾಗಿಸುತ್ತಿದ್ದರು. ಈ ನಡುವೆ ಮೂರು ದಶಕಗಳ ನಂತರ ಚಿಕ್ಕಣ್ಣ-ಜಯಮ್ಮ ಭೇಟಿಯಾಗಿದ್ದಾರೆ. ಜಯಮ್ಮಳನ್ನು ಕಂಡ ಚಿಕ್ಕಣ್ಣನಿಗೆ ಗತಿಸಿದ ನೆನಪುಗಳು ಮರುಕಳಿಸಿ ಅದೇ ಪ್ರೀತಿ ವ್ಯಕ್ತಪಡಿಸಿದ್ದಾರೆ. ಒಂದೇ ದೋಣಿಯ ಪಯಣಿಗರಾಗಿದ್ದ ಇಬ್ಬರೂ ಕಳೆದುಹೋದ ದಿನಗಳನ್ನು ಮರೆತು ವಿವಾಹವಾಗಲು ನಿರ್ಧರಿಸಿದರು. ಅದರಂತೆ ತಮ್ಮ ಆಪ್ತರೊಂದಿಗೆ ಮೇಲುಕೋಟೆಗೆ ತೆರಳಿ ಯತೀರಾಜದಾಸರ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಸಾರಥ್ಯದಲ್ಲಿ ಈ ಹಿರಿಯ ಪ್ರೇಮಿಗಳು ಸತಿಪತಿಗಳಾದರು. ಈ ಇಳಿವಯಸ್ಸಿನಲ್ಲಾದರೂ ಒಂದಾಗಿ ನೆಮ್ಮದಿಯ ಜೀವನ ನಡೆಸಬೇಕೆಂಬ ಉದ್ದೇಶದಿಂದ ಮದುವೆಯಾಗಿದ್ದೇವೆ. ಇದಕ್ಕೆ ಅಪಾರ್ಥ ಕಲ್ಪಿಸದೇ ಶುಭ ಹಾರೈಸಿ ಎಂದು ವಧೂವರರು ಮನವಿ ಮಾಡಿದರು.

Translate »