ಅಂಕ ಗಳಿಸಿದ ಭರದಲ್ಲಿ ಅಹಂಕಾರ ಬೆಳೆಸಿಕೊಳ್ಳಬಾರದು
ಮೈಸೂರು

ಅಂಕ ಗಳಿಸಿದ ಭರದಲ್ಲಿ ಅಹಂಕಾರ ಬೆಳೆಸಿಕೊಳ್ಳಬಾರದು

December 4, 2020

ಮೈಸೂರು, ಡಿ.3(ಪಿಎಂ)-ಅಂಕ ಗಳಿಸಬೇಕು ನಿಜ. ಆದರೆ ಅದೇ ಭರದಲ್ಲಿ ಅಹಂಕಾರ ಬೆಳೆಸಿಕೊಳ್ಳಬಾರದು. ಜೊತೆಗೆ ಅನಾರೋಗ್ಯಕರ ಸ್ಪರ್ಧೆಗೂ ಮುಂದಾಗದೇ ಆಂತರಿಕ ಶ್ರದ್ಧೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ವಿದ್ಯಾಪೀಠದ ಸಭಾಂಗಣದಲ್ಲಿ 2019- 20ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕ ಪಡೆದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಬಿಜಿಎಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿ ಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾ ಟಿಸಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಆಶೀರ್ವಚನ ನೀಡಿದರು.

ಆಯಾಯ ಕಾಲಕ್ಕೆ ಕರ್ತವ್ಯವನ್ನು ಶ್ರದ್ಧೆಯಿಂದ ನಿಭಾಯಿಸಬೇಕು. ಜೊತೆಗೆ ಪ್ರಜ್ಞಾಪೂರಕ ಕರ್ತವ್ಯಕ್ಕೆ ಯಶಸ್ಸು ಒಲಿಯಲಿದೆ. ಎಲ್ಲಾ ಅವಕಾಶಗಳಿದ್ದರೂ ಅಂಕ ಗಳಿಸಲು ಸಾಧ್ಯವಾಗದಿದ್ದರೆ ಪ್ರಯೋಜನವಿಲ್ಲ. `ನಾನು-ನನ್ನದು’ ಎಂಬ ಕನಿಷ್ಠ ಅಹಂ ಬೇಕು. ಆದರೆ ಅದು ಅಹಂಕಾರದ ಮಟ್ಟಕ್ಕೆ ಹೋಗಬಾರದು. ಅಹಂ `ಕಾರ’ ಬಂದರೆ ಬದುಕೆಲ್ಲಾ `ಕಾರ’ವಾಗುತ್ತದೆ. ನಮ್ಮ ಬಾಳಿನ ಶಕ್ತಿಯನ್ನು ಹೂಡಿಕೆ ಮಾಡಿದರೆ ಉತ್ತಮ ಬದುಕೆಂಬ ಗಳಿಕೆ ನಮ್ಮದಾಗುತ್ತದೆ ಎಂದು ತಿಳಿಸಿದರು.

ನಿಮ್ಮ ಬದುಕಿನಲ್ಲಿ ಈಗ ಒಳ್ಳೆಯ ಮಳೆ ಬರುತ್ತಿದೆ. ಈ ಸಂದರ್ಭದಲ್ಲಿ ಉತ್ತು ಬಿತ್ತಿದರೆ ಬದುಕು ಬಂಗಾರ ವಾಗುತ್ತದೆ. ಓದು ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ನಮ್ಮ ಮನೆಗಳಲ್ಲಿ ಬಡತನವಿದೆ. ಇಲ್ಲಿನ ಬಹುತೇಕ ನಮ್ಮ ಮಕ್ಕಳ ಪೋಷಕರಿಗೆ ಸಹಿ ಕೂಡ ಹಾಕಲು ಬರುವುದಿಲ್ಲ. ನಾವೇ ಮೊದಲ ವಿದ್ಯಾವಂತ ಪೀಳಿಗೆ ಎಂಬುದನ್ನು ಮರೆಯಬಾರದು. ತಲತಲಾಂ ತರದಿಂದ ಬಂದಿರುವ ಬಡತನ, ಅನಕ್ಷರತೆ ಹೋಗಲಾಡಿ ಸಲು ಈಗ ನಮಗೆ ಅವಕಾಶ ದೊರೆತಿದೆ. ಈ ಸಂದರ್ಭ ದಲ್ಲಿ ನಿರ್ಲಕ್ಷ್ಯ ಮಾಡಿದರೆ ಮತ್ತೊಂದು ಪೀಳಿಗೆ ಈ ಹಿಂದಿನ ಯಾತನೆ ಅನುಭವಿಸಬೇಕಾಗುತ್ತದೆ. ಕತ್ತಲು, ಅಜ್ಞಾನ ಹಾಗೂ ಬಡತನ ತೊಡೆಯಲು ಸಿಕ್ಕಿರುವ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಗುರುಗಳಾದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಯವರ ತಪಸ್ಸಿನ ಶಕ್ತಿಯಿಂದ ಇಂದು ಆದಿಚುಂಚನ ಗಿರಿ ಮಠ ಬೆಳೆದಿದೆ. ಜೊತೆಗೆ ಮಠ ಬೆಳೆಯಲು ಮುಖ್ಯ ಕಾರಣ ಭಕ್ತರು. ಒಂದು ರೀತಿಯಲ್ಲಿ ಅವರೇ ಮಠದ ತಂದೆ-ತಾಯಿಗಳು. ಈ ಆವರಣ ನನಗೆ ತುಂಬಾ ಪ್ರೀತಿಯ ತಾಣ. ಕಾರಣ ನಾನೂ ಇದೇ ಜಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದು ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ, ಅಂಕಣಕಾರ ಪ್ರೊ.ಎಂ.ಕೃಷ್ಣೇ ಗೌಡ ಮಾತನಾಡಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರ ವಿದ್ಯೆಯ ಪರಿಕಲ್ಪನೆ ವಿಶಾಲವಾದುದು. ಆದರೆ ಇಂದು ವಿದ್ಯೆಯನ್ನು ಬಹಳ ಸೀಮಿತ ಚೌಕಟ್ಟಿನಲ್ಲಿ ನೋಡ ಲಾಗುತ್ತಿದೆ. ಅಂಕದ ಹೊರಗೂ ಜೀವನ ಪಾಠವಿದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಅಂಕ ಗಳಿಸಲು ಆದ್ಯತೆ ನೀಡಬೇಡಿ ಎಂದಲ್ಲ. ಜಿ.ಎಸ್.ಶಿವರುದ್ರಪ್ಪ ಅವರ `ಶ್ರದ್ಧೆ ಮತ್ತು ಸ್ಪರ್ಧೆ’ ಬಹಳ ಉತ್ತಮವಾದ ಲೇಖನ. ಇಲ್ಲಿ ಅವರು ಈ ಎರಡರ ಬಗ್ಗೆ ಅದ್ಭುತವಾಗಿ ವ್ಯಾಖ್ಯಾನ ನೀಡಿದ್ದರೆ, ಹೊರಗಿನವರ ಜೊತೆಗೆ ನಡೆಯುವುದೇ ಸ್ಪರ್ಧೆ. ಆದರೆ ನಿಮ್ಮೊಳಗೆ ನೀವು ಸುಧಾರಣೆಯಾಗುವುದೇ ಶ್ರದ್ಧೆ. ಅಂದರೆ ದಿನದಿಂದ ದಿನಕ್ಕೆ ನಾವು ಉತ್ತಮರಾಗ ಬೇಕು. ಶ್ರದ್ಧೆ ನಿಮ್ಮ ಬದುಕಿಗೆ ದೃಷ್ಟಿಕೋನ, ಸರಿಯಾದ ನಿರ್ದೇಶನ ನೀಡಲಿದೆ. ಹೀಗಾಗಿ ಶ್ರದ್ಧೆ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.

ನಮ್ಮ ಹದಿಹರೆಯದ ಮಕ್ಕಳಿಗೆ ತಾವು ಸೌಂದರ್ಯ ವಾಗಿ ಇದ್ದೇವೆಯೋ ಇಲ್ಲವೋ ಎಂಬುದು ಕಾಡು ವುದು ಸಾಮಾನ್ಯ. ಅದರಲ್ಲೂ ಮೈಬಣ್ಣದ ಚಿಂತೆಯೇ ಹೆಚ್ಚು. ಆದರೆ ಪ್ರಬುದ್ಧ ಸಮಾಜದಲ್ಲಿ ಚರ್ಮದ ಬಣ್ಣಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. `ಚೆನ್ನಾಗಿದ್ದೇನೆ-ಚೆನ್ನಾಗಿಲ್ಲ’ ಎಂಬುದು ಮುಖ್ಯವಲ್ಲ. ಹೆಚ್ಚೆಂದರೆ ಈ ಆಲೋಚನೆ ಮದುವೆಯಾಗುವ ತನಕವಷ್ಟೇ. ಆ ಬಳಿಕ ಈ ಸಮಾಜಕ್ಕೆ ನೀವು ಎಷ್ಟು ಮುಖ್ಯ ಎನ್ನುವುದೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂದರು.

ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದಾಗ, ಕೆಲ ವರು ಪತ್ರಿಕೆಗಳಲ್ಲಿ ಅವರ ವೇಷಭೂಷಣದ ಬಗ್ಗೆ ಟೀಕೆ ಮಾಡಿದ್ದರು. ಅವರು ಅಧಿಕಾರ ಸ್ವೀಕರಿಸಿದ 6 ತಿಂಗಳ ಬಳಿಕ `ದೇಶದ ಅತ್ಯಂತ ಆಕರ್ಷಕ ವ್ಯಕ್ತಿ ಯಾರು’ ಎಂದು ರಾಷ್ಟ್ರಮಟ್ಟದ ಆಂಗ್ಲ ಪತ್ರಿಕೆ ಒಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಶೇ.87ರಷ್ಟು ಜನತೆ ಅಬ್ದುಲ್ ಕಲಾಂ ಅವರ ಹೆಸರು ಉಲ್ಲೇಖಿಸಿದ್ದರು. ಇಲ್ಲಿ ಅವರ ಕೇಶ ವಿನ್ಯಾಸ ಹಾಗೂ ಮೈಬಣ್ಣ ಮುಖ್ಯವಾಗಲಿಲ್ಲ. ಅವರು ಸಮಾಜಕ್ಕೆ ನೀಡುತ್ತಿದ್ದ ಜೀವನ ಸಂದೇಶವೇ ಆಕರ್ಷಣೆಗೆ ಕಾರಣವಾಯಿತು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಠದ ಶಿಕ್ಷಣ ಸಂಸ್ಥೆ ಗಳಲ್ಲಿ ವ್ಯಾಸಂಗ ಮಾಡಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂ ದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿರುವ ಮೈಸೂರಿನ ಕುವೆಂಪುನಗರದ ಬಿಜಿಎಸ್ ಮಹಿಳಾ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜೆ.ಎನ್.ಬೃಂದಾ ಸೇರಿದಂತೆ ಇತರ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪುರಸ್ಕಾರ ಸ್ವೀಕರಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದ ಸ್ವಾಮೀಜಿ, ಶಾಸಕ ಎಲ್. ನಾಗೇಂದ್ರ, ಡಿಸಿಪಿ ಗೀತಾ ಪ್ರಸನ್ನ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಹಿರಿಯ ವಿದ್ವಾಂಸ ಹ.ಕ.ರಾಜೇಗೌಡ ಮತ್ತಿತರರು ಹಾಜರಿದ್ದರು.

Translate »