ತಿಂಗಳ ಕಾಲ ನಂದಿನಿ ಉತ್ಪನ್ನಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ
ಮೈಸೂರು

ತಿಂಗಳ ಕಾಲ ನಂದಿನಿ ಉತ್ಪನ್ನಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

December 20, 2022

ಮೈಸೂರು,ಡಿ.19(ಎಂಟಿವೈ)-ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೆಎಂಎಫ್ ಹಾಗೂ ಮೈಮುಲ್ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮೇಳವನ್ನು ಆಯೋಜಿಸಿದ್ದು, ಡಿ.19ರಿಂದ ಜ.19ರವರೆಗೆ `ನಂದಿನಿ ಸಿಹಿ ಉತ್ಸವ’ ನಡೆಯಲಿದೆ.
ಪ್ರತಿ ಬಾರಿಯಂತೆ ಈ ವರ್ಷವೂ ‘ನಂದಿನಿ ಸಿಹಿ ಉತ್ಸವ’ ಆರಂಭಿಸಲಾಗಿದ್ದು, ಹಾಲು, ಮೊಸರು, ತುಪ್ಪ ಹೊರತುಪಡಿಸಿ 52 ಬಗೆಯ ನಂದಿನಿ ಸಿಹಿ ಉತ್ಪನ್ನಗಳ ದರದಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಸೋಮವಾರ ಕೆಆರ್‍ಎಸ್ ರಸ್ತೆಯಲ್ಲಿರುವ ನಂದಿನಿ ಪಾರ್ಲರ್ ನಲ್ಲಿ `ಸಿಹಿ ಉತ್ಸವ’ಕ್ಕೆ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಚಾಲನೆ ನೀಡಿ ಮಾತನಾಡಿ, ಕೆಎಂಎಫ್ ಹಾಗೂ ಮೈಮುಲ್ ವತಿಯಿಂದ ಕಳೆದ 7 ವರ್ಷದಿಂದ `ನಂದಿನಿ ಸಿಹಿ ಉತ್ಸವ’ ನಡೆಸಿ, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನಂದಿನಿ ಉತ್ಪನ್ನ ಗಳನ್ನು ನೀಡಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಶೇ.10ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು. ನಂದಿನಿ ಉತ್ಪನ್ನಗಳ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸು ವುದಿಲ್ಲ. ಇದರಿಂದ ಗ್ರಾಹಕರ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಖಾಸಗಿ ಸಂಸ್ಥೆಗಳ ತಯಾರಿಸುವ ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವಾಸಾರ್ಹವಾದ ನಂದಿನಿ ಉತ್ಪನ್ನಗಳನ್ನೇ ಬಳಸಬೇಕು. ನಂದಿನಿ ಉತ್ಪನ್ನಗಳ ಬಳಕೆ ಹೆಚ್ಚಾದರೆ, ಅದರಿಂದ ರೈತರಿಗೆ ಲಾಭವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ರೈತರ ಹೈನುಗಾರಿಕೆಯಿಂದ ಉತ್ಪತ್ತಿಯಾಗುವ ಶುದ್ಧ ಹಾಲಿನಿಂದ ತಯಾರಾಗುವ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುವಂತೆ ಮನವಿ ಮಾಡಿದರು.

ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಕೆಎಂಎಫ್ ವತಿಯಿಂದ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಬಾರಿ ನಂದಿನಿ ಸಿಹಿ ಉತ್ಸವದಲ್ಲಿ 52 ಪದಾರ್ಥಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಮೈಮುಲ್ ವತಿಯಿಂದ ಜಿಲ್ಲೆಯಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿ ಸಲಾಗಿದೆ. ಗ್ರಾಹಕರಿಗೆ ಸುಲಭವಾಗಿ ನಂದಿನಿ ಉತ್ಪನ್ನ ತಲುಪಿ ಸಲು ಕ್ರಮ ಕೈಗೊಳ್ಳಲಾಗಿದ್ದು, ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ನಂದಿನಿ ಪಾರ್ಲರ್ ಹಾಗೂ ಗೆಲಾಕ್ಸಿ ತೆರೆಯಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಗ್ರಾಹಕರು ಸಿಹಿ ಉತ್ಸವದ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯಕುಮಾರ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ನಂದಿನಿ ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ವತಿಯಿಂದ ತಯಾರಿಸಲಾಗುತ್ತಿದೆ. ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗಿಂತ ಉತ್ತಮ ಗುಣಮಟ್ಟ ಹಾಗೂ ರುಚಿಕರವಾದ ತಿನಿಸನ್ನು ತಯಾರಿಸ ಲಾಗುತ್ತಿದೆ. ಆದರೆ ಅವುಗಳ ಬಗ್ಗೆ ಹೆಚ್ಚು ಪ್ರಚಾರ ದೊರೆಯು ತ್ತಿಲ್ಲ. ನಂದಿನಿ ಉತ್ಪನ್ನ ಎಂದರೆ ಕೆಲವರಿಗೆ ಹಾಲು, ಮೊಸರು, ತುಪ್ಪವಷ್ಟೇ ತಿಳಿದಿದೆ. ಹಾಗಾಗಿ ವಿವಿಧ ಪೇಡ, ಚಕ್ಕುಲಿ, ಬರ್ಫಿ, ಕುಕ್ಕೀಸ್, ರಸಗುಲ್ಲಾ, ಕರದಂಟು ಸೇರಿದಂತೆ ವಿವಿಧ ತಿನಿಸುಗಳ ಬಗ್ಗೆಯೂ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಶೇ.20ರಷ್ಟು ರಿಯಾ ಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಸಭೆ, ಸಮಾರಂಭಗಳಲ್ಲಿ ನಂದಿನಿ ಉತ್ಪನ್ನಗಳ ಬಳಕೆಗೆ ಪ್ರೇರಣೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 170 ನಂದಿನಿ ಪಾರ್ಲರ್‍ಗಳಿದ್ದು, 900 ಮಂದಿ ಏಜೆಂಟರು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲಾ ಕೇಂದ್ರಗಳಲ್ಲೂ ರಿಯಾಯಿತಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು. ಮೈಮುಲ್‍ನಲ್ಲಿ ಪ್ರತಿದಿನ 6.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅದರಲ್ಲಿ ನಂದಿನಿ ಹಾಲಿನ ಪ್ಯಾಕೆಟ್, ಕ್ಷೀರ ಭಾಗ್ಯ ಕಾರ್ಯಕ್ರಮಕ್ಕೆ ಬಳಸಿ ಉಳಿದ ಹಾಲನ್ನು ಸಿಹಿ ಹಾಗೂ ಇತರೆ ಉಪಉತ್ಪನ್ನಗಳ ತಯಾರಿಕೆಗೆ ಬಳಸಲಾ ಗುತ್ತಿದೆ. ಕೆಎಂಎಫ್ ಹಾಗೂ ಮೈಮುಲ್ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿರುವು ದರಿಂದ ಉತ್ತಮ ವಹಿವಾಟು ನಡೆಯುತ್ತಿದೆ. ಇದರಿಂದಾಗಿ ಒಂದೂವರೆ ವರ್ಷದ ಅವಧಿಯಲ್ಲಿ ರೈತರು ಹಾಕುವ ಹಾಲಿಗೆ ಲೀಟರ್‍ಗೆ 7 ರೂ. ಹೆಚ್ಚಳ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಉಮಾಶಂಕರ್, ಕೆ.ಜಿ.ಮಹೇಶ್, ಪ್ರಕಾಶ್, ಕೆ.ಈರೇಗೌಡ, ಎಸ್.ಸಿ.ಅಶೋಕ್, ಕೆ.ಎಸ್.ಶಿವಕುಮಾರ್, ದಾಕ್ಷಾಯಿಣಿ, ಲೀಲಾ, ಬಿ.ನೀಲಾಂಬಿಕೆ, ಮೈಮುಲ್ ಪ್ರದಾನ ವ್ಯವಸ್ಥಾಪಕ ಹೆಚ್.ಆರ್.ರಘು, ವ್ಯವಸ್ಥಾಪಕರಾದ ಡಾ.ಸಣ್ಣತಮ್ಮೇಗೌಡ, ಕೆ.ಎಸ್.ಜಗದೀಶ್, ಎನ್.ಸಿ.ಅಶೋಕ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »