ಹಳಿ ತಪ್ಪಿದ ಗೂಡ್ಸ್ ರೈಲು: ಮೈಸೂರಿಗೆ ಬರುವ, ಹೋಗುವ ಹಲವು ರೈಲುಗಳ ಸಂಚಾರದಲ್ಲಿ  ಕೆಲ ಕಾಲ ವ್ಯತ್ಯಯ
ಮೈಸೂರು

ಹಳಿ ತಪ್ಪಿದ ಗೂಡ್ಸ್ ರೈಲು: ಮೈಸೂರಿಗೆ ಬರುವ, ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ

October 27, 2018

ಮೈಸೂರು:  ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಮೈಸೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ರೈಲುಗಳ ಸಂಚಾರ ವ್ಯತ್ಯಯವಾಗಿ, ಸಹಸ್ರಾರು ಪ್ರಯಾಣಿಕರಿಗೆ ತೊಂದರೆಯಾಯಿತು.

ಮೈಸೂರು ರೈಲ್ವೆ ಗೂಡ್ಸ್ ಶೆಡ್ ಸಮೀಪ ಬಿ.ಎಂ.ಶ್ರೀ ನಗರ ಸೇತುವೆ ಬಳಿ, ಪೆಟ್ರೋಲಿಯಂ ಟ್ಯಾಂಕರ್ ಗೂಡ್ಸ್ ಶುಕ್ರವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಹಳಿ ಬದಲಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಗೂಡ್ಸ್ ಶೆಡ್‍ನ ಐಓಸಿ ಘಟಕದಲ್ಲಿ ಪೆಟ್ರೋಲ್ ಅನ್ ಲೋಡ್ ಮಾಡಿ, ಖಾಲಿ ಟ್ಯಾಂಕರ್‍ಗಳನ್ನು ಯಾರ್ಡ್‍ಗೆ ತಳ್ಳುವಾಗ ಹಳಿ ಬದಲಿಸುವ ಸ್ಥಳದಲ್ಲಿ ಒಂದು ಟ್ಯಾಂಕರ್ ಹಳಿಯಿಂದ ಕೆಳಗಿಳಿದು, ವಿದ್ಯುತ್ ಕಂಬ ಹಾಗೂ ಸಿಗ್ನಲ್ ಕಂಟ್ರೋಲ್ ಬಾಕ್ಸ್‍ಗೆ ಡಿಕ್ಕಿ ಹೊಡೆದಿದೆ. ಖಾಲಿ ಟ್ಯಾಂಕರ್ ಆಗಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ವ್ಯಾಗನ್‍ಗಳ ಡಿಕ್ಕಿ: ಪೆಟ್ರೋಲ್ ಅನ್‍ಲೋಡ್ ಆದ ಬಳಿಕ ಹಳಿ ಬದಲಿಸುವ ಸ್ಥಳ(ಚೇಂಜಿಂಗ್ ಪಾಯಿಂಟ್)ದವರೆಗೆ ವಾಪಸ್ಸು ಬಂದು, ಬಳಿಕ ಯಾರ್ಡ್‍ಗೆ ಸಂಪರ್ಕಿಸುವ ಹಳಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಮತ್ತೊಂದು ವ್ಯಾಗನ್ ನಡುವೆ ಡಿಕ್ಕಿ ಸಂಭವಿಸಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗೂಡ್ಸ್ ರೈಲು ಬೋಗಿಗೆ ವ್ಯಾಗನ್ ಜೋಡಿಸುವ ಸಮಯದಲ್ಲಿ ಸಿಗ್ನಲ್ ವ್ಯತ್ಯಯವಾಗಿದ್ದು ಈ ಅವಘಡಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ರೈಲ್ವೇ ಅಧಿಕಾರಿಗಳು, ಪೊಲೀಸರು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಹಳಿ ತಪ್ಪಿದ್ದ ಟ್ಯಾಂಕರ್ ತೆರವಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಯಾಣಿಕರ ಪರದಾಟ: ಅವಘಡ ಸಂಭವಿಸಿದ ರೈಲ್ವೇ ಹಳಿ ಹಾಗೂ ಮೈಸೂರು-ಬೆಂಗಳೂರು ಮಾರ್ಗದ ಹಳಿಯ ನಡುವೆ ಇಂಟರ್ ಲಾಕಿಂಗ್ ವ್ಯವಸ್ಥೆ ಇರುವುದರಿಂದ ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಗ್ನಲ್ ವ್ಯವಸ್ಥೆ ಸ್ವಯಂ ಚಾಲಿತವಾಗಿ ಬಂದ್ ಆಗಿತ್ತು. ಪರಿಣಾಮ ಮೈಸೂರು ರೈಲ್ವೇ ನಿಲ್ದಾಣದಿಂದ ಹೋಗುವ ಹಾಗೂ ಬರುವ ರೈಲುಗಳ ಸಮಯದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ವ್ಯತ್ಯಯವಾಗಿ, ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಸಂಬಂಧಿತ ಪಾಯಿಂಟ್ ನಲ್ಲಿ ಎಲೆಕ್ಟ್ರಾನಿಕ್ ವ್ಯವಸ್ಥೆ ಬದಲಾಗಿ ಮ್ಯಾನುವಲ್ ಸಿಗ್ನಲ್‍ನೊಂದಿಗೆ ರೈಲು ಸಂಚಾರ ಆರಂಭಿಸಲಾಯಿತು.

ಮೈಸೂರು ರೈಲ್ವೇ ನಿಲ್ದಾಣಕ್ಕೆ 4.30ಕ್ಕೆ ಆಗಮಿಸಬೇಕಿದ್ದ ಮಾಲ್ಗುಡಿ ಎಕ್ಸ್‍ಪ್ರೆಸ್ ಸುಮಾರು 6.30ಕ್ಕೆ, ಟಿಪ್ಪು ಎಕ್ಸ್‍ಪ್ರೆಸ್ 5.30ರ ಬದಲಾಗಿ 6.45ಕ್ಕೆ ಹಾಗೂ ಜೈಪುರ ಎಕ್ಸ್‍ಪ್ರೆಸ್ ಒಂದೂವರೆ ಗಂಟೆ ತಡವಾಗಿ ಆಗಮಿಸಿದವು. ಹಾಗೆಯೇ ಮೈಸೂರಿನಿಂದ 5 ಗಂಟೆಗೆ ಹೊರಡಬೇಕಿದ್ದ ತಿರುಪತಿ ಎಕ್ಸ್‍ಪ್ರೆಸ್ 6.55ಕ್ಕೆ, ಟ್ಯುಟಿಕೋರನ್ ಎಕ್ಸ್‍ಪ್ರೆಸ್ 06.05ರ ಬದಲಾಗಿ 7.20ಕ್ಕೆ, ಹಂಪಿ ಎಕ್ಸ್‍ಪ್ರೆಸ್ 7 ಗಂಟೆ ಬದಲಾಗಿ 8ಕ್ಕೆ ಹಾಗೂ ಶಿವಮೊಗ್ಗ ರೈಲು 7.45ರ ಬದಲಾಗಿ ಸುಮಾರು 8.15ಕ್ಕೆ ಸಂಚಾರ ಆರಂಭಿಸಿದವು. ಸುಮಾರು 6.40ಕ್ಕೆ ನಿಲ್ದಾಣ ತಲುಪಬೇಕಿದ್ದ ಚಾಮರಾಜನಗರ ರೈಲನ್ನು ಗಂಟೆಗೂ ಹೆಚ್ಚು ಕಾಲ ಅಶೋಕಪುರಂ ಸ್ಟೇಷನ್‍ನಲ್ಲಿ ನಿಲುಗಡೆ ಮಾಡಲಾಗಿತ್ತು. ರೈಲು ಸಂಚಾರ ಸಮಯದಲ್ಲಿ ವ್ಯತ್ಯವಾಗಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಘಟನೆಗೆ ಖಚಿತ ಕಾರಣವೇನೆಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Translate »