ಮೈಸೂರು, ಡಿ.1(ಪಿಎಂ)- ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯ ದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರೈತರ `ದಿಲ್ಲಿ ಚಲೋ’ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾ ಗಿದೆ. ರೈತ ವಿರೋಧಿ ನೀತಿ ವಿರೋಧಿಸಿ ನಡೆಸುತ್ತಿ ರುವ ಹೋರಾಟವನ್ನು ಹತ್ತಿಕ್ಕಲು ರೈತರ ಮೇಲೆ ಲಾಠಿ ಪ್ರಹಾರ, ಜಲ ಪಿರಂಗಿಗಳ ಮೂಲಕ ದಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಒಳಗೆ ಮಾತ್ರವಲ್ಲದೆ, ದೆಹಲಿ ತಲುಪುವ ರಾಷ್ಟ್ರೀಯ ಹೆದ್ದಾರಿಗಳ ಗಡಿಗಳಲ್ಲಿ ಲಕ್ಷಾಂತರ ರೈತರು, ಕೃಷಿ ಕೂಲಿಕಾರರು ರಾತ್ರಿ-ಹಗಲು ಎನ್ನದೇ ಪ್ರತಿ ಭಟನೆ ನಡೆಸುತ್ತಿದ್ದಾರೆ. ಹೋರಾಟನಿರತ ರೈತರ ಮೇಲೆ ದೌರ್ಜನ್ಯ ನಡೆಸುವ ಮೂಲಕ ಕೇಂದ್ರ ಸರ್ಕಾರ ಕೇವಲ ರೈತ ವಿರೋಧಿ ಮಾತ್ರವಲ್ಲ, ಇದು ಪ್ರಜಾ ಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬು ದನ್ನು ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು.
ಹೋರಾಟನಿರತ ರೈತರು, ರೈತ ಸಂಘಟನೆಗಳ ಬಗ್ಗೆ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ ಕೇಂದ್ರ ಸರ್ಕಾರ, ಪೊಲೀಸ್, ಗಡಿ ಭದ್ರತಾ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳಗಳಿಗೆ ನಿಯೋಜಿಸಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ದೇಶದ ರೈತರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಧ್ಯಮ ದವರೊಂದಿಗೆ ಮಾತನಾಡಿ, ಪೊಲೀಸ್ ಬಲ ಬಳಸಿ ಕೊಂಡು ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ. ಚಳವಳಿ ದಮನಕಾರಿ ನೀತಿ ಅನು ಸರಿಸುತ್ತಿದೆ. ಐದಾರು ದಿನಗಳಿಂದ ದೆಹಲಿಯ ಸುತ್ತ ಮುತ್ತ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಫಲವಾಗಿ ಇಡೀ ದೇಶದಲ್ಲಿ ಬೃಹತ್ ಚಳು ವಳಿ ರೂಪುಗೊಳ್ಳುತ್ತಿದೆ. ರೈತ ವಿರೋಧಿ ಕಾಯ್ದೆ ಗಳನ್ನು ಹಿಂಪಡೆಯುವವರೆಗೂ ನಿರಂತರ ಪ್ರತಿ ಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರವೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಪ್ರಯತ್ನ ಮಾಡುತ್ತಿದೆ. ಇದನ್ನೂ ವಿರೋ ಧಿಸಿ ವಿಧಾನಸಭಾ ಅಧಿವೇಶನದ ವೇಳೆ ಡಿಸೆಂಬರ್ 7ರಿಂದ 15ರವರೆಗೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಕೇಂದ್ರ ಸರ್ಕಾರಕ್ಕೆ ಕೇಡು ಗಾಲ ಬಂದಿದೆ. ಈ ಸರ್ಕಾರಕ್ಕೆ ರೈತ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು. ರೈತ ಸಂಘದ ಮುಖಂಡರಾದ ಹೊಸ ಕೋಟೆ ಬಸವರಾಜು, ಮರಂಕಯ್ಯ, ಹೊಸೂರ್ ಕುಮಾರ್, ಉಗ್ರನರಸಿಂಹೇಗೌಡ, ಸಿಪಿಐಎಂ ಕಾರ್ಯ ದರ್ಶಿ ಕೆ.ಬಸವರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಮುಖಂಡರಾದ ಜಗದೀಶ್ ಸೂರ್ಯ, ಜಿ.ಜಯರಾಮ್, ಲ.ಜನ್ನಾಗಥ್, ಡಾ.ಲಕ್ಷ್ಮೀನಾರಾಯಣ, ರತಿರಾವ್, ಮಾಜಿ ಮೇಯರ್ ಪುರುಷೋತ್ತಮ್, ಪ.ಮಲ್ಲೇಶ್, ಆಲ ಗೂಡು ಶಿವಕುಮಾರ್, ಉಮಾದೇವಿ, ಶಶಿಧರ್, ಶಬ್ಬಿರ್ ಮುಸ್ತಫಾ, ಬೆಟ್ಟಯ್ಯ ಕೋಟೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.