ನೈರುತ್ಯ ರೈಲ್ವೇ ವಿಭಾಗದಲ್ಲಿ ಶೀಘ್ರ 54 ರೈಲು ಸಂಚಾರ ಆರಂಭ ಸಂಭವ
ಮೈಸೂರು

ನೈರುತ್ಯ ರೈಲ್ವೇ ವಿಭಾಗದಲ್ಲಿ ಶೀಘ್ರ 54 ರೈಲು ಸಂಚಾರ ಆರಂಭ ಸಂಭವ

December 4, 2020

ಇಂದು ನಡೆಯಲಿರುವ ರೈಲ್ವೆ ಮಂಡಳಿ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಮೈಸೂರು, ಡಿ.3(ಆರ್‍ಕೆ)-ಕೋವಿಡ್-19 ನಿರ್ಬಂಧದಿಂದಾಗಿ ಸ್ಥಗಿತಗೊಂಡಿರುವ ರೈಲು ಸಂಚಾರ ಪುನರಾರಂಭಿಸಲು ಭಾರ ತೀಯ ರೈಲ್ವೆ ಮಂಡಳಿ ತಯಾರಿ ನಡೆಸುತ್ತಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ತೀವ್ರತೆ ದಿನೇ ದಿನೆ ಕಡಿಮೆಯಾಗುತ್ತಿರುವುದರಿಂದ ಸಾವಿನ ಪ್ರಮಾಣವೂ ತಗ್ಗಿದ್ದು, ಕಳೆದ ಮಾರ್ಚ್ ಮಾಹೆಯಿಂದ ಸ್ಥಗಿತಗೊಂಡಿರುವ ಪ್ರಯಾಣಿಕರ ರೈಲು ಸಂಚಾರ ಪುನರಾರಂಭಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಭಾರತೀಯ ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್‍ಕುಮಾರ್ ನೇತೃತ್ವದಲ್ಲಿ ನಾಳೆ (ಡಿ.4) ದೆಹಲಿಯಲ್ಲಿ ಮಹತ್ವದ ಸಭೆ ನಿಗದಿಯಾಗಿದ್ದು, ದೇಶಾದ್ಯಂತ ಭಾಗಶಃ ಅಥವಾ ಪೂರ್ಣ ಪ್ರಮಾಣದ ರೈಲು ಸಂಚಾರ ಪುನರಾರಂಭಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಎಲ್ಲಾ ಚಟುವಟಿಕೆಗಳೂ ಬಹುತೇಕ ಪುನರಾರಂಭಗೊಂಡಿರುವ ಕಾರಣ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲುಗಾಡಿಗಳನ್ನು ಓಡಿಸುವ ಸಂಬಂಧದ ಪ್ರಸ್ತಾಪವನ್ನು ನಾಳಿನ (ಶುಕ್ರವಾರ) ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ. ವಿಶೇಷ ರೈಲುಗಳ ಮೂಲಕ ಮೈಸೂರಿನಿಂದ ಕೋವಿಡ್-19 ನಿರ್ಬಂಧದ ವೇಳೆ ವಲಸೆ ಕಾರ್ಮಿಕರನ್ನು ಉತ್ತರ ಭಾರತದ ರಾಜ್ಯಗಳ ಅವರ ಸ್ಥಳಗಳಿಗೆ ಕರೆದೊಯ್ಯುವಲ್ಲಿ ಶ್ರಮಿಕ್ ರೈಲು ಸೇವೆ ಮಹತ್ವದ ಪಾತ್ರ ವಹಿಸಿದ್ದವು. ತದನಂತರ ಹಂತ ಹಂತವಾಗಿ ಸರಕು ಸಾಗಣೆ ರೈಲು ಸಂಚಾರ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ನೈರುತ್ಯ ರೈಲ್ವೆ ವಿಭಾಗವು 54 ಪ್ರಯಾಣಿಕರ ರೈಲುಗಳ ಸಂಚಾರ ಆರಂಭಿಸಲು ಮುಂದಾಗಿದ್ದು, ದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಪೂರಕ ನಿರ್ಣಯವಾದಲ್ಲಿ ಡಿಸೆಂಬರ್ ಕಡೇ ವಾರ ಅಥವಾ 2021ರ ಜನವರಿ ಮೊದಲ ವಾರ ದೇಶದಾದ್ಯಂತ ರೈಲುಗಳ ಸೇವೆ ಪುನರಾರಂಭಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.

Translate »