ಮೈಸೂರು ಸೇರಿ ಹಲವು ನಗರಗಳಿಗೆ   ಸೋಂಕಿನ 2ನೇ ಅಲೆ ಅಪಾಯ
ಮೈಸೂರು

ಮೈಸೂರು ಸೇರಿ ಹಲವು ನಗರಗಳಿಗೆ  ಸೋಂಕಿನ 2ನೇ ಅಲೆ ಅಪಾಯ

December 3, 2020

ಬೆಂಗಳೂರು, ಡಿ.2(ಕೆಎಂಶಿ)- ಬೆಂಗಳೂರು ನಗರ ಸೇರಿ ದಂತೆ ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಅಪ್ಪಳಿ ಸುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರನ್ನೊಳಗೊಂಡ ಕಾರ್ಯಪಡೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಡಾ.ಸುದರ್ಶನ್ ನೇತೃತ್ವದ ಕಾರ್ಯಪಡೆ ಸರ್ಕಾರಕ್ಕೆ ಎರಡನೇ ಅಲೆಗೆ ಸಂಬಂಧಿಸಿದಂತೆ ಸುದೀರ್ಘ ಮುನ್ನೆಚ್ಚರಿಕೆ ನೀಡಿರುವುದಲ್ಲದೆ ವರ್ಷಾಂತ್ಯದಲ್ಲಿ ನಡೆಯಲಿರುವ ಹೊಸ ವರ್ಷಾಚರಣೆಯನ್ನು ನಿಷೇಧಿಸಿ ಮತ್ತು ಡಿಸೆಂಬರ್ 26 ರಿಂದ 2021ರ ಜನವರಿ ಒಂದರವರೆಗೆ ರಾತ್ರಿ ಕಫ್ರ್ಯೂ ಹೇರು ವಂತೆ ಸಲಹೆ ಮಾಡಿದೆ. ವಿಶ್ವದ ಪ್ರಮುಖ ರಾಷ್ಟ್ರಗಳು ಹಾಗೂ ದೇಶದ ಕೆಲವು ರಾಜ್ಯಗಳಲ್ಲಿ ಎರಡನೇ ಅಲೆ ಆರಂಭಗೊಂ ಡಿದೆ. ಇದು ಇತರ ರಾಜ್ಯಗಳಿಗೂ ವಿಸ್ತರಿಸುವುದನ್ನು ತಳ್ಳಿಹಾಕು ವಂತಿಲ್ಲ. ಎರಡನೇ ಅಲೆ ಇರುವ ರಾಜ್ಯಗಳ ಜನರು ಕರ್ನಾ ಟಕದ ವಿವಿಧ ಭಾಗದಲ್ಲೂ ಸಂಚರಿಸಬಹುದು. ಇದರಿಂದ ಸಾಂಕ್ರಾಮಿಕ ಸೋಂಕು ಹರಡುವ ಸಾಧ್ಯತೆ ಇದೆ. ಚಳಿಗಾಲದ ಸಂದರ್ಭದಲ್ಲಿ ಸೋಂಕು ತ್ವರಿತವಾಗಿ ಹರಡಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಕ್ಟೋಬರ್‍ಗೂ ಮುಂಚೆ ಕೋವಿಡ್ ನಿರ್ವಹಣೆಗಾಗಿ ಸಿದ್ಧಗೊಂಡಿದ್ದಂತೆ ರಾಜ್ಯದಲ್ಲಿ ಮುಂದಿನ ಎರಡು ತಿಂಗಳು ಅದೇ ಎಚ್ಚರಿಕೆಗಳನ್ನು ಪಾಲಿಸಬೇಕು. ಮದುವೆ, ಸಮಾರಂಭ ಸೇರಿದಂತೆ ಇತರ ಸಾರ್ವಜನಿ ಕರ ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಬೇಕು ಮತ್ತು ಹೆಚ್ಚು ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ಮಾಡಬೇಕೆಂದು ತಿಳಿಸಿದರು. ಎರಡನೇ ಅಲೆ ಆರಂಭವಾಗುವುದಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೆ, ಸೋಂಕನ್ನು ತಡೆಯಲು ಸಾಧ್ಯವಾಗುತ್ತದೆ. ಮೊದಲನೇ ಅಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲೇ ಈ ಸಾಂಕ್ರಾಮಿಕ ರೋಗ ಹೆಚ್ಚು ಕಂಡು ಬಂದಿತ್ತು. ಎರಡನೇ ಅಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ಸೇವಾ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಪ್ರಸ್ತುತ ನಗರ ಪ್ರದೇಶದಲ್ಲಿ ಹೆಚ್ಚು ಕೇಂದ್ರೀಕೃತವಾಗಿದ್ದ ಸೋಂಕು ಇದೀಗ ಗ್ರಾಮೀಣ ಮಟ್ಟಕ್ಕೂ ಮುಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದಲ್ಲದೆ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಿ. ದೂರದೃಷ್ಟಿಯಿಂದ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಅಗತ್ಯ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ತಜ್ಞರ ಸಮಿತಿ ಸಲಹೆ ಮಾಡಿದೆ.

 

Translate »