ಮೈಸೂರಲ್ಲಿ ಸಂವಿಧಾನ ರಕ್ಷಣಾ ಸಮಿತಿಯಿಂದ ಭಾರೀ ಆಕ್ರೋಶ
ಮೈಸೂರು

ಮೈಸೂರಲ್ಲಿ ಸಂವಿಧಾನ ರಕ್ಷಣಾ ಸಮಿತಿಯಿಂದ ಭಾರೀ ಆಕ್ರೋಶ

February 8, 2022

ಮೈಸೂರು, ಫೆ.7(ಎಂಟಿವೈ)- ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿ, ಅವರಿಗೆ ಅಗೌರವ ತೋರಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂವಿಧಾನ ರಕ್ಷಣಾ ಸಮಿತಿ ಕರೆ ನೀಡಿದ್ದ ಮೈಸೂರು ಬಂದ್ ಭಾಗಶಃ ಯಶಸ್ವಿಯಾಗಿದೆ.

ಮೈಸೂರು ನಗರದ ಹೃದಯ ಭಾಗದಲ್ಲಿ ಅಂಗಡಿ-ಮುಂಗಟ್ಟು ಗಳು ಮುಚ್ಚಿದ್ದು, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಗ್ರಾಮಾಂ ತರ ಮತ್ತು ನಗರ ಬಸ್ ನಿಲ್ದಾಣಗಳ ಮುಂದೆ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಸಂಜೆವರೆಗೂ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾ ಯಿತು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಎರಡು ನಗರ ಸಾರಿಗೆ ಬಸ್‍ಗಳ ಗಾಜುಗಳು ಪುಡಿಪುಡಿಯಾದವು. ನಾಲ್ಕು ಹೋಟೆಲ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಸಣ್ಣ ಪ್ರಮಾಣದ ಹಾನಿಯಾಗಿದೆ. ಶಾಲಾ-ಕಾಲೇಜುಗಳಿಗೂ ಪ್ರತಿಭಟನಾ ಕಾರರು ಲಗ್ಗೆಯಿಟ್ಟ ಪರಿಣಾಮ ಅರ್ಧದಲ್ಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು.

ತರಗತಿಗಳು ಆರಂಭವಾಗಿ ಸುಮಾರು ಒಂದು ಗಂಟೆ ಅವಧಿ ಯಲ್ಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಗ್ರಾಮಾಂ ತರ ಪ್ರದೇಶದಿಂದ ಬಂದಿದ್ದ ವಿದ್ಯಾರ್ಥಿಗಳು ಸಂಜೆ 4 ಗಂಟೆವರೆಗೆ ಬಸ್ ಸಂಚಾರವೂ ಇಲ್ಲದಿದ್ದರಿಂದ ಪರದಾಡಬೇಕಾಯಿತು. ಪ್ರಾಥ ಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲು ಶಿಕ್ಷಕರು ಹೆಣಗಾಡಬೇಕಾಯಿತು. ಪೋಷಕರ ಮೊಬೈಲ್‍ಗಳಿಗೆ ಕರೆ ಮಾಡಿದ ಶಿಕ್ಷಕರು, ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿ ಪೋಷಕರು ಬರುವವರೆಗೂ ಕಾಯುತ್ತಿದ್ದರು.

ಇಂದು ಬೆಳಗ್ಗೆಯಿಂದಲೇ ವಿವಿಧೆಡೆಯಿಂದ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ಮೂಲಕ ಪುರಭವನಕ್ಕೆ ಆಗಮಿಸಿದ ಪ್ರತಿಭಟನಾಕಾರರು ನೀಲಿ ಧ್ವಜ ಹಿಡಿದು ರಾಯಚೂರಿನ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಿದರು. ಏಕ ಕಾಲಕ್ಕೆ ವಿವಿಧೆಡೆಯಿಂದ ಮೈಸೂರಿನ ಹೃದಯ ಭಾಗಕ್ಕೆ ಪ್ರತಿಭಟನಾಕಾರರು ಆಗಮಿಸಿದ್ದನ್ನು ಕಂಡು ವಾಣಿಜ್ಯೋದ್ಯಮಿ ಗಳು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು.

ವಾಣಿಜ್ಯ ಪ್ರದೇಶಗಳಾದ ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ಬಿ.ಎನ್.ರಸ್ತೆ, ಕೆ.ಟಿ.ಸ್ಟ್ರೀಟ್, ನಾರಾಯಣ ಶಾಸ್ತ್ರಿ ರಸ್ತೆ, ವಿನೋಬಾ ರಸ್ತೆ, ಶಿವರಾಂ ಪೇಟೆ, ಅಗ್ರಹಾರ ಮುಂತಾದೆಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದರೆ, ಉಳಿದೆಡೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.
ಗ್ರಾಮಾಂತರ ನಗರ ಸಾರಿಗೆ ಬಸ್‍ಗಳು ಎಂದಿನಂತೆ ಸಂಚಾರ ಆರಂಭಿಸಿದ್ದು, ಬೆಳಗ್ಗೆ 8.30ರ ಸುಮಾರಿನಲ್ಲಿ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ ನೇತೃತ್ವದ ನೂರಾರು ಪ್ರತಿಭಟನಾಕಾರರು ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಆರಂಭಿಸಿದ್ದರಿಂದ ಬಸ್‍ಗಳು ನಿಲ್ದಾಣದ ಹೊರಗೆ ಹಾಗೂ ಒಳಗೆ ತೆರಳಲು ಸಾಧ್ಯವಾಗಲಿಲ್ಲ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಪೊಲೀಸರು ಹೊರ ಊರುಗಳಿಂದ ಬಂದ ಬಸ್‍ಗಳನ್ನು ಹಾರ್ಡಿಂಗ್ ವೃತ್ತ ಹಾಗೂ ಸರ್ಕಾರಿ ಅತಿಥಿಗೃಹ ಸೇರಿದಂತೆ ವಿವಿಧೆಡೆಗೆ ತೆರಳುವಂತೆ ಸೂಚಿಸಿ ಅಲ್ಲಿ ಪ್ರಯಾಣಿಕರಿಗೆ ಇಳಿಸುವಂತೆ ಚಾಲಕ, ನಿರ್ವಾಹಕರಿಗೆ ನಿರ್ದೇಶನ ನೀಡಿದರು. ಸದರಿ ಸ್ಥಳಗಳಲ್ಲಿ ಪೊಲೀಸ್ ಮತ್ತು ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಪುರಭವನದತ್ತ ತೆರಳಿದ ನಂತರ ಗ್ರಾಮಾಂತರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಪುನರಾರಂಭವಾಯಿತು.

ಅಶೋಕಪುರಂ ಸೇರಿದಂತೆ ವಿವಿಧೆಡೆಯಿಂದ ಮೆರವಣಿಗೆ ಮೂಲಕ ಪುರಭವನದತ್ತ ತೆರಳುತ್ತಿದ್ದ ಪ್ರತಿಭಟನಾಕಾರರು ಏಕಾಏಕಿ ನಗರ ಬಸ್ ನಿಲ್ದಾಣಕ್ಕೆ ನುಗ್ಗಿ ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಹೀಗಾಗಿ ಬಸ್ ಸಂಚಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು. ನಿಲ್ದಾಣದ ಮತ್ತೊಂದು ದ್ವಾರದಿಂದ ಕೆಲ ಬಸ್‍ಗಳು ಸಂಚಾರ ಆರಂಭಿಸಿದವಾದರೂ ಮಹಾನಗರ ಪಾಲಿಕೆ ಬಳಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡಲಾಗಿ ಕುಳಿತ ಪರಿಣಾಮ ಕೆಲ ಗಂಟೆಗಳ ಕಾಲ ಬಸ್‍ಗಳು ನಿಂತಲ್ಲೇ ನಿಲ್ಲಬೇಕಾಯಿತು.

ಪ್ರತಿಭಟನಾಕಾರರು ಮಹಾರಾಜ, ಯುವರಾಜ, ಮಹಾರಾಣಿ, ಮರಿಮಲ್ಲಪ್ಪ, ಸದ್ವಿದ್ಯಾ ಸೇರಿದಂತೆ ವಿವಿಧ ಕಾಲೇಜುಗಳಿಗೆ ತೆರಳಿ ತರಗತಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಹೀಗಾಗಿ ಶಾಲಾ-ಕಾಲೇಜುಗಳಿಗೆ ರಸ್ತೆ ಘೋಷಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸ ಲಾಯಿತು. ಬಂದ್ ವೇಳೆ ನಗರ ನಿಲ್ದಾಣದ ಒಳಗೆ ನಿಂತಿದ್ದ ಬಸ್ ಹಾಗೂ ಪುರಭವ ನದ ಮುಂಭಾಗ ತೆರಳುತ್ತಿದ್ದ ಬಸ್ ಮೇಲೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಅದರ ಗಾಜುಗಳು ಪುಡಿ ಪುಡಿಯಾದವು. ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಶಿವರಾಂಪೇಟೆ ಸೇರಿದಂತೆ ಹಲವೆಡೆ ತೆರೆದಿದ್ದ ಹೋಟೆಲ್‍ಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಈ ವೇಳೆ 4 ಹೋಟೆಲ್‍ಗಳ ಕಲ್ಲು ತೂರಾಟ ನಡೆದಿದೆ. ಮೈಸೂರು ನ್ಯಾಯಾಲಯ ದಲ್ಲಿ ವಕೀಲರು ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ವೇದಿಕೆ ಮುಖಂಡ ಲೋಕೇಶ್‍ಕುಮಾರ್ ಮಾದಾಪುರ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ್, ಉಪ್ಪಾರ ಸಮಾಜದ ಅಧ್ಯಕ್ಷ ಲೋಕೇಶ್, ಕುಂಬಾರರ ಸಂಘದ ಅಧ್ಯಕ್ಷ ಪ್ರಕಾಶ್, ಮಡಿವಾಳ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ನಾಯಕ ಸಮಾಜದ ಅಧ್ಯಕ್ಷ ದೇವಪ್ಪನಾಯಕ, ವಿಶ್ವಕರ್ಮ ಸಮಾಜದ ಸಿ.ಟಿ. ಆಚಾರ್ಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ಕನ್ನಡ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.

Translate »