ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಎಂ.ಮಲ್ಲಿಕಾರ್ಜುನ ಖರ್ಗೆ ಜಯಭೇರಿ
News

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಎಂ.ಮಲ್ಲಿಕಾರ್ಜುನ ಖರ್ಗೆ ಜಯಭೇರಿ

October 20, 2022

ಬೆಂಗಳೂರು, ಅ.19(ಕೆಎಂಶಿ)- ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ರಾಜ್ಯ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾ ಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಕಳೆದ 17 ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದು ಖರ್ಗೆ ಅವರಿಗೆ 7,897 ಮತಗಳು ಬಿದ್ದಿವೆ. ಅವರ ಪ್ರತಿಸ್ಪರ್ಧಿ ಕೇರಳದ ಶಶಿ ತರೂರ್ ಅವರಿಗೆÉ ಕೇವಲ 1,072 ಮತ ಗಳು ಬಿದ್ದಿವೆ. 416 ಮತಗಳು ತಿರಸ್ಕøತಗೊಂಡ ನಂತರ 6897 ಮತಗಳ ಅಂತರದಲ್ಲಿ ಖರ್ಗೆ ಜಯ ಗಳಿಸಿದ್ದಾರೆ. 22 ವರ್ಷಗಳ ಬಳಿಕ ನೆಹರು-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ಮತ್ತೆ ಅಧ್ಯಕ್ಷ ಸ್ಥಾನ ದೊರಕಿದೆ. 137 ವರ್ಷಗಳ ಇತಿಹಾಸದಲ್ಲಿ ಇದು ಸೇರಿ 6ನೇ ಬಾರಿ ಚುನಾವಣೆ ನಡೆದಿದೆ. ದಿವಂಗತ ನಿಜಲಿಂಗಪ್ಪ ಅವರು ಕರ್ನಾಟಕದಿಂದ ಈ ಮೊದಲು ಈ ಸ್ಥಾನವನ್ನು ಅಲಂಕರಿಸಿದ್ದರು. ತದನಂತರ ಪಕ್ಷ ಮತ್ತು ಗಾಂಧಿ ಕುಟುಂಬಕ್ಕೆ ನಿಷ್ಠಾವಂತ ಖರ್ಗೆ ಅವರಿಗೆ ಈ ಸ್ಥಾನ ದೊರೆತಿದೆ.

ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡ 96ರಷ್ಟು ಮತದಾನವಾಗಿತ್ತು. 9915 ಪ್ರತಿನಿಧಿಗಳ ಪೈಕಿ 9500 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಖರ್ಗೆ ಅವರಿಗೆ 7897 ಮತಗಳು ಲಭಿಸಿವೆ. ಸುದೀರ್ಘ ಕಾಲ ಗಾಂಧಿ ಕುಟುಂಬದ ಮುಕುಟ ಮಣಿಯಾಗಿದ್ದ ಎಐಸಿಸಿ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಗಾಂಧಿ ಕುಟುಂಬದ ಹೊರಗಿನವರೊಬ್ಬರಿಗೆ ದಕ್ಕಿ, ದಾಖಲಾಗಿದೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಚುನಾವಣೆ ನಡೆದೇ ಅಧ್ಯಕ್ಷರ ಆಯ್ಕೆಯಾಗಬೇಕು. ಆ ಮೂಲಕ ಅವಿರೋಧವಾಗಿ ಆಯ್ಕೆಯಾಗುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ಎಂದು ಹೇಳಿದ್ದ ಶಶಿ ತರೂರ್ ಅವರು ಗೆಲ್ಲದೇ ಹೋದರೂ, ಅವರ ಉದ್ದೇಶ ಈಡೇರಿದಂತಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‍ನಲ್ಲಿ ಸಂಭ್ರಮದ ವಾತಾವರಣ ಕಾಣಿಸಿಕೊಂಡಿದ್ದು, ಕೆಪಿಸಿಸಿ ಕಚೇರಿಯಲ್ಲಿ ಅದ್ಧೂರಿಯಾಗಿ ಹರ್ಷಾಚರಣೆ ಮಾಡಲಾಗಿದೆ.

ಅಂದ ಹಾಗೆ 2009ರ ವೇಳೆಗೆ ರಾಜ್ಯ ಕಾಂಗ್ರೆಸ್ ಅಧಿಪತ್ಯಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ನಡುವೆ ಸಂಘರ್ಷ ಶುರುವಾದಾಗ ಮಧ್ಯೆ ಪ್ರವೇಶಿಸಿದ್ದ ಕೈ ಪಾಳೆಯದ ವರಿಷ್ಠರು ಮಲ್ಲಿಕಾರ್ಜುನ ಖರ್ಗೆ ದಿಲ್ಲಿಗೆ, ಸಿದ್ದರಾಮಯ್ಯ ಇಲ್ಲಿಗೆ ಎಂಬ ಸೂತ್ರವನ್ನು ರೂಪಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆ ಸಂದರ್ಭದಲ್ಲಿ ವರಿಷ್ಠರ ಮಾತಿಗೆ ಎದುರಾಡದ ಮಲ್ಲಿಕಾರ್ಜುನ ಖರ್ಗೆ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ರಾಷ್ಟ್ರ ರಾಜಕಾರಣದ ದಡ ತಲುಪಿದ್ದರು.

ಖರ್ಗೆ ಅವರ ಪಕ್ಷ ನಿಷ್ಠೆಯನ್ನು ಪರಿಗಣಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು, ಖರ್ಗೆ ಅವರು ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಕಾರ್ಮಿಕ ಮತ್ತು ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟರು.

ಮುಂದೆ 2014ರಲ್ಲಿ ಕಾಂಗ್ರೆಸ್ ಪಕ್ಷ ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡರೂ, ಖರ್ಗೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಲು ಸೋನಿಯಾ ಗಾಂಧಿ ಒಲವು ತೋರಿದರು. ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರಿಗೆ ತಕ್ಕ ಎದುರಾಳಿಯಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾದರು.

ಮುಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲನನುಭವಿಸಿದರೂ, ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವಂತೆ ಸೋನಿಯಾಗಾಂಧಿ ನೋಡಿಕೊಂಡರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತೀರ್ಮಾನವಾದಾಗ ಶುರುವಿನಲ್ಲಿ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಆ ಜಾಗಕ್ಕೆ ತರಲು ಸೋನಿಯಾಗಾಂಧಿ ನಿರ್ಧರಿಸಿದ್ದರಾದರೂ, ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಳ್ಳಲು ಅಶೋಕ್ ಗೆಹ್ಲೋಟ್ ಅವರು ಇಷ್ಟಪಡಲಿಲ್ಲ.

ಹೀಗಾಗಿ ತಮ್ಮ ಬೆಂಬಲಿಗ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಕಾಂಗ್ರೆಸ್ ಹೈಕಮಾಂಡ್‍ಗೆ ಅಶೋಕ್ ಗೆಹ್ಲೋಟ್ ಅವರು ಮನವರಿಕೆ ಮಾಡಿಕೊಟ್ಟಾಗ, ಸೋನಿಯಾಗಾಂಧಿ ಅವರ ಕಣ್ಣಿಗೆ ಕಾಣಿಸಿದವರೇ ಮಲ್ಲಿಕಾರ್ಜುನ ಖರ್ಗೆ. ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಐದು ದಶಕಗಳಿಂದ ಪಕ್ಷದ ನಿಷ್ಠಾವಂತ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದ್ದು, ಕರ್ನಾಟಕದಲ್ಲಿ ಶಾಸಕರಾಗಿ, ಸಚಿವರಾಗಿ, ವಿರೋಧಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.

ಅದೇ ರೀತಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವರು ಕಾರ್ಯ ನಿರ್ವಹಿಸಿದ ರೀತಿಯನ್ನು ಪರಿಗಣಿಸಿದ ಸೋನಿಯಾಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಿದರು ಎಂಬ ವಿಷಯ ರಹಸ್ಯವೇನಲ್ಲ. 1972ರಲ್ಲಿ ಮೊದಲ ಬಾರಿ ಶಾಸನಸಭೆ ಪ್ರವೇಶಿಸಿದ್ದ ಮಲ್ಲಿಕಾರ್ಜುನ ಖರ್ಗೆ ಸತತ ಒಂಭತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರಲ್ಲದೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

Translate »