ಮಂಡ್ಯ: ನಾನು ಈಗಾಗಲೇ ಸಾಯ ಬೇಕಾಗಿತ್ತು… ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ… ಬದುಕಿರುವವರೆಗೂ ಬಡವರನ್ನು ಬದುಕಿಸುವ ಕೆಲಸ ಮಾಡುತ್ತೇನೆ… ಇದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆಡಿದ ಭಾವುಕ ನುಡಿಗಳು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಎಲ್.ಆರ್.ಶಿವ ರಾಮೇಗೌಡ ಪರವಾಗಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಮಳವಳ್ಳಿ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರಚಾರ ನಡೆಸಿದರು. ಅವರು ಪ್ರಚಾರ ನಡೆಸಿದ ಎಲ್ಲಾ ಕಡೆಯೂ ತಮ್ಮ ಸಾವಿನ ಬಗ್ಗೆ ಭಾವುಕ ನುಡಿಗಳನ್ನಾಡಿದರು.
ನಾನು ಇನ್ನೂ ಬದುಕಿರುವುದೇ ಹೆಚ್ಚು. ಇನ್ನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ. ಇಸ್ರೇಲ್‍ಗೆ ಹೋಗಿದ್ದಾಗಲೇ ಸಾಯಬೇಕಾಗಿತ್ತು. ಆದರೆ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕುತ್ತೇನೆ ಎಂಬುದು ಮುಖ್ಯವಲ್ಲ. ಎಷ್ಟು ಕುಟುಂಬಗಳನ್ನು ಬದುಕಿಸುತ್ತೇನೆ ಎಂಬುದಷ್ಟೇ ಮುಖ್ಯ ಎಂದು ಹೇಳಿದರು. ನಾನು ಮೂಲತಃ ರಾಜಕಾರಣಿಯಲ್ಲ. ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡಿ ಕೊಂಡೇ ಬಂದಿದ್ದೇನೆ. ದೇಶ ಕವಲು ದಾರಿಯಲ್ಲಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಇದು ದೇವರು ನನಗೆ ಕೊಟ್ಟ ಅವಕಾಶ. ಆ ದೇವರು ಕೊಟ್ಟ ಅಧಿಕಾರವನ್ನು ಬಳಸಿ ಬಡವರ ಕೆಲಸ ಮಾಡುತ್ತೇನೆ.
ನನ್ನ ಆಸ್ತಿಯೇ ನೀವು. ಕಷ್ಟದಲ್ಲಿರುವ ಜನರನ್ನು ಬದುಕಿಸುವುದೇ ನನ್ನ ಸವಾಲು. ನನಗೆ ದುಡ್ಡು ಮಾಡಿ ಆಸ್ತಿ ಸಂಪಾದಿಸುವ ಆಸೆ ಇಲ್ಲ. ಅಧಿಕಾರದ ಆಸೆಯೂ ಇಲ್ಲ. ನನಗೆ ಬೇಕಾಗಿರುವುದು ಜನರ ಪ್ರೀತಿಯಷ್ಟೇ. ನಾನು ಮಣ್ಣಿಗೆ ಹೋದಾಗ ಇಂತಹ ಒಬ್ಬ ವ್ಯಕ್ತಿ ಇದ್ದ ಎಂದು ಜನ ನೆನೆಸಿಕೊಂಡರೆ ಸಾಕು ಎಂದು ಮುಖ್ಯ ಮಂತ್ರಿಗಳು ಭಾವುಕರಾಗಿ ನುಡಿದರು. ನಾನು ರಾಜಕಾರಣಕ್ಕೆ ಬರುವ ಮುಂಚೆಯೇ ಭಾವುಕ ಜೀವಿ. ಮಾನವೀಯತೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಯಾರಾದರೂ ತನ್ನ ವಿರುದ್ಧ ವೈಯಕ್ತಿಕವಾಗಿ ದಾಳಿ ನಡೆಸಿದರೂ ಅವರ ಮೇಲೆ ದ್ವೇಷ ಸಾಧಿಸುವುದಿಲ್ಲ. ನನ್ನ ಗಮನವೆಲ್ಲಾ ಬಡವರು ಹಾಗೂ ರೈತರ ಮೇಲೆಯೇ ಇರುತ್ತದೆ. ರೈತರ ಸರಣಿ ಆತ್ಮಹತ್ಯೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಅದು ನನ್ನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಕೆಲವರು ನನ್ನ ಆರೋಗ್ಯದ ಬಗ್ಗೆಯೂ ವ್ಯಂಗ್ಯವಾಡುತ್ತಿದ್ದಾರೆ ಎಂದು ವಿಷಾದದ ನುಡಿಯಾಡಿದರು.
12 ವರ್ಷಗಳ ಹಿಂದೆ ಬಿಜೆಪಿ ಜೊತೆ ಸೇರಿ ನಾನು ಸರ್ಕಾರ ರಚಿಸಿದಾಗ ಈ ಪ್ರಮಾಣದಲ್ಲಿ ಅಪಪ್ರಚಾರವಿರಲಿಲ್ಲ. ಆದರೆ ಈಗ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ. ಆ ಪಕ್ಷದ ಮುಖಂಡರು ನನ್ನ ಆರೋಗ್ಯ ಸಮಸ್ಯೆಯನ್ನು ಗೇಲಿ ಮಾಡುತ್ತಿದ್ದಾರೆ. ಸರ್ಕಾರ ಬೀಳುತ್ತದೆ ಎಂದು ಪದೇ ಪದೆ ಹೇಳುತ್ತಿದ್ದಾರೆ. ಅವರ ಅಪಪ್ರಚಾರದಿಂದಾ ಗಿಯೇ ಸರ್ಕಾರ ಬೀಳಬಹುದೆಂಬ ಅನುಮಾನದಿಂದ ಅಧಿಕಾರಿಗಳೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ ಈ ಸರ್ಕಾರ ಬೀಳುವುದಿಲ್ಲ. ಸರ್ಕಾರ ಬೀಳಬೇಕಾದರೆ ನನಗೆ ಬೆಂಬಲ ಕೊಟ್ಟಿರುವ ಕಾಂಗ್ರೆಸ್ ಮುಖಂಡರು ಅಥವಾ ದೇವರು ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದು ಹೇಳಿದ ಅವರು, ನಾನು ಜೀವವಿರುವವರೆಗೂ ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ಜನರ ದುಡ್ಡು ಹೊಡೆದು ಸರ್ಕಾರ ನಡೆಸುವಂತಹ ದರಿದ್ರ ಪರಿಸ್ಥಿತಿ ಇಲ್ಲ ಎಂದರು.
ನಾನು ಕೊಟ್ಟ ಮಾತಿನಂತೆ ಈಗಾಗಲೇ ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 10,300 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಅದರಲ್ಲಿ ಇನ್ನೂ 600 ಕೋಟಿ ರೂ.ಗಳನ್ನು ಸಹಕಾರ ಸಂಘಗಳಿಗೆ ಪಾವತಿಸಿಬಿಟ್ಟರೆ ಅಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಆಗುತ್ತದೆ. ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲವೂ ಮನ್ನಾ ಆಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಅಷ್ಟೇ ಎಂದ ಮುಖ್ಯಮಂತ್ರಿಗಳು, ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲದ ಋಣಮುಕ್ತ ಯೋಜನೆಯು ಶೀಘ್ರದಲ್ಲೇ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ದಯವಿಟ್ಟು ರೈತರು ಆತ್ಮಹತ್ಯೆ ಮಾಡಿಕೊಂಡು ನನ್ನ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದರು. ಬಜೆಟ್‍ನಲ್ಲಿ ಘೋಷಿಸಿದಂತೆ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ ಇದೇ ನ.1ರಿಂದ ಜಾರಿಯಾಗಲಿದೆ. ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗಳ ಮೇಲೆ ಸಿಎಂ ಗರಂ
ಮಂಡ್ಯ ಲೋಕಸಭೆ ಉಪ ಚುನಾವಣೆ ಪ್ರಚಾರ ಭಾಷಣದಲ್ಲಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಮಾಧ್ಯಮದವರೇ ನನ್ನ ಜೀವದ ಜೊತೆ ಚೆಲ್ಲಾಟವಾಡಬೇಡಿ. ಮಾಧ್ಯಮಗಳು ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನನ್ನ ಹೇಳಿಕೆಗಳನ್ನು ಮಾಧ್ಯಮಗಳು ತಿರುಚುತ್ತಿವೆ. ಅದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಮೊನ್ನೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ವೈದ್ಯರೂ ಕೂಡ ನಿಮ್ಮ ಮನೆಯ ಟಿ.ವಿ. ಕನೆಕ್ಷನ್ ಕಿತ್ತಾಕಿ ಎಂದು ಸಲಹೆ ನೀಡಿದ್ದಾರೆ ಎಂದು ಅವರು ಕಿಡಿಕಾರಿದರು. ನಿನ್ನೆ ಕೆಲವು ಮಾಧ್ಯಮಗಳಲ್ಲಿ `ಕತ್ತಲು ನೀಡಿದ ಕುಮಾರ’ ಎಂದು ಬೊಬ್ಬೆ ಹೊಡೆದಿದ್ದಾರೆ.
ಇದನ್ನು ನೋಡಿ ನನಗೆ ಬೇಸರವಾಯಿತು. ಅದು ನನ್ನ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಿತ್ತು ಎಂಬುದನ್ನು ವಿವರಿಸಲು ಅಸಾಧ್ಯ. ಇಂತಹ ಸುಳ್ಳು ಸುದ್ದಿ ಮಾಡುವುದರಿಂದ ನಿಮಗಾಗುವ ಪ್ರಯೋಜನವಾ ದರೂ ಏನು? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಒಂದು ವರ್ಗದ ಜನರ ಹಾಗೂ ಒಂದು ವರ್ಗದ ಮಾಧ್ಯಮದವರ ಕೈವಾಡವಾಗಿದೆ. ನಿಮಗೆ ನನ್ನನ್ನು ತುಳಿಯುವುದರಿಂದ ಆಗುವ ಪ್ರಯೋಜನವಾದರೂ ಏನು? ಒಂದು ವೇಳೆ ನನ್ನನ್ನು ತುಳಿಯುವುದರಿಂದ ನಿಮಗೆ ಪ್ರಯೋಜನವಿದ್ದರೆ ಅದನ್ನು ಮಾಡಿ. ಪ್ರಯೋಜನವೇ ಇಲ್ಲದಿದ್ದರೂ ಯಾಕೆ ಈ ರೀತಿ ಮಾಡುತ್ತಿದ್ದೀರಾ? ಎಂದು ಮಾಧ್ಯಮದವರ ವಿರುದ್ಧ ಮುಖ್ಯಮಂತ್ರಿಗಳು ಹರಿಹಾಯ್ದರು.