ಮೈಸೂರು,ಡಿ.1(ಪಿಎಂ)-ಎನ್‍ಆರ್ ಮೊಹಲ್ಲಾದ ಹಿಂದು ರುದ್ರಭೂಮಿಯ ಪಕ್ಕದ ಖಾಲಿ ಜಾಗವನ್ನು ರುದ್ರಭೂಮಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸದರಿ ರುದ್ರಭೂಮಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರುದ್ರಭೂಮಿ ಪಕ್ಕದ ಖಾಲಿ ಜಾಗದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದೆ. ಕೂಡಲೇ ಈ ಯೋಜನೆ ಕೈಬಿಟ್ಟು ರುದ್ರಭೂಮಿಗೆ ಸದರಿ ಜಾಗವನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪಾಲಿಕೆ ವಾರ್ಡ್ ನಂ.15ರ ಎನ್‍ಆರ್ ಮೊಹಲ್ಲಾದ ಸದರಿ ಹಿಂದು ರುದ್ರಭೂಮಿಯ ಪಕ್ಕದ ಜಾಗವನ್ನು ರುದ್ರಭೂಮಿಗೆ ಸೇರ್ಪಡೆ ಮಾಡಬೇಕೆಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಂತದಲ್ಲಿ ಈ ಹಿಂದೆಯೇ ತೀರ್ಮಾನವಾಗಿದೆ. ಅಲ್ಲದೆ, ಸ್ಮಶಾನಕ್ಕೆ ಹೊಂದುಕೊಂಡ ನಾರ್ಥ್-ಈಸ್ಟ್ ಆಫ್ ಎನ್‍ಆರ್ ಮೊಹಲ್ಲಾದ ರಸ್ತೆ ಬದಿಯ ಸದರಿ ಜಾಗವನ್ನು ಸ್ಮಶಾನಕ್ಕೆ ಸೇರ್ಪಡೆಯಾಗುವ ಜಾಗವೆಂದು ಅಧಿಕಾರಿ ಗಳೇ ತಂತಿ ಬೇಲಿ ಅಳವಡಿಸಿದ್ದರು. ಆದರೆ ಇದೀಗ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸದರಿ ಜಾಗವನ್ನು ಮುಡಾ ಅಧಿಕಾರಿಗಳು ಅಳತೆ ಕಾರ್ಯ ನಡೆಸಿದ್ದು, ಈ ಸಂಬಂಧ ಅವರನ್ನು ಪ್ರಶ್ನಿಸಲಾಗಿ ಮುಡಾ ಅಧ್ಯಕ್ಷರ ಸೂಚನೆಯಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಳತೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಶಾನಕ್ಕೆ ಸದರಿ ಜಾಗ ಸೇರ್ಪಡೆ ಸಂಬಂಧ ಜನಪ್ರತಿನಿಧಿಗಳು ನಡೆಸಿರುವ ಪತ್ರ ವ್ಯವಹಾರ ಮಾಹಿತಿಯನ್ನು ಅಧಿಕಾರಿಗಳು ಮುಚ್ಚಿಟ್ಟು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಎನ್‍ಆರ್ ಮೊಹಲ್ಲಾದ ವಿವಿಧ ಸಮುದಾಯದ ಮುಖಂಡರಾದ ಎಂ.ಎನ್.ಮಹಾ ದೇವ್, ಜಗದೀಶ್, ನಂಜುಂಡಸ್ವಾಮಿ, ಕುಬೇರ್ ಸಿಂಗ್, ಚಂದ್ರುಗೌಡ, ಸುರೇಂದ್ರ, ಆರ್.ನಾಗರಾಜ್, ಶಂಕರ್, ಲೊಕೇಶ್, ಅಣ್ಣಯ್ಯಸ್ವಾಮಿ, ಕಾಂಗ್ರೆಸ್ ನಗರ ಕಾರ್ಯ ದರ್ಶಿ ಲೋಕೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.