ದಸರಾ ಗಜಪಡೆಗೆ ಮ್ಯಾಗ್ನೆಟ್ ಟ್ರ್ಯಾಲಿಯ ರಕ್ಷಣೆ
ಮೈಸೂರು

ದಸರಾ ಗಜಪಡೆಗೆ ಮ್ಯಾಗ್ನೆಟ್ ಟ್ರ್ಯಾಲಿಯ ರಕ್ಷಣೆ

September 17, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯ ಪ್ರಮುಖ ಕೇಂದ್ರ ಬಿಂದುವಾದ ಆನೆಗಳ ರಕ್ಷಣೆಗೆ ಮ್ಯಾಗ್ನೆಟ್ ಟ್ರ್ಯಾಲಿಯನ್ನು ಮೈಸೂರಿನ ಯುವಕರಿಬ್ಬರು ಉಡುಗೊರೆಯಾಗಿ ನೀಡಿದ್ದು, ಪ್ರತೀ ದಿನ ಆನೆಗಳು ಸಾಗುವ ಮಾರ್ಗದಲ್ಲಿ ಮೊನಚಾದ ಮೊಳೆ ಹಾಗೂ ಕಬ್ಬಿಣದ ಚೂರುಗಳನ್ನು ಟ್ರ್ಯಾಲಿ ಸೆಳೆದುಕೊಳ್ಳುವ ಮೂಲಕ ಆನೆಗಳ ಕಾಲನ್ನು ಕಾಪಾಡುತ್ತದೆ.

ವಿವಿಧ ಆನೆಗಳ ಶಿಬಿರದಿಂದ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ 12 ಆನೆಗಳು ಪ್ರತೀ ದಿನ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ 2 ಬಾರಿ ತಾಲೀಮು ನಡೆಸಲಿದ್ದು, ದಾರಿಯುದ್ದಕ್ಕೂ ರಸ್ತೆಗಳಲ್ಲಿ ಬಿದ್ದಿರುವ ಮೊಳೆ, ಕಬ್ಬಿಣದ ಚೂರುಗಳು ಸೇರಿದಂತೆ ಇನ್ನಿತರ ಕಬ್ಬಿಣದ ವಸ್ತುಗಳು ಆನೆಗಳಿಗೆ ಮಾರಕವಾಗಿ ಪರಿಣಮಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ತಾಲೀಮಿನ ವೇಳೆ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿ ಆನೆಗಳ ಮುಂಭಾಗ ಸಾಗಿ ರಸ್ತೆಯುದ್ದಕ್ಕೂ ಬಿದ್ದಿರುತ್ತಿದ್ದ ಕಬ್ಬಿಣದ ಮೊಳೆ, ಇನ್ನಿತರ ವಸ್ತುಗಳನ್ನು ಆಯುವಲ್ಲಿ ನಿರತರಾಗಿರುತ್ತಿದ್ದರು. ಆದರೂ ಸಿಬ್ಬಂದಿಗಳ ಕಣ್ತಪ್ಪಿಸಿ ಕೆಲವು ಮೊಳೆ ಸೇರಿದಂತೆ ಇನ್ನಿತರ ಕಬ್ಬಿಣದ ಚೂರುಗಳು ಆನೆಗಳಿಗೆ ಚುಚ್ಚಿ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದವು.

ಈ ಹಿನ್ನೆಲೆಯಲ್ಲಿ ಆನೆಗಳು ಎದುರಿಸುತ್ತಿದ್ದ ಸಂಕಷ್ಟವನ್ನು ಮನಗಂಡು ಮೈಸೂರಿನ ಸರಸ್ವತಿಪುರಂನ ನಿವಾಸಿಗಳಾದ ಸಂತೋಷ್ ಮತ್ತು ವಿಜಯ ಕುಮಾರ್ ಎಂಬುವರು ದಸರಾ ಆನೆಗಳ ರಕ್ಷಣೆಗೆಂದೇ ಮ್ಯಾಗ್ನೆಟ್ ಇರುವ ಟ್ರ್ಯಾಲಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಟ್ರ್ಯಾಲಿಯು ಉಪಯುಕ್ತವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದು, ಆನೆಗಳ ಪಾದಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರತೀ ದಿನವೂ ಸಂಗ್ರಹ: ಅರಮನೆಯಿಂದ ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾ ಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ದಸರಾ ಆನೆಗಳು ತಾಲೀಮು ನಡೆಸಲಿವೆ. ಆನೆಗಳ ಮುಂದೆ ಅರಣ್ಯ ಇಲಾಖೆಯ ಜೀಪಿನ ಹಿಂದೆ ಮ್ಯಾಗ್ನೆಟ್ ಟ್ರ್ಯಾಲಿಯನ್ನು ಕಟ್ಟಿಕೊಂಡು ಎಳೆದು ಕೊಂಡು ಹೋಗಲಾಗುತ್ತದೆ. ಇದರಿಂದ ಆನೆ ತುಳಿಯಬಹುದಾದ ರಸ್ತೆಯಲ್ಲಿ ಬಿದ್ದಿರುವ ಕಬ್ಬಿಣದ ಮೊಳೆ ಹಾಗೂ ವಸ್ತುಗಳನ್ನು ಮ್ಯಾಗ್ನೆಟ್ ಟ್ರ್ಯಾಲಿ ಆಯ್ದು ಕೊಳ್ಳಲಿದೆ. ಇದು ಆನೆಗಳು ಸರಾಗವಾಗಿ ಸಾಗುವುದಕ್ಕೆ ನೆರವಾಗಲಿದೆ. ಪ್ರತೀ ದಿನವೂ ಈ ಟ್ರ್ಯಾಲಿ ಹಲವಾರು ಮೊಳೆ ಮತ್ತು ಕಬ್ಬಿಣದ ಚೂರುಗಳನ್ನು ಸಂಗ್ರಹಿಸಲಿದೆ.

ಏನೇನು?: ಕಬ್ಬಿಣದ ಟ್ರ್ಯಾಲಿಯಲ್ಲಿ ಪ್ರತೀ ದಿನ ರಸ್ತೆಯಲ್ಲಿ ಬಿದ್ದಿರುವ ಗುಂಡು ಸೂಜಿ, ಬಟ್ಟೆ ಪಿನ್ನು, ಹೇರ್ ಪಿನ್, ಮೊಳೆ, ನಟ್ಟು-ಬೋಲ್ಟು, ವಾಹನಗಳಿಂದ ಸಿಡಿಯಲ್ಪ ಟ್ಟಿರುವ ಮೊನಚಾದ ಕಬ್ಬಿಣದ ಚೂರುಗಳು ಹಾಗೂ ಇನ್ನಿತರ ಕಬ್ಬಿಣದ ವಸ್ತುಗಳು ಟ್ರ್ಯಾಲಿ ಯಲ್ಲಿ ಸಿಲುಕಿರುವುದು ಕಂಡುಬರುತ್ತಿದೆ. ಅದರಲ್ಲಿಯೂ ವಾಹನಗಳ ವಿವಿಧ ಬಿಡಿ ಭಾಗಗಳಿಂದ ಮೊನಚಾದ ಚೂರುಗಳು ಆನೆಯ ಪಾದಗಳಿಗೆ ಮಾರಕವಾಗಲಿದೆ. ಈ ಹಿನ್ನೆಲೆ ಯಲ್ಲಿ ಮ್ಯಾಗ್ನೆಟ್ ಟ್ರ್ಯಾಲಿಯಿಂದ ಆನೆಗಳ ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತದೆ.

ಮೈಸೂರಿಗರಿಗಾಗಿ ಕೊಡುಗೆ: ಟ್ರ್ಯಾಲಿ ಉಡುಗೊರೆ ನೀಡಿರುವ ಮೈಸೂರಿನ ಸರಸ್ವತಿಪುರಂ ನಿವಾಸಿ ಸಂತೋಷ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ದಸರಾ ಆನೆಗಳ ಮುಂದೆ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ಬಿದ್ದಿರುವ ಮೊಳೆಯನ್ನು ಆಯುವ ಸುದ್ದಿ `ಮೈಸೂರು ಮಿತ್ರ’ದಲ್ಲಿಯೇ ಪ್ರಕಟವಾಗಿತ್ತು. ಇದನ್ನು ಗಮನಿಸಿ ಮೈಸೂರಿಗರೇ ಆದ ನಾವು ಏನನ್ನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಸ್ನೇಹಿತ ವಿಜಯಕುಮಾರ್ ಅವರೊಂದಿಗೆ ಸೇರಿ ಮ್ಯಾಗ್ನೆಟ್ ಟ್ರ್ಯಾಲಿಯನ್ನು ತಯಾರಿಸಿದೆವು. 4 ವರ್ಷದ ಹಿಂದೆ ತಯಾರಿಸಿದ ಟ್ರ್ಯಾಲಿ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. ನಂತರ ಅರಣ್ಯ ಇಲಾಖೆಯ ಸಲಹೆಯ ಮೇರೆಗೆ 7 ಅಡಿ ಉದ್ದವಿದ್ದ ಟ್ರ್ಯಾಲಿಯನ್ನು 5.5 ಅಡಿಗೆ ಮೊಟಕುಗೊಳಿಸಿದೆವು.

ನಂತರ ಮ್ಯಾಗ್ನೆಟ್‍ಗಳನ್ನು ಅದಕ್ಕೆ ಅಳವಡಿಸಿ ಪ್ರಯೋಗ ಮಾಡಲಾಯಿತು. ಇದು ಯಶಸ್ವಿಯಾಗಿದೆ. ಪ್ರತೀ ದಿನ ಮೊಳೆಗಳು, ಪಿನ್ನುಗಳು ಸೇರಿದಂತೆ ಕಬ್ಬಿಣದ ವಸ್ತುಗಳನ್ನು ಈ ಮ್ಯಾಗ್ನೆಟ್ ಟ್ರ್ಯಾಲಿ ರಸ್ತೆಯಿಂದ ಆಯ್ದು ಕೊಳ್ಳುತ್ತಿದೆ. ಇದು ಸಂತೋಷ ಹಾಗೂ ಸಮಾಧಾನದ ಸಂಗತಿಯಾಗಿದೆ ಎಂದರು.

Translate »