ಮಂಡಕಳ್ಳಿ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ, ಅಂಡರ್ ಪಾಸ್ ನಿರ್ಮಾಣ ಶೀಘ್ರವೇ ಕಾರ್ಯಗತವಾಗಲಿ
ಮೈಸೂರು

ಮಂಡಕಳ್ಳಿ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ, ಅಂಡರ್ ಪಾಸ್ ನಿರ್ಮಾಣ ಶೀಘ್ರವೇ ಕಾರ್ಯಗತವಾಗಲಿ

October 22, 2020

ಮೈಸೂರು, ಅ.20(ಪಿಎಂ)- ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಪ್ರಯೋ ಜನ ಕೇವಲ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇದು ನೆರೆ ಜಿಲ್ಲೆಗಳ ಮಧ್ಯಮ ಮತ್ತು ಉದ್ಯಮ ವರ್ಗದ ವ್ಯವಹಾರಗಳ ಸಂಬಂಧ ಸಂಪರ್ಕಕ್ಕೆ ಹೆಚ್ಚು ಅನುಕೂಲ ಕಲ್ಪಿಸಿದೆ. ಹೀಗಾಗಿ ನಿಲ್ದಾಣದ ರನ್ ವೇ ವಿಸ್ತರಿಸುವ ಹಾಗೂ ಅಂಡರ್ ಪಾಸ್ ನಿರ್ಮಾಣ ಶೀಘ್ರವಾಗಿ ಆದಲ್ಲಿ ಹೆಚ್ಚು ಪ್ರಯೋಜನ ಆಗಲಿದೆ ಎಂದು ಎಫ್‍ಕೆ ಸಿಸಿಐ (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ) ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ `ಕೊರೊನಾ ನಂತರದಲ್ಲಿ ವಿಮಾನಯಾನದ ಬೆಳವಣಿಗೆ ಮತ್ತು ಸವಾಲುಗಳು’ ಕುರಿತು ಹಮ್ಮಿಕೊಂ ಡಿದ್ದ ಸಂವಾದದಲ್ಲಿ (ವೆಬಿನಾರ್ ಮೂಲಕ) ಅವರು ಮಾತನಾಡಿದರು.

ಮಂಡಕಳ್ಳಿ ವಿಮಾನ ನಿಲ್ದಾಣ ಕೇವಲ ಮೈಸೂರು ಜಿಲ್ಲೆಗೆ ಮಾತ್ರವಲ್ಲದೆ, ನೆರೆ ಜಿಲ್ಲೆಗಳಾದ ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಜನತೆಗೂ ಪ್ರಯೋಜನಕಾರಿ. ಈ ಜಿಲ್ಲೆಗಳ ಮಧ್ಯಮ ಹಾಗೂ ಉದ್ಯಮ ವರ್ಗದ ವ್ಯವಹಾರ ಸಂಬಂಧ ಪ್ರಯಾಣಕ್ಕೆ ಇದು ಸಹಕಾರಿ. ಮೈಸೂರು ಖ್ಯಾತ ಪ್ರವಾಸಿ ತಾಣವಾಗಿ ರುವ ಹಿನ್ನೆಲೆಯಲ್ಲಿ ದೇಶ-ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೂ ವಿಮಾನ ಯಾನ ಸೌಲಭ್ಯ ಅಗತ್ಯ. ಪ್ರತಿದಿನ 7ರಿಂದ 9 ಸಾವಿರ ವಿದೇಶಿ ಪ್ರವಾಸಿಗರು ಮೈಸೂ ರಿಗೆ ಭೇಟಿ ನೀಡುತ್ತಾರೆ. ಜೊತೆಗೆ ಸ್ಥಳೀಯ ಪ್ರವಾಸಿಗರು ಸುಮಾರು 2 ಸಾವಿರದಷ್ಟು ಆಗಮಿಸುತ್ತಾರೆ. ಅಲ್ಲದೆ, ಸಾವಿರಾರು ಮಂದಿ ಪ್ರವಾಸೋದ್ಯಮ ವಲಯ ಅವಲಂಬಿಸಿ ದ್ದಾರೆ ಎಂದು ತಿಳಿಸಿದರು.

ಮೈಸೂರು ಪ್ರವಾಸಿಗರನ್ನು ಆಕರ್ಷಿ ಸುವ ಸುಂದರ ನಗರ ಮಾತ್ರವಲ್ಲ. ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆ ಗಳೂ ಇವೆ. ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಇರುವುದನ್ನು ಕಾಣಬಹುದು. ಉಡಾನ್ (ಪ್ರಾದೇಶಿಕ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ) ಯೋಜನೆ ಮೂಲಕ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿ ಯೊಂದಿಗೆ ಉತ್ತಮ ಸೇವೆ ಸಾಧ್ಯವಾಗಿದೆ. ಇದರಿಂದ ಮಧ್ಯಮ ವರ್ಗ ವಿಮಾನಯಾನ ಸೇವೆ ಬಳಸಿಕೊಂಡು ದೂರದ ಪ್ರಯಾಣ ಬೆಳೆಸಲು ಅನುಕೂಲವಾಗಿದೆ ಎಂದರು.

ಸೆಂಟ್ರಲ್ ನ್ಯಾಷನಲ್ ಸಿವಿಲ್ ಏವಿಯೇ ಷನ್ ಪಾಲಿಸಿ ಪ್ರಧಾನಿ ನರೇಂದ್ರ ಮೋದಿ ಯವರ ಬಹುದೊಡ್ಡ ಕನಸು. ರಾಷ್ಟ್ರದಲ್ಲಿ ಒಂದೇ ರೀತಿಯ ವಿಮಾನ ಸೇವೆ ಕಲ್ಪಿಸುವ ಜೊತೆಗೆ ಜನಸಾಮಾನ್ಯರಿಗೆ ಕೈಗೆಟಕು ವಂತೆ ಮಾಡುವುದು ಇದರ ಸದುದ್ದೇಶ. ಭಾರತ ದೇಶದ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ಭಾರತದಲ್ಲಿರುವ ವಿಮಾನ ನಿಲ್ದಾಣಗಳು ಕಡಿಮೆಯೇ ಇವೆ. ದೇಶದಲ್ಲಿ 2 ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ ಎಂದರು.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಕಳ ಕಳಿಯಿಂದ ಉತ್ತಮ ಸೇವೆ ಲಭ್ಯವಾಗು ತ್ತಿದೆ. ಇದಕ್ಕೆ ಪೂರಕವಾಗಿ ನಿಲ್ದಾಣದ ನಿರ್ದೇಶಕ ಮಂಜುನಾಥ್ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಮೈಸೂರಿನ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಅವರು ಪ್ರಧಾನಿ ಹಾಗೂ ರಾಜ್ಯ ಸರ್ಕಾರದ ಜೊತೆ ಉತ್ತಮ ಸಂಪರ್ಕ ಹೊಂದುವ ಮೂಲಕ ಮೈಸೂರಿನ ಅಭಿ ವೃದ್ಧಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಉಪಾಧ್ಯಕ್ಷ ಎನ್.ಹೆಚ್. ಜಯಂತ್, ಕಾರ್ಯದರ್ಶಿ ಶೈಲ್ ರಾಮಣ್ಣ, ಖಜಾಂಚಿ ಎಂ.ಸಿ. ಬನ್ಸಾಲಿ ಮತ್ತಿತರರು ಹಾಜರಿದ್ದರು.

 

Translate »