ಮಂಡ್ಯ ಬಂದ್ ಭಾಗಶಃಯಶಸ್ವಿ
ಮಂಡ್ಯ

ಮಂಡ್ಯ ಬಂದ್ ಭಾಗಶಃಯಶಸ್ವಿ

December 20, 2022

ಮಂಡ್ಯ, ಡಿ.19- ಕಬ್ಬು ಹಾಗೂ ಹಾಲಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ವಿವಿಧ ಕನ್ನಡ ಪರ ಹಾಗೂ ಪ್ರಗತಿಪರ ಸಂಘ ಟನೆಗಳು ಕರೆ ನೀಡಿದ್ದ ಮಂಡ್ಯ ನಗರ ಬಂದ್ ಭಾಗಶಃ ಯಶಸ್ವಿಯಾಗಿದ್ದು, ಸಾವಿರಾರು ಮಂದಿ ಮಂಡ್ಯ ನಗರ ದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಈ ಮಧ್ಯೆ ಮದ್ದೂರು ಹಾಗೂ ಕೆ.ಎಂ. ದೊಡ್ಡಿಯಲ್ಲೂ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

 

ಒಂದು ತಿಂಗಳಿಂದ ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಬ್ಬು ಹಾಗೂ ಹಾಲಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ, ರೈತರು ನಿರಂತರ ಧರಣಿ ನಡೆಸುತ್ತಿದ್ದರೂ ಏನು ಪ್ರಯೋಜನವಾಗಿರಲಿಲ್ಲ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಸಚಿವರಾದ ಕೆ.ಗೋಪಾಲಯ್ಯ, ನಾರಾಯಣಗೌಡ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ, ಬೆಂಬಲ ನೀಡಿದ್ದರು. ಜೊತೆಗೆ ಅನೇಕ ಪ್ರಗತಿಪರ, ರೈತ ಪರ, ಕನ್ನಡ ಪರ ಹೋರಾಟಗಾರರು ಬೆಂಬಲ ಸೂಚಿಸಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಮಂಡ್ಯ ನಗರಕ್ಕೆ ಭೇಟಿ ನೀಡಿದ್ದರೂ ಪ್ರತಿಭಟನಾಕಾರರ ಭೇಟಿ ಮಾಡಿರ ಲಿಲ್ಲ. ಸಿಎಂ ಭೇಟಿ ಮಾಡಲು ರೈತರು ತೆರಳಿದರೂ ಅವಕಾಶ ಸಿಕ್ಕಿರಲಿಲ್ಲ. ಮಂಡ್ಯಕ್ಕೆ ಬಂದರೂ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಸಂಬಂಧ ಸಿಎಂ ಏನೂ ಹೇಳಿರಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಇಂದು ಮಂಡ್ಯ ನಗರ ಬಂದ್‍ಗೆ ಕರೆ ನೀಡಿದ್ದರು. ಬೆಳಗ್ಗೆ 11ಕ್ಕೆ ನಗರದ ಸಂಜಯ ವೃತ್ತದ ಬಳಿ ಜಮಾಯಿಸಿದ ರೈತ ಸಂಘದ ಮುಖಂಡರು, ರೈತರು, ಕನ್ನಡ ಪರÀ, ಪ್ರಗತಿಪರ ಸಂಘಟನೆ ಗಳು, ಕಾಲೇಜು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎತ್ತಿನಗಾಡಿ ಮೆರವಣಿಗೆ, ಲಾರಿಯಲ್ಲಿ ಕಬ್ಬು ತುಂಬಿಕೊಂಡು ಮೆರವಣಿಗೆ ನಡೆಸಿದರು. ಪ್ರತಿಭಟನೆ ವೇಳೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಭಾವ ಚಿತ್ರಗಳು ರಾರಾಜಿ ಸುತ್ತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ರಾಜ್ಯ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡದೇ, ರೈತ ರನ್ನು ವಂಚಿಸುತ್ತಿವೆ ಎಂದು ಆರೋಪಿ ಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಅಂಗಡಿ- ಮುಂಗಟ್ಟು ಬಂದ್: ಬಂದ್‍ಗೆ ಬಹುತೇಕ ಮಂಡ್ಯ ನಗರದ ವರ್ತಕರು ಬೆಂಬಲ ನೀಡಿದರು. ನಗರದ ಪ್ರಮುಖ ರಸ್ತೆಗಳಾದ
ಬೆಂಗಳೂರು- ಮೈಸೂರು ಹೆದ್ದಾರಿ, ಆರ್.ಪಿ.ರಸ್ತೆ, ವಿ.ವಿ.ರಸ್ತೆ, ವಿನೋಬಾ ರಸ್ತೆ, ಆಸ್ಪತ್ರೆ ರಸ್ತೆ, ಪೇಟೆ ಬೀದಿ, ಗುತ್ತಲು ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ವಿವೇಕಾನಂದ ಜೋಡಿ ರಸ್ತೆಯ ಅಂಗಡಿ- ಮುಂಗಟ್ಟುಗಳು ಭಾಗಶಃ ಬಂದ್ ಆಗಿದ್ದವು. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಬಂದ್‍ಗೆ ವರ್ತಕರು ಸಂಪೂರ್ಣ ಬೆಂಬಲ ನೀಡಿದರು.

ನಗರದ ಎಲ್ಲಾ ಚಿತ್ರಮಂದಿರಗಳು ಬೆಳಗಿನ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಬೆಂಬಲ ಸೂಚಿಸಿದರೆ, ನಂದಿನಿ ಪಾರ್ಲರ್‍ಗಳು ಸಹ ಬಂದ ಆಗಿದ್ದವು. ಕೆಲ ಆಟೋ, ಖಾಸಗಿ ಬಸ್‍ಗಳÀ ಚಾಲಕರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಲೇಜು ವಿದ್ಯಾರ್ಥಿಗಳು ಭಾಗಿ: ಇನ್ನೂ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದg,É ಕಾಲೇಜು ವಿದ್ಯಾರ್ಥಿಗಳು ಮಾತ್ರ ಸ್ವಯಂ ಪ್ರೇರಿತವಾಗಿ ರಜೆ ಹಾಕಿ ಸಾವಿರಾರು ಸಂಖ್ಯೆಯಲ್ಲಿ ಇಂದು ನಡೆದ ರೈತ ಚಳುವಳಿಯಲ್ಲಿ ಭಾಗಿಯಾಗಿ ಗಮನ ಸೆಳೆದರು. ಇನ್ನುಳಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಜನ ಸಂಚಾರ ಹಾಗೂ ವಾಹನ ಸಂಚಾರ ಎಂದಿನಂತೆ ಇತ್ತು.

ಟ್ರಾಫಿಕ್ ಜಾಮ್, ಬದಲಿ ಸಂಚಾರ ವ್ಯವಸ್ಥೆ: ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋ ಮೀಟರ್‍ಗಟ್ಟಲೇ ವಾಹನಗಳು ಟ್ರಾಫಿಕ್‍ನಲ್ಲಿ ಸಿಲುಕಿದ್ದವು. ಬೆಂಗಳೂರಿನಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳನ್ನು ಮಂಡ್ಯ ನಗರ ಪ್ರವೇಶಿಸಲು ಬಿಡದೇ ಹೊಸ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಟ್ಟಿದ್ದರೆ, ಮಂಡ್ಯ ನಗರದಲ್ಲಿ ವಿವೇಕಾನಂದ ಜೋಡಿ ರಸ್ತೆಯಿಂದ ಪಿಇಎಸ್ ಕಾಲೇಜು ರಸ್ತೆವರೆಗೆ ವಾಹನ ಸಂಚಾರ ನಿರ್ಬಂಧಗೊಳಿಸಲಾಗಿತ್ತು.

ಮದ್ದೂರು ಬಂದ್: ಮಂಡ್ಯ ನಗರದ ಪ್ರತಿಭಟನೆಯ ಭಾಗವಾಗಿ ರೈತ ಮುಖಂಡರು ಕರೆ ನೀಡಿದ್ದ ಮದ್ದೂರು ಹಾಗೂ ಕೆ.ಎಂ.ದೊಡ್ಡಿ ಬಂದ್ ಯಶಸ್ವಿಗೊಂಡಿತು. ಮದ್ದೂರು ಹಾಗೂ ಕೆ.ಎಂ.ದೊಡ್ಡಿ ಪಟ್ಟಣಗಳ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ಸಂಚಾರ ಎಂದಿನಂತೆ ಇತ್ತು. ಇನ್ನು ರೈತ ಮುಖಂಡರು ವಿವಿಧ ಸಂಘಟನೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಸುನಿತಾ ಪುಟ್ಟಣ್ಣಯ್ಯ, ಕೆಂಪೂಗೌಡ, ಮಧುಚಂದನ್, ತಗ್ಗಹಳ್ಳಿ ವೆಂಕಟೇಶ್, ವಿನಯ್‍ಕುಮಾರ್, ಕರವೇ ಜಯರಾಂ, ಕನ್ನಡ ಸೇನೆ ಮಂಜು, ನಾಗಣ್ಣಗೌಡ ಸೇರಿದಂತೆ ಸುಮಾರು ಮೂರು ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಭಾರತೀನಗರದಲ್ಲಿ ಬಂದ್: ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರು ಮಂಡ್ಯದಲ್ಲಿ ನಡೆಸುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಪ್ರಗತಿಪರ ಸಂಘಟನೆಗಳು ಭಾರತೀನಗರದಲ್ಲಿ ಸೋಮವಾರ ಕರೆ ನೀಡಿದ್ದ ಬಂದ್ ಯಶಸ್ವಿ ಆಗಿದೆ.

ಸರ್ಕಾರಿ ಕಚೇರಿಗಳು, ಮೆಡಿಕಲ್, ಚಿತ್ರಮಂದಿರ, ಶಾಲಾಕಾಲೇಜುಗಳು, ತರಕಾರಿ ಅಂಗಡಿಗಳು ಎಂದಿನಂತೆ ಇದ್ದವು. ಮದ್ದೂರು-ಮಳವಳ್ಳಿ ಹೆದ್ದಾರಿ, ಹಲಗೂರು ರಸ್ತೆ, ಮಂಡ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ ಸರ್ಕಾರ ಕೂಡಲೇ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದರು. ಮಾದರಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಕ್ಯಾತಘಟ್ಟ ರವಿಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ರೈತಸಂಘದ ಮುಖಂಡ ಅಣ್ಣೂರು ಮಹೇಂದ್ರ, ತೊರೆಚಾಕನಹಳ್ಳಿ ಶಂಕರೇಗೌಡ, ಬಿ.ಎಸ್.ಬೋರೇಗೌಡ, ಮುಟ್ಟನಹಳ್ಳಿ ಶಿವಲಿಂಗೇ ಗೌಡ, ವರ್ತಕ ಸಂಘದ ಅಧ್ಯಕ್ಷ ಕೆಂಪಣ್ಣ, ಅಣ್ಣೂರು ಆರ್.ಸಿದ್ದಪ್ಪ, ಚಂದ್ರಶೇಖರ್, ಕ್ಯಾತಘಟ್ಟದ ಗಿರೀಶ್, ತಿಪ್ಪೂರು ಕೃಷ್ಣ, ರಘುವೆಂಕಟೇಗೌಡ, ಕರಡಕೆರೆ ಯೋಗೇಶ್, ವೈ.ಬಿ.ಶ್ರೀಕಂಠಸ್ವಾಮಿ, ತೊರೆಬೊಮ್ಮನಹಳ್ಳಿ ವೆಂಕಟೇಶ್, ಚಿಕ್ಕರಸಿನಕೆರೆ ಪ್ರಸಾದ್, ಅಣ್ಣೂರು ಪ್ರಸನ್ನ ಸೇರಿ ಹಲವರು ಇದ್ದರು.

Translate »