ಮಂಡ್ಯ ನಗರದಲ್ಲಿ ಗುಂಡಿ ಮುಚ್ಚಿಸಲು ಮುಂದಾದ ಮಹಾಲಿಂಗೇಗೌಡ
ಮಂಡ್ಯ

ಮಂಡ್ಯ ನಗರದಲ್ಲಿ ಗುಂಡಿ ಮುಚ್ಚಿಸಲು ಮುಂದಾದ ಮಹಾಲಿಂಗೇಗೌಡ

November 17, 2022

ಮಂಡ್ಯ,ನ.16- ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳು ಗುಂಡಿಗಳಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಮೊನ್ನೆಯಷ್ಟೇ ನಿವೃತ್ತ ಯೋಧನೋರ್ವ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಸಾವನ್ನಪ್ಪಿದ್ದರು. ಇದಾಗಿಯೂ ಎಚ್ಚೆತ್ತುಕೊಳ್ಳದ ಸಂಬಂಧಿಸಿದ ಅಧಿಕಾರಿಗಳು ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೆ ಇದೀಗ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಮುಂದಾಗಿದ್ದು, ಇಂದಿನಿಂದ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಸ್ವಂತ ಖರ್ಚಿನಿಂದ ಮುಚ್ಚಿಸಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ವೈಯಕ್ತಿಕ ವೆಚ್ಚದಲ್ಲಿ ಮಂಡ್ಯ ನಗರಾದ್ಯಂತ ಇರುವ ಅಪಾಯಕಾರಿ ರಸ್ತೆ ಗುಂಡಿಗಳನ್ನು ಸ್ವತಃ ತಾವೇ ನಿಂತು ಮುಚ್ಚಲು ಚಾಲನೆ ನೀಡಿದ್ದು, ರಾಜ್ಯಾದ್ಯಂತ ಇರುವ ಅಪಾಯಕಾರಿ ರಸ್ತೆಗಳ ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ ಅಭಿಯಾನ ಕೈಗೊಳ್ಳಲು ಮಹಾಲಿಂಗೇಗೌಡ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ, ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ರಸ್ತೆಗಳು ಗುಂಡಿಯ ಹಾವಳಿಗಳಿಂದ ಜನ ಸಂಚರಿಸದಂತೆ ಆಗಿದೆ. ಜೊತೆಗೆ ಓರ್ವ ನಿವೃತ್ತ ಯೋಧ ಸಹ ಹೆಮ್ಮಾರಿಗುಂಡಿಗೆ ಬಲಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನಾನೇ ಸ್ವಯಂಪ್ರೇರಿತವಾಗಿ ಗುಂಡಿ ಮುಚ್ಚಿಸಲು ಮುಂದಾಗಿದ್ದೇನೆ. ಇದು ನಾಲ್ಕು ಮಂದಿಗೆ ಮಾದರಿಯಾಗಿ ಪ್ರತಿಯೊಬ್ಬರೂ ತಮ್ಮ ಬಡಾವಣೆಗಳಲ್ಲಿ ಈ ರೀತಿ ಗುಂಡಿ ಮುಚ್ಚಿಸುವ ಕೆಲಸಕ್ಕೆ ಮುಂದಾಗಲಿ ಎಂದರು.

Translate »