ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷ; ಕೇರಳ ವ್ಯಕ್ತಿಗೆ 23.50 ಲಕ್ಷ ರೂ. ವಂಚನೆ
ಮೈಸೂರು

ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷ; ಕೇರಳ ವ್ಯಕ್ತಿಗೆ 23.50 ಲಕ್ಷ ರೂ. ವಂಚನೆ

January 6, 2021

ಮೈಸೂರು, ಜ.5(ಎಂಕೆ)- ವಂಚಕನೊಬ್ಬ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ನಂಬಿಸಿ 23.50 ಲಕ್ಷ ರೂ. ಪಡೆದು ವಂಚಿಸಿ ರುವ ಘಟನೆ ವಿವಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಷಹಾಂತ್ ಅಸ್ಲಂ ವಂಚನೆಗೆ ಒಳಗಾದವರು.

ಘಟನೆ ವಿವರ: ಅಸ್ಲಂ ಸ್ನೇಹಿತ ಮಹಮದ್ ಎಂಬ ವರಿಂದ ಪರಿಚಿತನಾದ ಯೂಸುಫ್ ಆಲಿ ಎಂಬಾತ, `ನಾನು ಆರ್‍ಬಿಐ ಡೀಲರ್ ಆಗಿದ್ದು, ಕಡಿಮೆ ಬೆಲೆಗೆ ಚಿನ್ನ ಕೊಡಿಸುವೆ’ ಎಂದು ಅಸ್ಲಂ ಅವರನ್ನು ನಂಬಿ ಸಿದ್ದ. ಜನವರಿ 3ರಂದು ಅಸ್ಲಂ, ಸ್ನೇಹಿತ ಮಹಮದ್ ಮತ್ತು ಹ್ಯಾರಿಸ್ ಜತೆಗೆ ಕೇರಳದಿಂದ ಮೈಸೂರಿಗೆ ಬಂದಿದ್ದು ಗ್ರಾಮಾಂತರ ಬಸ್ ನಿಲ್ದಾಣ ಸಮೀಪದ ಲಾಡ್ಜ್‍ನಲ್ಲಿ ಉಳಿದುಕೊಂಡಿದ್ದರು. ಅಂದು ರಾತ್ರಿ 8 ಗಂಟೆಗೆ ಸಿದ್ದಾರ್ಥನಗರದಲ್ಲಿ ಯೂಸುಫ್ ಆಲಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಯೂಸುಫ್ ಆಲಿ, ನಾಳೆ ಬೆಳಿಗ್ಗೆ(ಜ.4) ವಿವಿ ಮೊಹಲ್ಲಾ ಟೆಂಪಲ್ ರಸ್ತೆಯಲ್ಲಿರುವ ಹೆಚ್‍ಡಿಎಫ್‍ಸಿ ಬ್ಯಾಂಕ್ ಹತ್ತಿರ ಬನ್ನಿ ಎಂದು ತಿಳಿಸಿದ್ದಾನೆ. ಅಸ್ಲಂ, ಸ್ನೇಹಿತ ಮಹಮದ್ ಮತ್ತು ಹ್ಯಾರೀಸ್ ಜತೆ ಕಾರಿನಲ್ಲಿ(ಕೆಎಲ್-14 ಝಡ್-0971) ಬ್ಯಾಂಕ್ ಬಳಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದ ಯೂಸುಫ್ ಆಲಿ, ಅಸ್ಲಂಗೆ ಕೆಲವು ದಾಖಲೆ ಪತ್ರಗಳನ್ನು ಕೊಟ್ಟು, ಬ್ಯಾಂಕಿನ ಒಳಗೆ ಹೋಗಿದ್ದಾನೆ. ಸ್ವಲ್ಪ ಸಮಯದ ಬಳಿಕ ಬ್ಯಾಂಕ್‍ನಿಂದ ಹೊರಬಂದ ಆಲಿ, ಷಹಾಂತ್ ಅಸ್ಲಂ ಅವರನ್ನು ಬ್ಯಾಂಕಿನೊಳಗೆ ಕರೆದುಕೊಂಡು ಹೋಗಿ ಡಿನಾಮಿನೇಷನ್ ಬರೆಯಬೇಕೆಂದು ಅಸ್ಲಂ ಬಳಿಯಿದ್ದ 23.50 ಲಕ್ಷ ರೂ. ನಗದು ಪಡೆದುಕೊಂಡಿದ್ದಾನೆ. ನಂತರ ಬ್ಯಾಂಕ್ ಹೊರಗೆ ನಿಂತಿದ್ದ ಮಹಮದ್ ಬಳಿ ಇರುವ ಪೇಪರ್ಸ್ ತೆಗೆದುಕೊಂಡು ಬರುವಂತೆ ತಿಳಿಸಿ ದ್ದಾನೆ. ಅಸ್ಲಂ ಅವರು ಸ್ನೇಹಿತ ಮಹಮದ್‍ಗೆ ಕರೆ ಮಾಡುತ್ತಾ ಹೊರಬಂದಾಗ ಯೂಸುಫ್ ಆಲಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಷಹಾಂತ್ ಅಸ್ಲಂ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Translate »