ಎರಡನೇ ದಿನದ ವೀಕೆಂಡ್ ಕಫ್ರ್ಯೂಗೆ ಮಂಡ್ಯ ಸ್ತಬ್ಧ
ಮಂಡ್ಯ

ಎರಡನೇ ದಿನದ ವೀಕೆಂಡ್ ಕಫ್ರ್ಯೂಗೆ ಮಂಡ್ಯ ಸ್ತಬ್ಧ

April 26, 2021

ಭಾನುವಾರವಾಗಿದ್ದರಿಂದ ಮಾಂಸದಂಗಡಿ ಮುಂದೆ ಜನರ ಕ್ಯೂ
ಸಾಮಾಜಿಕ ಅಂತರ ಕಾಪಾಡದ ಅಂಗಡಿ ಮಾಲೀಕರಿಗೆ ದಂಡ
ಮಂಡ್ಯ ನಗರ ಸೇರಿ ಬಹುತೇಕ ಕಡೆ ಸಂಪೂರ್ಣ ಬಂದ್
ಜನರಿಲ್ಲದ ಕಾರಣ ಸಾರಿಗೆ ಬಸ್ ಸಂಚಾರ ಸ್ತಬ್ಧ
ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನ ಸಂಚಾರ

ಮಂಡ್ಯ, ಏ.25(ಮೋಹನ್‍ರಾಜ್)- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಯಲ್ಲಿರುವ ವೀಕೆಂಡ್ ಕಫ್ರ್ಯೂ ಎರಡನೇ ದಿನವಾದ ಭಾನು ವಾರವು ಸಹ ಮಂಡ್ಯ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ಸಕ್ಕರೆ ನಗರಿಯ ಜನರು ಮನೆಯಲ್ಲಿದ್ದುಕೊಂಡೇ ಕಫ್ರ್ಯೂಗೆ ಬೆಂಬಲ ನೀಡಿದರೆ, ಬೆಳಿಗ್ಗೆ 6ರಿಂದ 10ರವರೆಗೆ ಎಂದಿನಂತೆ ವ್ಯಾಪಾರ ವಹಿವಾಟು ನಡೆದು ಬಳಿಕ ಕಫ್ರ್ಯೂ ಯಶಸ್ವಿಯಾಯಿತು.

ಭಾನುವಾರವಾಗಿದ್ದರಿಂದ ತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳಿಗಿಂತ ಮಾಂಸ, ಚಿಕನ್ ಹಾಗೂ ಫಿಶ್ ಸೆಂಟರ್‍ಗಳ ಬಳಿ ಜನರ ದಂಡೇ ನೆರೆದಿತ್ತು. ಭಾನುವಾರದ ಬಾಡೂಟ ಸವಿಯಲು ಮಾಂಸದಂಗಡಿಗಳ ಮುಂದೆ ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೇ ನಿಂತಿದ್ದ ದೃಶ್ಯಗಳು ಕಂಡು ಬಂದವು.

ಮಾಂಸದಂಗಡಿಗಳ ಮುಂದೆ ಜನರ ಕ್ಯೂ: ಮಂಡ್ಯ ಜಿಲ್ಲೆಯಲ್ಲಿ ಭಾನುವಾರದ ದಿನ ಮಾಂಸಕ್ಕೆ ಭಾರೀ ಬೇಡಿಕೆ ಇದ್ದು ದರಿಂದ ಮಾಂಸದಂಗಡಿಗಳ ಮುಂದೆ ಜನರ ಬಹುದೊಡ್ಡ ಸಾಲು ಇತ್ತು. ಮಾಂಸದಂಗಡಿಗಳಿಗೆ ಫೇಮಸ್ ಆದ ಚಿಕ್ಕಮಂಡ್ಯ, ಸಾತನೂರು, ಶಿವಳ್ಳಿ ಹಾಗೂ ಕೆಲ ಗುಡ್ಡೆಮಾಂಸ ಮಾರುವ ಅಂಗಡಿಗಳ ಬಳಿ ಜನರ ಕ್ಯೂ ಇತ್ತು. ಕೆಲವೆಡೆಯಂತೂ ಮಾಂಸ ಖರೀದಿಸಲು ಜನ ಸಾಮಾಜಿಕ ಅಂತರವಿಲ್ಲದೇ ಮುಗಿಬೀಳುತ್ತಿದ್ದ ದೃಶ್ಯಗಳು ಕಂಡು ಬಂದರೆ, ಇನ್ನು ಕೆಲವೆಡೆ ಟೋಕನ್‍ಗಳ ಮೂಲಕ ಸಾಮಾಜಿಕ ಅಂತರ ಕಾಪಾಡಿ ಕೊಂಡು ಮಟನ್ ಖರೀದಿ ಮಾಡುತ್ತಿದ್ದರು.
ಇನ್ನು ಮಂಡ್ಯ ನಗರದ ಹೊಸಹಳ್ಳಿ ವೃತ್ತದಲ್ಲಿರುವ ಫಿಶ್ ಮಾರ್ಕೆಟ್ ಬಳಿ ಜನ ಮೀನು ಖರೀದಿಸಲು ಮುಗಿ ಬೀಳುತ್ತಿದ್ದರು. ಒಮ್ಮೆಲೇ ನೂರಾರು ಜನ ಫಿಶ್ ಖರೀದಿ ಮಾಡಲು ಮುಗಿಬಿದ್ದರಿಂದ ನಗರಸಭೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಸಾಮಾಜಿಕ ಅಂತರವಿಲ್ಲದೇ ಮೀನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು. ಜೊತೆಗೆ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿ ಮಾಡಿ, ಇಲ್ಲದಿದ್ದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದರು.

ಮಾರುಕಟ್ಟೆಗಳ ಬಳಿ ಜನಸಂದಣಿ: ಜನದಟ್ಟಣೆ ತಡೆಯುವ ಸಲುವಾಗಿ ಮಂಡ್ಯ ನಗರದ ಪೇಟೆಬೀದಿಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ನಗರದ ಪ್ರಮುಖ ಆರೇಳು ಸ್ಥಳಗಳಿಗೆ ವಿಸ್ತರಣೆ ಮಾಡಿದ್ದರು. ಆದರೆ ಮಾರುಕಟ್ಟೆ ವಿಸ್ತರಣೆಯಾದರೂ ಜನದಟ್ಟಣೆ ಮಾತ್ರ ಕಡಿಮೆ ಇರಲಿಲ್ಲ. ನಗರದ ಕಾಳಿಕಾಂಬ ದೇಗುಲ, ಸ್ವರ್ಣಸಂದ್ರ ಮಾರುಕಟ್ಟೆ, ಸರ್‍ಎಂವಿ ಕ್ರೀಡಾಂಗಣದ ಬಳಿ ಜನ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ತರಕಾರಿ ಖರೀದಿಸುತ್ತಿ ದ್ದರು. ಪೊಲೀಸರು ಎಷ್ಟೇ ತಿಳಿ ಹೇಳಿದರೂ ಕೆಲವರು ಮಾಸ್ಕ್ ಧರಿಸದೇ ಬೇಜವಬ್ದಾರಿ ಪ್ರದರ್ಶಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
10ರ ಬಳಿಕ ಎಲ್ಲವೂ ಬಂದ್: ಬೆಳಿಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆಯೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಪೊಲೀಸರು ವರ್ತಕರಿಗೆ ಸೂಚಿಸಿದರು. ಮಂಡ್ಯ ನಗರದ ಪ್ರಮುಖ ವರ್ತುಲ ಪ್ರದೇಶಗಳಾದ ಗುತ್ತಲು, ಪೇಟೆಬೀದಿ, ಹೊಸಹಳ್ಳಿ, ಬನ್ನೂರು ರಸ್ತೆ, ನೂರಡಿ ರಸ್ತೆ, ವಿ.ವಿ.ರಸ್ತೆಗಳಲ್ಲಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್‍ಗೊಳಿಸಿ, ಜನರನ್ನು ಮನೆಯತ್ತ ಕಳುಹಿಸುವಲ್ಲಿ ಪೊಲೀಸರು ತೊಡಗಿದರೆ, ಪ್ರಮುಖ ಹೋಬಳಿ ಕೇಂದ್ರಗಳಾದ ಕೆರಗೋಡು, ಬಸರಾಳು, ಶಿವಳ್ಳಿ, ಕೊತ್ತತ್ತಿ ಸೇರಿದಂತೆ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರ ಗಳಲ್ಲಿ ಆಯಾಯ ಪೊಲೀಸ್ ಠಾಣಾ ಸಿಬ್ಬಂದಿ ಗಳು ಜನರನ್ನು ಮನೆಗೆ ಕಳುಹಿಸುತ್ತಿದ್ದರು.

ಕಫ್ರ್ಯೂ ಇದ್ದರೂ ಹೆಲ್ಮೆಟ್ ಕಡ್ಡಾಯ: ಇತ್ತೀಚೆಗೆ ಮಂಡ್ಯ ನಗರದಲ್ಲಿ ಹೆಲ್ಮೆಟ್ ಕಡ್ಡಾಯವಾಗಿದ್ದು, ಪೊಲೀಸರು ಕಠಿಣ ನಿಯಮವನ್ನು ಕಫ್ರ್ಯೂ ಸಂದರ್ಭದಲ್ಲೂ ಜಾರಿಗೆ ತಂದಿದ್ದರು. ಕಫ್ರ್ಯೂ ಜಾರಿಯಲ್ಲಿದ್ದ ಸಮಯದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರನ್ನು ತಪಾಸಣೆ ನಡೆಸುತ್ತಿದ್ದ ಪೊಲೀ ಸರು ತುರ್ತು ಕೆಲಸಕ್ಕೆ ತೆರಳುತ್ತಿದ್ದವರಿಗೆ ಹೆಲ್ಮೆಟ್ ಪ್ರಶ್ನಿಸುತ್ತಿದ್ದರು. ಒಂದು ವೇಳೆ ಹೆಲ್ಮೆಟ್ ಇಲ್ಲದಿದ್ದರೆ ಹೆಲ್ಮೆಟ್ ಧರಿಸಿ ಬಳಿಕ ತಮ್ಮ ತುರ್ತು ಕೆಲಸಕ್ಕೆ ತೆರಳುವಂತೆ ಸೂಚಿಸುತ್ತಿದ್ದರು. ಹೆಲ್ಮೆಟ್ ಇಲ್ಲದವರಿಗೆ ಸ್ಥಳದಲ್ಲೇ ಪೊಲೀಸರು ದಂಡ ವಿಧಿಸುತ್ತಿದ್ದರು.

ಕಫ್ರ್ಯೂ ನಡುವೆಯೂ ನಡೆದ ಮದುವೆ: ಕಫ್ರ್ಯೂ ನಡುವೆಯೂ ನಿಗದಿಯಾಗಿದ್ದ ಕೆಲ ಶುಭಕಾರ್ಯಗಳು ಮಂಡ್ಯದಲ್ಲಿ ಜರುಗಿದವು. ಮಂಡ್ಯ ನಗರದ ಹಲವು ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಗಳು ನಡೆದವು. ಆದರೆ ಮದುವೆಗೆ ಕೇವಲ 50 ಜನಕ್ಕೆ ಮಾತ್ರ ಸೀಮಿತ ಗೊಳಿಸಿದ್ದರಿಂದ ಮದುವೆ ಮನೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ವಧು, ವರನ ಕಡೆಯವರು ಮದುವೆಗೆ ಬರುವವರಿಗೆ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪಾಸ್‍ಗಳನ್ನು ಕಲ್ಯಾಣ ಮಂಟಪದ ಸಿಬ್ಬಂದಿ ಪರಿಶೀಲಿಸುತ್ತಿದ್ದರೆ, ಕಲ್ಯಾಣ ಮಂಟಪಗಳಿಗೆ ಜನರನ್ನು ಪರಿಶೀಲಿಸಲು ಪೊಲೀಸರು ಗಂಟೆ ಗೊಮ್ಮೆ ಭೇಟಿ ಕೊಡುತ್ತಿದ್ದರು.

ಇನ್ನು ಕೆಲವು ಕಡೆ ಇನ್ನಿತರ ಸಮಾರಂಭಗಳು ಜರುಗುತ್ತಿದ್ದರೂ ಜನರಿಲ್ಲದೇ ವೇದಿಕೆಗಳು ಭಣಗುತ್ತಿದ್ದವು. ಅನೇಕ ಕಡೆ ಅಂತ್ಯಕ್ರಿಯೆಗಳು ನಡೆದಿದ್ದು, ಅಲ್ಲೂ ಸಹ 20ರಿಂದ 25ಜನಕ್ಕೆ ಅಷ್ಟೇ ಅವಕಾಶ ನೀಡಲಾಗಿತ್ತು. ಅಂತ್ಯಕ್ರಿಯೆ ಸಂದರ್ಭದಲ್ಲಿ ತಮಟೆ ಇಲ್ಲದೇ ಕೇವಲ ಪೂಜೆ, ಪುನಸ್ಕಾರದ ನಂತರ ಅಂತಿಮ ಸಂಸ್ಕಾರ ನಡೆಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದರು. ನಿನ್ನೆ ಮಂಡ್ಯದಲ್ಲಿ ಬಸ್ ಸಂಚಾರ ಎಂದಿನಂತೆ ಸಾಗಿತ್ತು. ಆದರೆ ಸಮರ್ಪಕವಾಗಿ ಪ್ರಯಾಣಿಕರು ಇಲ್ಲದ ಕಾರಣ ಇಂದು ಬಸ್ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಭಣಗುಡುತ್ತಿತ್ತು. ಉಳಿದಂತೆ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್ ಸೇರಿದಂತೆ ತುರ್ತು ಸೇವೆ ಲಭ್ಯವಿತ್ತು. ಕೆಲ ಹೋಟೆಲ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆ ಸಹ ಇತ್ತು. ಇದಲ್ಲದೇ ಜಿಲ್ಲೆಯ ಎಲ್ಲಾ ತಾಲ್ಲೂಕು, ಹೋಬಳಿ ಹಾಗೂ ಪ್ರಮುಖ ಪ್ರದೇಶಗಳಲ್ಲೂ ಕಫ್ರ್ಯೂ ಬಹುತೇಕ ಯಶಸ್ವಿಗೊಂಡಿತು.

Translate »