ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮೈಸೂರಿಂದ ಮಂಗಳೂರಿಗೆ ಸಾಕ್ಷ್ಯಗಳು ವರ್ಗಾವಣೆ
ಮೈಸೂರು

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮೈಸೂರಿಂದ ಮಂಗಳೂರಿಗೆ ಸಾಕ್ಷ್ಯಗಳು ವರ್ಗಾವಣೆ

November 23, 2022

ಮೈಸೂರು, ನ.22(ಆರ್‍ಕೆ)-ಮಂಗ ಳೂರಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮೈಸೂರಿನ ಲೋಕನಾಯಕನಗರದಲ್ಲಿ ಶಂಕಿತ ಉಗ್ರ ನೆಲೆಸಿದ್ದ ಕೊಠಡಿಯಲ್ಲಿ ಸಿಕ್ಕಿದ್ದ ಸಾಕ್ಷ್ಯಗಳನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆ.

ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮೊಹಮದ್ ಶಾರಿಕ್ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕನಾಯಕನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದ. ಮಂಗಳೂರಲ್ಲಿ ಸ್ಫೋಟ ಸಂಭವಿ ಸಿದ ನಂತರ ಪೊಲೀಸರು ಈತನ ಕೊಠಡಿ ಪರಿಶೀಲಿಸಿದಾಗ ಕುಕ್ಕರ್ ಬಾಂಬ್ ತಯಾ ರಿಸಲು ಬಳಸುತ್ತಿದ್ದ ಕಚ್ಛಾವಸ್ತುಗಳು ಅಲ್ಲಿ ಪತ್ತೆಯಾಗಿದ್ದವು. ಅವುಗಳನ್ನು ಪೊಲೀ ಸರು ವಶಪಡಿಸಿಕೊಂಡಿದ್ದರು. ನಿನ್ನೆ ಈ ಪದಾರ್ಥಗಳನ್ನು ಮಂಗಳೂರಿಗೆ ಕೊಂಡೊಯ್ದು, ತನಿಖಾಧಿಕಾರಿಗಳಿಗೆ ಒಪ್ಪಿಸ ಲಾಯಿತು. ಸೋಮವಾರ ಮಂಗಳೂರಿಗೆ ಭೇಟಿ ನೀಡಿದ್ದ ಕಾನೂನು-ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮೈಸೂರಿನಲ್ಲಿ ವಶಪಡಿಸಿಕೊಂಡ ಸ್ಫೋಟದ ಸಾಕ್ಷ್ಯಗಳ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ವಿವರಿಸಿ ದರು. ಸಕ್ರ್ಯೂಟ್ ಬೋರ್ಡ್, ಸಣ್ಣ-ಸಣ್ಣ ಬೋಲ್ಟ್‍ಗಳು, ಬ್ಯಾಟರಿ, ಮ್ಯಾಚ್ ಬಾಕ್ಸ್, ಸಲ್ಫರ್, ಪಾಸ್ಫರಸ್, ವುಡನ್ ಪೌಡರ್, ಅಲ್ಯೂಮಿನಿಯಂ ಮಲ್ಟಿ ಮೀಟರ್, ವೈಯರ್‍ಗಳು, ಮಿಕ್ಸರ್ ಜಾರ್ ಗಳು, ಪ್ರೆಷರ್ ಕುಕ್ಕರ್ ಸೇರಿದಂತೆ ಹಲವು ವಸ್ತುಗಳನ್ನು ಶಾರಿಕ್ ಕುಕ್ಕರ್ ಬಾಂಬ್ ತಯಾರಿಸಲು ಬಳಸುತ್ತಿದ್ದನೆಂಬುದು ಆತ ವಾಸವಿದ್ದ ಕೊಠಡಿ ಸಾಕ್ಷ್ಯಗಳಿಂದ ತಿಳಿದುಬಂದಿದೆ ಎಂದು ಆಯುಕ್ತರು, ಎಡಿಜಿಪಿ ಅವರಿಗೆ ತಿಳಿಸಿದರು. ಪ್ರಕರಣ ಸಂಬಂಧ ಮಂಗಳೂರು ಮತ್ತು ಮೈಸೂರು ಪೊಲೀಸರು ಮೊಹಮ್ಮದ್ ಶಾರಿಕ್, ಆತನ ಜೊತೆಯಲ್ಲಿ ಮೊಬೈಲ್ ರಿಪೇರಿ ತರಬೇತಿ ಪಡೆದಿದ್ದ ಮೊಹಮ್ಮದ್ ಸೈಯ್ಯದ್, ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನೆನ್ನಲಾದ ರುಹುಲ್ ಮತ್ತು ಕೊಠಡಿ ಬಾಡಿಗೆಗೆ ನೀಡಿ ಅಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮನೆ ಮಾಲೀಕ ಮೋಹನ್‍ಕುಮಾರ್ ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡು ತಂಡ: ಅಕ್ಟೋಬರ್ ತಿಂಗಳಲ್ಲಿ ಕೊಯಮತ್ತೂರಿನಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಓರ್ವ ಸಾವನ್ನಪ್ಪಿದ್ದ ಪ್ರಕರಣದ ಹಿನ್ನೆಲೆಯಲ್ಲಿ ತಮಿಳುನಾಡು ಡಿಐಜಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಅಲ್ಲಿನ ಪೊಲೀಸ್ ತಂಡವೂ ಮೈಸೂರಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಅ.23ರಂದು ಕೊಯಮತ್ತೂರಿನಲ್ಲಿ ಮಾರುತಿ-800 ಕಾರಿನಲ್ಲಿ ಸ್ಫೋಟ ಸಂಭವಿಸಿ, ಆರೋಪಿ ಜಮೀಶ್ ಮುಬೀನ್ ಎಂಬ ಇಂಜಿನಿಯರಿಂಗ್ ಪದವೀಧರ ಸಾವನ್ನಪ್ಪಿದ್ದ.

Translate »