ಅರಿವು ಸಂಸ್ಥೆಯಿಂದ ಮೈಸೂರಲ್ಲಿ ಮಾಸ್ತಿ ಸ್ಮರಣೆ
ಮೈಸೂರು

ಅರಿವು ಸಂಸ್ಥೆಯಿಂದ ಮೈಸೂರಲ್ಲಿ ಮಾಸ್ತಿ ಸ್ಮರಣೆ

June 7, 2018

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 127ನೇ ಜಯಂತಿ ಅಂಗವಾಗಿ ಮೈಸೂರಿನ ಅರಿವು ಸಂಸ್ಥೆ ಚಾಮುಂಡಿಪುರಂ ಸಾರ್ವಜನಿಕ ಗ್ರಂಥಾಲಯದಲ್ಲಿ ಬುಧವಾರ `ಮಾಸ್ತಿ ಕನ್ನಡ ಆಸ್ತಿ’ ಆಯೋಜಿಸಿತ್ತು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾಸ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಮಾಸ್ತಿಯವರ ಮಾತೃಭಾಷೆ ತಮಿಳು. ಆದರೆ, ಅವರ ಹೃದಯ ಭಾಷೆ ಕನ್ನಡವಾಗಿತ್ತು. ಮೂಲತಃ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಕನ್ನಡ ಭಾಷೆಯನ್ನು ಪ್ರೀತಿಸುತ್ತಾ, ಸರ್ಕಾರಿ ಕಚೇರಿಗಳಲ್ಲಿಯೂ ಕನ್ನಡ ಭಾಷೆಯ ಪದಬಳಕೆ ಕಡ್ಡಾಯಕ್ಕೆ ಶ್ರಮಿಸಿದ್ದನ್ನು ಸ್ಮರಿಸಿದರು.

ಮಾಸ್ತಿಯವರು ರಚಿಸಿದ ಹೆಚ್.ಡಿ.ಕೋಟೆ ತಾಲೂಕಿನ ಗುಡ್ಡ ಪ್ರದೇಶವನ್ನು ಪರಿಚಯಿಸುವ `ಕಾಕನಕೋಟೆ’ ಜನಪ್ರಿಯ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಅವರ ಪ್ರತಿಯೊಂದು ಬರಹಗಳು ಸಮಾಜಕ್ಕೆ ಒಂದಲ್ಲ ಒಂದು ಸಂದೇಶ ನೀಡುವಂತಿವೆ ಎಂದರು. ಹಿರಿಯ ಮುಖಂqರಾದ ಕೆ.ರಘುರಾಂ ವಾಜಪೇಯಿ ಮಾತನಾಡಿ, ಮಾಸ್ತಿಯವರ ವ್ಯಕ್ತಿತ್ವ, ಅವರ ಬದುಕು, ಸಾಧನೆ, ಶ್ರಮ, ಆದರ್ಶಗಳನ್ನು ಸ್ಮರಿಸಿ ಅವುಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ರವೀಂದ್ರ, ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಅಜಯ್‍ಶಾಸ್ತ್ರಿ, ಶಾರದಾವಿಲಾಸ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಜೇಂದ್ರಪ್ರಸಾದ್, ಶಿವು, ರವಿತೇಜ ಇನ್ನಿತರರು ಉಪಸ್ಥಿತರಿದ್ದರು.

Translate »