ಪತ್ರಕರ್ತರೆದುರು ಕಣ್ಣೀರಿಟ್ಟ ಶಿರಮಳ್ಳಿ ಗ್ರಾಮದ ಮಹದೇವಪ್ಪ ಕುಟುಂಬ
ಮೈಸೂರು

ಪತ್ರಕರ್ತರೆದುರು ಕಣ್ಣೀರಿಟ್ಟ ಶಿರಮಳ್ಳಿ ಗ್ರಾಮದ ಮಹದೇವಪ್ಪ ಕುಟುಂಬ

July 21, 2020

ಮೈಸೂರು, ಜು.20(ಆರ್‍ಕೆಬಿ)- ವೈಯಕ್ತಿಕ ದ್ವೇಷದಿಂದಾಗಿ ಗ್ರಾಮದಲ್ಲಿ ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಶಿರಮಳ್ಳಿ ಗ್ರಾಮದ ಎಂ. ಮಹದೇವಪ್ಪ ಮತ್ತು ಕುಟುಂಬದ ಸದಸ್ಯರು ಸೋಮವಾರ ಮೈಸೂರಿನಲ್ಲಿ ಪತ್ರಕರ್ತರ ಎದುರು ಕಣ್ಣೀರು ಹಾಕಿ ನ್ಯಾಯಕ್ಕಾಗಿ ಮನವಿ ಮಾಡಿಕೊಂಡರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಹಿಷ್ಕಾರ ಘಟನೆಯ ಬಗ್ಗೆ ವಿವರಿಸಿದ ಮಹದೇವಪ್ಪರ ಪುತ್ರ ನವೀನ್, ಗ್ರಾಮದಲ್ಲಿ ನಡೆಯುತ್ತಿರುವ ಸೀಮೆಂಟ್ ರಸ್ತೆಗೆ ಸಂಬಂಧಿಸಿದಂತೆ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿ ಮಾಡಬೇಕಾದ ಚರಂಡಿಯನ್ನು ನಮ್ಮ ಮನೆ ಮತ್ತು ರಥದ ಮನೆಯ ನಡುವೆ ಇರುವ ಮೂರಡಿ ಜಾಗದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ನಮ್ಮ ಮನೆಯಲ್ಲಿ ನಾವು ನಿರ್ಮಿಸಿ ಕೊಂಡಿರುವ ಶೌಚಾಲಯವನ್ನು ತೆರವುಗೊಳಿಸಿ ಚರಂಡಿ ನಿರ್ಮಿ ಸುವ ಹಠ ತೊಟ್ಟಿದ್ದಾರೆ. ಇದನ್ನು ವಿರೋಧಿಸಿದ ಕಾರಣಕ್ಕಾಗಿ ಗ್ರಾಮದ ಕೆಲ ಮುಖಂಡರು ನಮ್ಮ ಕುಟುಂಬವನ್ನು ಬಹಿಷ್ಕಾರ ಹಾಕಿ ದ್ದಾರೆ. ನಮ್ಮ ಮನೆಗೆ ಯಾರೂ ಹೋಗಬಾರದು, ಮಾತನಾಡಿಸ ಬಾರದು, ನಮ್ಮ ಗದ್ದೆಗೆ ಯಾರೂ ಕೆಲಸಕ್ಕೆ ಹೋಗಬಾರದು ಎಂದು ಬಹಿಷ್ಕಾರ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡರು.

ಹೀಗಾಗಿ ನಮ್ಮ ಜಮೀನಿನಲ್ಲಿ ರೇಷ್ಮೆ, ಹೂವು, ಧಾನ್ಯಗಳು ಕಟಾವಿಗೆ ಬಂದಿದ್ದು, ಭಯದಿಂದ ಯಾರೂ ವ್ಯವಸಾಯದ ಕೆಲಸಗಳಿಗೆ ಬರುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ಪ್ರಾದೇಶಿಕ ಆಯುಕ್ತರು, ಜಿಪಂ ಸಿಇಓ, ತಾಪಂ ಇಓ, ಗ್ರಾಪಂ ಪಿಡಿಓ ಸೇರಿದಂತೆ ಎಲ್ಲರಿಗೂ ನ್ಯಾಯಕ್ಕಾಗಿ ಮನವಿ ಸಲ್ಲಿಸಿ ದ್ದರೂ ಯಾರಿಂದಲೂ ನಮಗೆ ಉತ್ತರವಿಲ್ಲ. ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆ. ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಬೇಸತ್ತಿರುವ ನಮಗೆ ಆತ್ಮಹತ್ಯೆಯೇ ಕೊನೆಯ ದಾರಿ ಎಂದು ಕುಟುಂಬ ಪತ್ರಕರ್ತರೆದುರು ಕಣ್ಣೀರಿಟ್ಟರು. ಸುದ್ದಿಗೋಷ್ಠಿಯಲ್ಲಿ ಮಹದೇವಪ್ಪರ ಪುತ್ರ ನವೀನ್, ಪತ್ನಿ, ಪುತ್ರಿ ಉಪಸ್ಥಿತರಿದ್ದರು.

Translate »