ಮೈಸೂರು-ಕುಶಾಲನಗರ ರೈಲು ಮಾರ್ಗ ಮೈಸೂರಿಂದ ಕಂಪಲಾಪುರವರೆಗೆ ಸರ್ವೇ ಕಾರ್ಯ ಪೂರ್ಣ
ಕೊಡಗು

ಮೈಸೂರು-ಕುಶಾಲನಗರ ರೈಲು ಮಾರ್ಗ ಮೈಸೂರಿಂದ ಕಂಪಲಾಪುರವರೆಗೆ ಸರ್ವೇ ಕಾರ್ಯ ಪೂರ್ಣ

October 20, 2022

ಮಡಿಕೇರಿ,ಅ.19- ಮೈಸೂರು-ಬೆಳಗೊಳ- ಕುಶಾಲನಗರವರೆಗಿನ ರೈಲ್ವೇ ಮಾರ್ಗದ ಅಂತಿಮ ಹಂತದ ಸರ್ವೆ ಕಾರ್ಯ ಮೈಸೂರಿಂದ ಕಂಪಲಾಪುರವರೆಗೆ ಪೂರ್ಣ ಗೊಂಡಿದೆ. ಮೈಸೂರು-ಕೊಪ್ಪವರೆಗಿನ 87.2 ಕಿ.ಮೀ ಸರ್ವೇ ಕಾರ್ಯದ ಪೈಕಿ ಪಿರಿಯಾಪಟ್ಟಣದ ಕಂಪಲಾಪುರವರೆಗೆ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ.

ಒಟ್ಟು 1854.62 ಕೋಟಿ ರೂ. ವೆಚ್ಚದ ಉದ್ದೇಶಿತ ರೈಲ್ವೇ ಯೋಜನೆಗೆ 2019ರ ಫೆಬ್ರವರಿ 27ರಂದು ರೈಲ್ವೇ ಸಚಿವಾ ಲಯ ಅನುಮೋದನೆ ನೀಡಿತ್ತು. ಈ ನಡುವೆ 2020ರ ಅಕ್ಟೋಬರ್ ತಿಂಗಳಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ನಿರ್ಮಾಣ) ಮೈಸೂರು-ಬೆಳಗೊಳ-ಕುಶಾಲನಗರ `ಬ್ರಾಡ್‍ಗೇಜ್’ ರೈಲ್ವೇ ಮಾರ್ಗದ ಸರ್ವೇಗೆ ಸೂಚನೆ ನೀಡಿದ್ದರು.

ಈ ರೈಲ್ವೇ ಯೋಜನೆಗೆ ಖರ್ಚಾಗುವ ಹಣದ ಪೈಕಿ 2022-23ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಯೋಜನೆ ಜಾರಿಗೆ ಒತ್ತಾಸೆಯಾಗಿದ್ದು, ಹಿಂದಿನ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಈ ಮಾರ್ಗವನ್ನು ಮಂಜೂರು ಮಾಡಿದ್ದಾರೆ. ಮಾತ್ರವಲ್ಲದೇ 2018-19ರಲ್ಲಿ ರೈಲ್ವೇ ಇಲಾಖೆಯ `ಪಿಂಕ್ ಬುಕ್’ನಲ್ಲಿ ಯೋಜನೆಯನ್ನು ದಾಖಲಿಸಲಾಗಿದೆ. 2021ರ ಆಗಸ್ಟ್ ತಿಂಗಳಲ್ಲಿ ಈ ರೈಲ್ವೇ ಮಾರ್ಗದ ಸರ್ವೇ ನಡೆಸಲು ಬೆಂಗಳೂರು ಮೂಲದ `ಸಿಪ್ರಂ ಸಿಸ್ಟಂ ಪ್ರೈವೇಟ್ ಲಿಮಿಟೆಡ್’ ಕಂಪೆನಿಗೆ 1.26 ಕೋಟಿ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. ಮಂಡ್ಯದ ಶ್ರೀರಂಗಪಟ್ಟಣದಿಂದ ಆರಂಭವಾಗಲಿರುವ ಈ ರೈಲ್ವೇ ಲೈನ್ ಇಲವಾಲ- ಬಿಳಿಕೆರೆ-ಉದ್ದೂರು-ಹುಣಸೂರು-ಪಿರಿಯಾಪಟ್ಟಣ-ದೊಡ್ಡಹೊನ್ನೂರು ಮಾರ್ಗವಾಗಿ ಕುಶಾಲ ನಗರ ಸಮೀಪದ ಕೊಪ್ಪ ಬಳಿ ಅಂತಿಮವಾಗಲಿದೆ.

ಪ್ರಯಾಸದ ಸರ್ವೇ: ರೈಲ್ವೇ ಮಾರ್ಗದ ಸರ್ವೇ ನಡೆಸು ತ್ತಿರುವ ಸಂಸ್ಥೆಯ ಸರ್ವೇ ಅಧಿಕಾರಿ ರಾಮಯ್ಯ ನೀಡಿದ ಮಾಹಿತಿ ಪ್ರಕಾರ ಈಗಾಗಲೇ ಭೂ ಸ್ವಾಧೀನ ಸರ್ವೇ, ರೈಲ್ವೇ ಹಳಿ ಸರ್ವೇ, ರೈಲು ಹಾದು ಹೋಗುವ ಪ್ರದೇಶದ ಸರ್ವೇ ಯನ್ನು ಪೂರ್ಣಗೊಳಿಸಲಾಗಿದೆ. ಇದೀಗ ಯಾವುದೇ ರೈಲು ಮಾರ್ಗ ನಿರ್ಮಾಣ ಮಾಡುವ ಮುನ್ನ ನಡೆಸಬೇಕಿರುವ ಬಹು ಪ್ರಯಾಸದ ಕೊನೆ ಹಂತದ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಇದರಲ್ಲಿ ಭೌಗೋಳಿಕತೆ, ಭೂಮಿಯ ಸ್ಥಿರತೆ ಮೊದಲಾದವುಗಳನ್ನು ನಿರ್ಧರಿಸಲಾಗು ತ್ತದೆ. ಹಸಿರು ವಲಯ, ಬೆಟ್ಟ ಸಾಲುಗಳು, ನದಿ, ತೊರೆಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುತ್ತದೆ. ಈ ಸರ್ವೇ ಕಾರ್ಯಕ್ಕೆ ಅತ್ಯಾಧುನಿಕ ಡಿಫರೆನ್ಷಿಯಲ್ ಗ್ಲೋಬಲ್ ಪೊಜಿಷನಿಂಗ್ ಸಿಸ್ಟಂ(ಡಿಜಿಪಿಎಸ್) ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ರೈಲ್ವೇ ಮಾರ್ಗದ ಹಾದಿ ನಿರ್ಧಾರ ಮಾಡಿದ ಬಳಿಕ ದೊಡ್ಡ ಮತ್ತು ಕಿರು ಸೇತುವೆಗಳ ನಿರ್ಮಾಣ, ಸ್ಟೇಷನ್ ಗಳು, ತಡೆಗೋಡೆಗಳು, ಇಳಿಜಾರು ಪ್ರದೇ ಶಗಳಲ್ಲಿ ನಿರ್ಮಿಸಬೇಕಿರುವ ತಡೆಗೋಡೆಗಳ ನಿರ್ಮಾಣ ಕಾರ್ಯಗಳು ನಡೆಯಲಿದೆ ಎಂದು ರಾಮಯ್ಯ ತಿಳಿಸಿದ್ದಾರೆ.

ಸರ್ವೇಗೆ ಹೆಚ್ಚುವರಿ ಸಮಯ: ಬೆಳಗೊಳದಿಂದ ಪಿರಿಯಾಪಟ್ಟಣದ ಕಂಪಲಾಪುರ ದವರೆಗೆ ಸರ್ವೇ ಕಾರ್ಯ ಅತ್ಯಂತ ಸರಳವಾಗಿ ನಡೆದಿದ್ದು, ಇದಕ್ಕೆ ಆ ಪ್ರದೇಶಗಳ ಭೌಗೋಳಿಕ ಲಕ್ಷಣಗಳು ಕಾರಣವಾಗಿದೆ. ಈ ಭೂ ಪ್ರದೇಶ ಸಮತಟ್ಟಿನಿಂದ ಕೂಡಿದ್ದು, ಯಾವುದೇ ಅಡೆ ತಡೆಗಳಿಲ್ಲದೆ ಸರ್ವೇ ಕಾರ್ಯ ಪೂರ್ಣ ಗೊಳಿಸಲಾಗಿದೆ. ಪಿರಿಯಾಪಟ್ಟಣ ಬಳಿಕದ ಮಾರ್ಗ ತಲುಪುತ್ತಿದ್ದಂತೆಯೇ ಅತಿಯಾದ ಮಳೆ, ಹಸಿರು ಪ್ರದೇಶ, ಕೃಷಿ ಭೂಮಿ ಹಾಗೂ ಸಮವಲ್ಲದ ಭೂ ಭಾಗಗಳಿಂದ ಸರ್ವೇ ಕಾರ್ಯ ಬಸವನ ಹುಳುವಿನಂತೆ ಮಂದಗತಿಯಲ್ಲಿ ಸಾಗಿದೆ. ಪರಿಣಾಮವಾಗಿ ನಿಗದಿತ ಸಮಯಕ್ಕಿಂತ ಹೆಚ್ಚುವರಿ 1 ತಿಂಗಳು ಕಾಲಾ ವಕಾಶ ಪಡೆಯಲಾಗಿದ್ದು, ನವೆಂಬರ್ ತಿಂಗಳ ಅಂತ್ಯಕ್ಕೆ ಸಂಪೂರ್ಣ ಮಾರ್ಗದ ಅಂತಿಮ ಸರ್ವೇ ವರದಿಯನ್ನು ನೈರುತ್ಯ ರೈಲ್ವೇ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

Translate »